‘ಯೋಧರ ಮೇಲಿನ ಹಲ್ಲೆಗೆ ಪ್ರತಿಯಾಗಿ 100 ಜಿಹಾದಿಗಳನ್ನು ಸಾಯಿಸಿ’- ಗಂಭೀರ್ – ಸೆಹ್ವಾಗ್ ಮಾತಿನೇಟುಗಳು ಹೇಗಿವೆ?

ಡಿಜಿಟಲ್ ಕನ್ನಡ ಟೀಮ್:

ಮೊನ್ನೆಯಷ್ಟೇ ಸಿಆರ್ ಪಿಎಫ್ ಯೋಧರ ಮೇಲೆ ಜಮ್ಮು ಕಾಶ್ಮೀರದಲ್ಲಿನ ಜನರು ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಚುನಾವಣಾ ಕರ್ತವ್ಯಕ್ಕೆ ಬಂದಿದ್ದ ಯೋಧರ ಮೇಲೆ ಕೆಲವು ಕಾಶ್ಮೀರಿ ಯುವಕರು ಹಲ್ಲೆ ಮಾಡಿದ್ದರೂ ಅದಕ್ಕೆ ಪ್ರತಿಏಟು ನೀಡದೇ ಭದ್ರತಾ ಪಡೆ ಸಂಯಮ ಕಾಪಾಡಿತ್ತು. ಇದು ಸಹಜವಾಗಿಯೇ ಭಾರತೀಯರ ಸ್ವಾಭಿಮಾನವನ್ನು ಕೆರಳುವಂತೆ ಮಾಡಿದೆ. ಜಮ್ಮು ಕಾಶ್ಮೀರದಲ್ಲಿ ನಮ್ಮ ಯೋಧರ ಮೇಲೆ ಕೈ ಮಾಡಿರುವವರ ವಿರುದ್ಧ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಪ್ರಕರಣವನ್ನು ಖ್ಯಾತ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಕಟುವಾಗಿ ಟೀಕಿಸುತ್ತಾ ಯೋಧರ ಬೆನ್ನಿಗೆ ನಿಂತಿದ್ದಾರೆ. ಅಷ್ಟೇ ಅಲ್ಲದೆ ನಮ್ಮ ಸೈನಿಕರನ್ನು ಲಘುವಾಗಿ ಕಾಣುವ ಪ್ರತ್ಯೇಕತಾವಾದಿಗಳು ಹಾಗೂ ಜಿಹಾದಿಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ.

ಈ ಘಟನೆಯ ಬಗ್ಗೆ ಟ್ವಿಟರ್ ಮೂಲಕ ಖಂಡನೆ ವ್ಯಕ್ತಪಡಿಸಿರುವ ಈ ಇಬ್ಬರು ಕ್ರಿಕೆಟ್ ತಾರೆಗಳು ಹೇಳಿರುವುದಿಷ್ಟು…

ಗೌತಮ್ ಗಂಭೀರ್: ‘ನಮ್ಮ ಯೋಧರಿಗೆ ಬಿದ್ದ ಒಂದೊಂದು ಏಟಿಗೂ ಪ್ರತಿಯಾಗಿ 100 ಜಿಹಾದಿಗಳನ್ನು ಸಾಯಿಸಬೇಕು. ಯಾರಿಗೆಲ್ಲ ಅಜಾದಿ ಬೇಕೋ ಅವರು ಈಗಲೇ ದೇಶ ಬಿಡಬಹುದು. ಕಾಶ್ಮೀರ ನಮ್ಮದು. ಭಾರತ ವಿರೋಧಿಗಳು ನಮ್ಮ ರಾಷ್ಟ್ರ ಧ್ವಜದ ಹಿನ್ನೆಲೆಯನ್ನು ಮರೆತಿದ್ದಾರೆ. ಕೇಸರಿ ನಮ್ಮ ಬೆಂಕಿಯಂತಹ ಕೋಪವನ್ನು ಸಾರುತ್ತದೆ. ಬಿಳಿ ಬಣ್ಣ ಜಿಹಾದಿಗಳ ಶವವನ್ನು ಮುಚ್ಚುವುದನ್ನು ಬಿಂಬಿಸುತ್ತದೆ ಹಾಗೂ ಹಸಿರು ಭಯೋತ್ಪಾದನೆಯನ್ನು ವಿರೋಧಿಸುತ್ತದೆ’

ವೀರೇಂದ್ರ ಸೆಹ್ವಾಗ್: ‘ಇದು ಸಹಿಸಲು ಅಸಾಧ್ಯವಾದ ವರ್ತನೆ. ನಮ್ಮ ಸಿಆರ್ ಪಿಎಫ್ ಯೋಧರಿಗೆ ಈ ರೀತಿಯಾಗಿ ಹಲ್ಲೆ ಮಾಡಿರುವುದು ಖಂಡನೀಯ. ಈ ದೌರ್ಜನ್ಯ ನಿಲ್ಲಬೇಕು. ಇದು ದುರ್ವರ್ತನೆಯ ಪರಮಾವಧಿಯಾಗಿದೆ’

ಈ ರೀತಿಯ ಆಕ್ರೋಶ ಕೇವಲ ಈ ಇಬ್ಬರದು ಮಾತ್ರವಲ್ಲ, ನಮ್ಮ ಯೋಧರರನ್ನು ತಳಿಸಿದ ವಿಡಿಯೋ ನೋಡಿದ ಪ್ರತಿಯೊಬ್ಬ ಭಾರತೀಯನ ಮನಸ್ಸು ಕೆರಳುತ್ತಿದೆ. ಈ ಇಬ್ಬರ ಮಾತುಗಳು ಎಲ್ಲ ಭಾರತೀಯರ ಅಭಿಪ್ರಾಯವನ್ನು ಬಿಂಬಿಸುತ್ತಿದೆ.

Leave a Reply