ಬೇಸಿಗೆ ರಜೆಯಲ್ಲಿ ಒಂದಿಷ್ಟು ಕಾಸು ಮಾಡಿಕೊಳ್ಳುವುದಕ್ಕೆ ಪ್ರಧಾನಿ ಮೋದಿ ತೆರೆದಿಟ್ಟಿರುವ ಭೀಮ ಮಾರ್ಗ ಇದು…

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಂಬೇಡ್ಕರ್ ಜಯಂತಿ ಆಚರಿಸಿದ್ದು ಭೀಮ್ ಆ್ಯಪ್ ಹಾಗೂ ಸರ್ಕಾರದ ಹಣಕಾಸು ಕ್ರಮಗಳ ವಿವರಣೆಯಲ್ಲಿ. ಅಂಬೇಡ್ಕರ್ ಅವರ ಹೆಸರಿನ ಮೊದಲರ್ಧವಾದ ಭೀಮರಾವ್ ಎಂಬುದನ್ನು ನೆನಪಿಸುವ ಭೀಮ್ ಎಂಬ ಹೆಸರನ್ನು ಈ ಹಿಂದೆಯೇ ಈ ಹಣಕಾಸು ವ್ಯವಹಾರದ ಕಿರುತಂತ್ರಾಂಶಕ್ಕೆ ಇಡಲಾಗಿತ್ತು.

ಇದೀಗ ಜನಸಾಮಾನ್ಯರು ಭೀಮ್ (ಭಾರತ್ ಇಂಟರ್ಫೇಸ್ ಫಾರ್ ಮನಿ) ಹೆಚ್ಚೆಚ್ಚು ಉಪಯೋಗಿಸುವಂತೆ ಉತ್ತೇಜಕ ಕ್ರಮಗಳನ್ನು ಪ್ರಧಾನಿ ಪ್ರಕಟಿಸಿದ್ದಾರೆ. ಅದರಲ್ಲೊಂದು, ಈ ಆ್ಯಪ್ ಅನ್ನು ಬೇರೆಯವರಿಗೆ ಪರಿಚಯಿಸಿ ಬಳಸುವಂತೆ ಮಾಡುವ ಮೂಲಕ ಹಣ ಗಳಿಸಬಹುದಾದ ಅವಕಾಶ. ಯಾರಿಗಾದರೂ ಈ ಆ್ಯಪ್ ಪರಿಚಯಿಸಿ ಅವರು 3 ವಹಿವಾಟುಗಳಿಗೆ ಇದನ್ನು ಉಪಯೋಗಿಸುವಂತೆ ಮಾಡಿದ್ದೇ ಆದಲ್ಲಿ ಪರಿಚಯಿಸಿದವನಿಗೆ ₹10 ಜಮಾ ಆಗುತ್ತದೆ. ಅಂಬೇಡ್ಕರ್ ಅವರ ಜನ್ಮ ದಿನವಾದ ಏಪ್ರಿಲ್ 14ರಿಂದ ಆರಂಭವಾಗುವ ಈ ಉತ್ತೋಜಕ ಯೋಜನೆ ಅಕ್ಟೋಬರ್ 14ರಂದು ಅಂಬೇಡ್ಕರರು ಬೌದ್ಧ ದೀಕ್ಷೆ ಸ್ವೀಕರಿಸಿದ ದಿನಕ್ಕೆ ಮುಕ್ತಾಯವಾಗುತ್ತದೆ.

ಈಗ ರಜಾಕಾಲದಲ್ಲಿರುವ ಯುವ ವಿದ್ಯಾರ್ಥಿ ಸಮೂಹ ಇದನ್ನು ಉಪಯೋಗಿಸಿಕೊಳ್ಳಲಿ ಎಂಬ ಸಲಹೆ ಮೋದಿಯವರದ್ದು. ಇದಕ್ಕೆ ಪ್ರೇರೇಪಿಸುವ ನಿಟ್ಟಿನಲ್ಲಿ ಅವರು ರಸವತ್ತಾದ ನಿದರ್ಶನವನ್ನೂ ನೀಡಿದರು. ‘ಜಗತ್ತಿನಲ್ಲೆಲ್ಲ ಒಂದು ಟ್ರೆಂಡ್ ಇದೆ. ಎಂಥ ಶ್ರೀಮಂತನ ಮಕ್ಕಳೇ ಆದರೂ ಶೈಕ್ಷಣಿಕ ರಜೆ ಸಂದರ್ಭದಲ್ಲಿ ಮತ್ತೆಲ್ಲಿಗಾದರೂ ಹೋಗಿ ಪೆಟ್ರೋಲ್ ತುಂಬಿಸುವುದೋ, ಚಹಾ ಮಾಡುವುದೋ ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಂಡು ಸ್ವಂತ ದುಡಿಮೆಯ ಸುಖ ಕಾಣುತ್ತಾರೆ. ಭಾರತದ ಯುವಕರಲ್ಲೂ ಸಣ್ಣಮಟ್ಟದಲ್ಲಿ ಇಂಥ ಪ್ರಯತ್ನಗಳಿವೆ. ಈಗ ಭೀಮ್ ಆ್ಯಪ್ ನೀಡಿರುವ ಸೌಕರ್ಯ ಉಪಯೋಗಿಸಿಕೊಂಡಿದ್ದೇ ಆದಲ್ಲಿ ದಿನಕ್ಕೆ ಕನಿಷ್ಠ ₹200 ದುಡಿಯಬಹುದು. ಗಮನವಿಟ್ಟು ಪ್ರಯತ್ನಿಸಿದ್ದೇ ಆದಲ್ಲಿ ರಜೆ ಮುಗಿಯುವ ವೇಳೆಗೆಲ್ಲ ₹10-15 ಸಾವಿರದಷ್ಟು ದುಡಿದು ಪಾಲಕರು ಭರಿಸುವ ಶುಲ್ಕದ ಭಾರವನ್ನೂ ಕಡಿಮೆ ಮಾಡಬಹುದು. ನಗದು ಇಳಿಸಿ ಆ ಮೂಲಕ ಕಪ್ಪುಹಣ ತಡೆಗಟ್ಟುವ ಮಹತ್ಕಾರ್ಯಕ್ಕೂ ಕೈಜೋಡಿಸಿದಂತಾಯಿತು’ ಎಂದಿದ್ದಾರೆ ಮೋದಿ.

ಡಿಜಿಧನ್ ಯೋಜನೆಯಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

Leave a Reply