ಪುದುಚೇರಿಯಲ್ಲಿ ಜನರ ಕಾಲಿಗೆ ಬೀಳುತ್ತಿದ್ದಾರೆ ಸರ್ಕಾರಿ ಅಧಿಕಾರಿಗಳು… ಯಾಕೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್:

ಈ ಮೇಲಿನ ಚಿತ್ರ ನೋಡಿ ಚುನಾವಣೆಗೆ ಯಾರೋ ಮತಯಾಚಿಸುತ್ತಾ ಜನರ ಕಾಲಿಗೆ ಬೀಳುತ್ತಿದ್ದಾರೆ ಎಂದು ಎಂದು ನೀವು ಭಾವಿಸಿದರೆ ಅದು ತಪ್ಪು. ಸ್ವಚ್ಛ ಭಾರತ ಅಭಿಯಾನದ ಮೂಲಕ ತಮ್ಮ ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಿ ಎಂದು ಮನವಿ ಮಾಡುತ್ತಾ ಸರ್ಕಾರಿ ಅಧಿಕಾರಿಗಳೇ ಜನರ ಕಾಲಿಗೆ ಬೀಳುತ್ತಿರುವ ದೃಶ್ಯ ಇದು.

ಇಷ್ಟು ದಿನಗಳ ಕಾಲ ತಮ್ಮ ಕೆಲಸ ಮಾಡಿಸಿಕೊಳ್ಳಲು ಜನರೇ ಸರ್ಕಾರಿ ಅಧಿಕಾರಿಗಳ ಬಳಿ ಬೇಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಅಧಿಕಾರಿಗಳೇ ಜನರ ಕಾಲಿಗೆ ಬೀಳುತ್ತಿದ್ದಾರೆಯೇ ಎಂದು ನಿಮಗೆ ಆಶ್ಚರ್ಯವಾಗಬಹುದು. ಅದರೆ ಇದು ನಿಜ. ಪುದುಚೆರಿ ನಗರ ಪಾಲಿಕೆ ಅಧಿಕಾರಿಗಳು ಸ್ವಚ್ಛ ಭಾರತ ಯೋಜನೆ ಮೂಲಕ ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ಕಟ್ಟಿಸಿಕೊಳ್ಳುವಂತೆ ಮನವೊಲಿಸಲು ಅವರ ಕಾಲಿಗೆ ಬೀಳುವ ಮೂಲಕ ವಿಭಿನ್ನ ರೀತಿಯಲ್ಲಿ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.

ಈ ನಗರ ಪಾಲಿಕೆ 2017ರ ಅಕ್ಟೋಬರ್ ವೇಳೆಗೆ ಬಯಲು ಶೌಚ ಮುಕ್ತ ಪ್ರದೇಶವನ್ನಾಗಿ ಮಾಡುವುದಾಗಿ 2015ರಲ್ಲಿ ಪಣ ತೊಟ್ಟಿತ್ತು. ಅದಕ್ಕಾಗಿ 952 ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ₹ 10 ಸಾವಿರ ಸಹಾಯ ಧನವನ್ನು ನೀಡಿತ್ತು. ಈ ಫಲಾನುಭವಿಗಳ ಪೈಕಿ ಕೇವಲ 234 ಕುಟುಂಬಗಳು ಮಾತ್ರ ತಮ್ಮ ಮನೆಗಳಲ್ಲಿ ಶೌಚಾಲಯ ಕಟ್ಟಿಸಿದ್ದರು. ಈ ಅಂಶ ಗಮನಕ್ಕೆ ಬರುತ್ತಿದ್ದಂತೆ ಆಯುಕ್ತರಾದ ರಮೇಶ್ ತಮ್ಮ ಅಧಿಕಾರಿಗಳ ತಂಡದೊಂದಿಗೆ ಉಜ್ವಾರ್ ಕರಾಯ್ ಪ್ರದೇಶದಲ್ಲಿನ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹಲವರ ಮನೆಗಳಲ್ಲಿ ಶೌಚಾಲಯ ಇರಲಿಲ್ಲ. ಹೀಗಾಗಿ ಅಧಿಕಾರಿಗಳೇ ಜನರ ಕಾಲಿಗೆ ಬೀಳುವ ಮೂಲಕ ಅವರನ್ನು ಕಸಿವಿಸಿಗೊಳ್ಳುವಂತೆ ಮಾಡಿದರು.

ಈ ವೇಳೆ ಫಲಾನುಭವಿಗಳ ಬಳಿ ಮನವಿ ಮಾಡಿಕೊಂಡ ಆಯುಕ್ತರು, ‘ನಮ್ಮ ಪಾಲಿಕೆ ವ್ಯಾಪ್ತಿ ಪ್ರದೇಶವನ್ನು ಬಯಲುಶೌಚ ಮುಕ್ತವನ್ನಾಗಿ ಮಾಡುವ ಮಾತನ್ನು ನೀಡಿದ್ದೀರಿ. ಅದನ್ನು ಉಳಿಸಿಕೊಳ್ಳಲು ನೀವು ಶೌಚಾಲಯವನ್ನು ಕಟ್ಟಿಸಿಕೊಳ್ಳಿ. ನಿಮ್ಮ ಕಾಲಿಗೆ ಬೇಕಾದರೂ ಬೀಳುತ್ತೇನೆ’ ಎಂಬ ಮನವಿ ಮಾಡಿದರು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಫಲಾನುಭವಿಗಳು ಶೀಘ್ರದಲ್ಲೇ ಶೌಚಾಲಯವನ್ನು ಕಟ್ಟಿಸುವುದಾಗಿ ಜನರು ಒಪ್ಪಿಕೊಂಡಿದ್ದಾರೆ. ರಮೇಶ್ ಅವರ ಈ ಪ್ರಯತ್ನ , ಸರ್ಕಾರದ ಯೋಜನೆಯನ್ನು ನಿರ್ಲಕ್ಷಿಸಿದ್ದ ಜನರನ್ನು ಎಚ್ಚರಿಸುವಲ್ಲಿ ಸಫಲವಾಗಿರುವುದು ವಿಶೇಷ.

(ಚಿತ್ರಕೃಪೆ: ಇಂಡಿಯಾ ಟುಡೆ)

Leave a Reply