ಇಂದಿನ ಪಂದ್ಯದಲ್ಲಿ ಗೇಲ್ ಆಡ್ತಾರಾ? ಈ ಪ್ರಶ್ನೆಗೆ ಕೊಹ್ಲಿ ಉತ್ತರವೇನು?

ಡಿಜಿಟಲ್ ಕನ್ನಡ ಟೀಮ್:

ಇಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಪರ ನಾಯಕ ವಿರಾಟ್ ಕೊಹ್ಲಿ ಮತ್ತೆ ಕಣಕ್ಕಿಳಿಯುತ್ತಿರುವುದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಮತ್ತೊಂದೆಡೆ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಈ ಪಂದ್ಯದಲ್ಲಿ ಆಡ್ತಾರ ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ವಿರಾಟ್ ಕೊಹ್ಲಿ ಉತ್ತರ ನೀಡಿದ್ದು, ಅದು ಹೀಗಿದೆ…

‘ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿ ನಾನು ಮರಳುತ್ತಿರುವುದರಿಂದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತೆ ತಂಡದ ಬದಲಾವಣೆ ಅಗತ್ಯವಾಗಲಿದೆ. ಬೆಂಗಳೂರಿನ ಅಂಗಣದಲ್ಲಿ ಚೇಸಿಂಗ್ ಸುಲಭ. ಅದರಲ್ಲೂ ಹಗಲಿನಲ್ಲಿ ನಡೆಯುತ್ತಿರುವುದರಿಂದ ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪಡೆ ಹೊಂದುವುದು ಮಹತ್ವದ್ದಾಗಿದೆ. ಕಳೆದ ಹಲವು ಆವೃತ್ತಿಗಳಿಂದ ಕ್ರಿಸ್ ಗೇಲ್ ತಂಡದ ಪಾಲಿಗೆ ಪ್ರಮುಖ ಆಟಗಾರ. ಕಳೆದ ಪಂದ್ಯದಲ್ಲಿ ಎಬಿಡಿ ಮರಳಿದ ಹಿನ್ನೆಲೆಯಲ್ಲಿ ನಾಯಕ ವ್ಯಾಟ್ಸನ್ ಹಾಗೂ ಇಬ್ಬರು ಬೌಲರ್ ಗಳ ಉತ್ತಮ ಪ್ರದರ್ಶನದಿಂದ ಗೇಲ್ ಅವರನ್ನು ಕೈಬಿಡುವ ಪರಿಸ್ಥಿತಿ ಎದುರಾಗಿತ್ತು. ಬೆಂಗಳೂರಿನ ಅಂಗಣದಲ್ಲಿ ನಮ್ಮ ತಂಡದ ಕಾರ್ಯತಂತ್ರಕ್ಕೆ ಅನುಗುಣವಾಗಿಯೇ ಆಡುವ ಹನ್ನೊಂದರಲ್ಲಿ ಬದಲಾವಣೆ ಮಾಡಿ, ಅತ್ಯಂತ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲಾಗುವುದು. ಅದರಲ್ಲೂ ತವರಿನ ಪಂದ್ಯಗಳಲ್ಲಿ ಕ್ರಿಸ್ ಗೇಲ್ ನಮ್ಮ ಪ್ರಮುಖ ಆಯ್ಕೆಯಾಗಿರುತ್ತಾರೆ.’

ಕೊಹ್ಲಿ ಅವರ ಈ ಮಾತುಗಳು ಗೇಲ್ ಅವರು ಕಣಕ್ಕಿಳಿಯುವ ಸೂಚನೆ ನೀಡುತ್ತಿದ್ದು, ಈ ಪಂದ್ಯದಲ್ಲಿ ಸ್ಟಾನ್ಲೆಕ್ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ. ಇನ್ನು ನಾಯಕ ವಿರಾಟ್ ಕೊಹ್ಲಿ ಆಗಮನಕ್ಕೆ ಯಾರು ಜಾಗ ಖಾಲಿ ಮಾಡಲಿದ್ದಾರೆ ಎಂಬ ಪ್ರಶ್ನೆಗೆ ಸಿಗುವ ಉತ್ತರ ವಿಷ್ಠು ವಿನೋದ್ ಅಥವಾ ಸ್ಟುವರ್ಟ್ ಬಿನ್ನಿ. ಕಳೆದ ಮೂರು ಪಂದ್ಯಗಳಲ್ಲಬ ಬಿನ್ನಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲವಾದ್ದರಿಂದ ಆತನನ್ನು ಕೈ ಬಿಟ್ಟು ಯುವ ಆಟಗಾರ ವಿಷ್ಣು ವಿನೋದ್ ಗೆ ಅವಕಾಶ ನೀಡುವುದೇ ಉತ್ತಮ.

ಕ್ರಿಸ್ ಗೇಲ್ ಆರ್ ಸಿಬಿ ತಂಡದ ಮ್ಯಾಚ್ ವಿನ್ನರ್ ಆಗಿದ್ದರೂ ಕಳೆದ ಆವೃತ್ತಿಯಲ್ಲಿ ಫೈನಲ್ ಪಂದ್ಯದ ಹೊರತಾಗಿ ಉಳಿದ ಪಂದ್ಯಗಳಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸಿರಲಿಲ್ಲ. 2011ರಲ್ಲಿ ಆರ್ ಸಿಬಿ ತಂಡಕ್ಕೆ ಸೇರ್ಪಡೆಯಾದ ಗೇಲ್ ,2013ರ ಆವೃತ್ತಿವರೆಗೂ ಆರ್ ಸಿಬಿ ತಂಡವನ್ನು ಏಕಾಂಗಿಯಾಗಿ ಗೆಲ್ಲಿಸಿದ್ದರು. ಈ ಅವಧಿಯಲ್ಲಿ ಆಡಿದ 43 ಪಂದ್ಯಗಳಲ್ಲಿ 4 ಶತಕ ಹಾಗೂ 14 ಅರ್ಧ ಶತಕ ಸೇರಿ 62.09 ರ ಸರಾಸರಿಯಲ್ಲಿ 2,049 ರನ್ ಗಳಿಸಿದ್ದರು. ಆದರೆ 2014ರ ಆವೃತ್ತಿಯಿಂದ ಈಚೆಗೆ ಕ್ರಿಸ್ ಗೇಲ್ ಆರ್ ಸಿಬಿ ಪರ 34 ಪಂದ್ಯಗಳನ್ನು ಆಡಿದ್ದು, ಆ ಪೈಕಿ ಗಳಿಸಿರುವ ರನ್ 946 ಮಾತ್ರ. ಈ ಆವೃತ್ತಿಯಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಗೇಲ್ ಗಳಿಸಿರುವುದು 38 ರನ್. ಇತ್ತೀಚಿನ ದಿನಗಳಲ್ಲಿ ಗೇಲ್ ಮಂಕಾಗಿರುವುದು ಈ ಅಂಕಿ ಅಂಶಗಳ ಮೂಲಕ ಸ್ಪಷ್ಟವಾಗಿದೆ. ಆದರೆ ಗೇಲ್ ಅವರಂತಹ ಆಟಗಾರರಿಗೆ ಮತ್ತೆ ತಮ್ಮ ಫಾರ್ಮ್ ಗೆ ಮರಳಲು ಕೇವಲ ಒಂದು ಇನಿಂಗ್ಸ್ ಸಾಕು. ಹೀಗಾಗಿ ಆದಷ್ಟು ಬೇಗ ಗೇಲ್ ಮತ್ತೆ ಫಾರ್ಮ್ ಗೆ ಮರಳಲ್ಲಿ ಎಂಬುದು ಅಭಿಮಾನಿಗಳ ಆಸೆ.

Leave a Reply