ತಂತ್ರ ಪ್ರತಿತಂತ್ರಗಳ ರೋಚಕ ಕಾದಾಟಕ್ಕೆ ಸಾಕ್ಷಿಯಾಯ್ತು ಆರ್ ಸಿಬಿ- ಮುಂಬೈ ಪಂದ್ಯ, ಬೌಲರ್ ಗಳ ಸ್ನೇಹಿಯಾಯ್ತೆ ಚಿನ್ನಸ್ವಾಮಿ ಪಿಚ್?

ಡಿಜಿಟಲ್ ಕನ್ನಡ ಟೀಮ್:

ಚಿನ್ನಸ್ವಾಮಿ ಅಂಗಳದಲ್ಲಿ ಆರ್ ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗಮನ ಸೆಳೆದಿದ್ದು, ಉಭಯ ತಂಡಗಳ ತಂತ್ರ ಹಾಗೂ ಪ್ರತಿ ತಂತ್ರಗಳ ರೋಚಕ ಕಾದಾಟ. ಬ್ಯಾಟ್ಸ್ ಮನ್ ಗಳಿಗಿಂತ ಬೌಲರ್ ಗಳು ಪರಾಕ್ರಮ ಮೆರೆದರೂ ಅಭಿಮಾನಿಗಳಿಗೆ ರೋಚಕತೆ ನೀಡುವಲ್ಲಿ ಈ ಪಂದ್ಯ ಯಶಸ್ವಿಯಾಯಿತು. ಈ ಕುತೂಹಲಕಾರಿ ಕಾದಾಟದಲ್ಲಿ ಅಂತಿಮವಾಗಿ ಗೆದ್ದಿದ್ದು ಮಾತ್ರ ಮುಂಬೈ ಇಂಡಿಯನ್ಸ್.

ಈ ಅಂಗಣದಲ್ಲಿ ಆರ್ ಸಿಬಿ ವಿರುದ್ಧ ತನ್ನ ಪಾರುಪತ್ಯ ಮುಂದುವರಿಸಿದ ಮುಂಬೈ ಇಂಡಿಯನ್ಸ್ ತಂಡ ಈ ಪಂದ್ಯವನ್ನು 4 ವಿಕೆಟ್ ಗಳ ಅಂತರದಲ್ಲಿ ಗೆದ್ದುಕೊಂಡಿತು. ಅದರೊಂದಿಗೆ ಈ ಮೈದಾನದಲ್ಲಿ ನಲ್ಲಿ ಆರ್ ಸಿಬಿ ವಿರುದ್ಧ ಆಡಿರುವ 9 ಪಂದ್ಯಗಳ ಪೈಕಿ 8 ರಲ್ಲಿ ಜಯ ಸಾಧಿಸಿದೆ. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಂತರ ಆರ್ ಸಿಬಿ ಪಡೆಯನ್ನು 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 142 ರನ್ ಗಳಿಗೆ ನಿಯಂತ್ರಿಸಿತು. ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 18.5 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಪೇರಿಸಿತು.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಎಬಿಡಿ, ಕ್ರಿಸ್ ಗೇಲ್ ರಂತಹ ಮಹಾನ್ ದಾಂಡಿಗರನ್ನು ಹೊಂದಿರುವ ಆರ್ ಸಿಬಿ ತಂಡ ಅಲ್ಪಮೊತ್ತಕ್ಕೆ ಕುಸಿಯುತ್ತದೆ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಆರ್ ಸಿಬಿಯ ದೈತ್ಯ ಬ್ಯಾಟ್ಸ್ ಮನ್ ಗಳನ್ನು ಹೇಗೆ ಕಟ್ಟಿಹಾಕಬೇಕು ಎಂದು ಮೊದಲೇ ರಣತಂತ್ರ ರೂಪಿಸಿಕೊಂಡಿದ್ದ ಮುಂಬೈ ಇಂಡಿಯನ್ಸ್ ಅದನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿತು. ಪರಿಣಾಮ ವಿರಾಟ್ ಕೊಹ್ಲಿ (62 ರನ್, 47 ಎಸೆತ) ಅರ್ಧಶತಕದ ಹೊರತಾಗಿ ಆರ್ ಸಿಬಿಯ ಇತರ ಬ್ಯಾಟ್ಸ್ ಮನ್ ಗಳು ಸದ್ದು ಮಾಡಲಿಲ್ಲ. ಕ್ರಿಸ್ ಗೇಲ್ ರನ್ನು ನಿಯಂತ್ರಿಸಲು ಆರಂಭದಿಂದಲೇ ಹರ್ಭಜನ್ ಅವರನ್ನು ದಾಳಿಗೆ ಇಳಿಸಿದ್ದು, ಎಬಿ ಡಿವಿಲಿಯರ್ಸ್ ರನ್ನು ಕಟ್ಟಿಹಾಕಲು ಕುನಾಲ್ ಪಾಂಡ್ಯರನ್ನು ಬಳಸಿಕೊಂಡಿದ್ದು ಮುಂಬೈ ಇಂಡಿಯನ್ಸ್ ತಂಡದ ತಂತ್ರವಾಗಿತ್ತು. ಕಾರಣ ಈ ಇಬ್ಬರು ಬ್ಯಾಟ್ಸ್ ಮನ್ ಗಳು ಈ ಬೌಲರ್ ಗಳ ವಿರುದ್ಧ ಸತತವಾಗಿ ವೈಫಲ್ಯ ಅನುಭವಿಸುತ್ತಲೇ ಬಂದಿದ್ದಾರೆ. ಈ ಪಂದ್ಯವೂ ಸೇರಿದಂತೆ ಕಳೆದ ಮೂರು ಬಾರಿಯ ಮುಖಾಮುಖಿಯಲ್ಲಿ ಕುನಾಲ್ ಪಾಂಡ್ಯ ಎಸೆತದಲ್ಲೇ ಎಬಿಡಿ ಔಟಾಗಿದ್ದು ಇದಕ್ಕೆ ಸಾಕ್ಷಿ. ಇನ್ನು ಇನಿಂಗ್ಸ್ ನ ಅಂತಿಮ ಓವರ್ ಗಳಲ್ಲಿ ಬಮ್ರಾರನ್ನು ದಾಳಿಗೆ ಇಳಿಸುವ ಮೂಲಕ ಅಂತಿಮ ಘಟ್ಟದಲ್ಲಿ ಆರ್ ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಪರಿಣಾಮ ಅಂತಿಮ ಐದು ಓವರ್ ಗಳಲ್ಲಿ ಆರ್ ಸಿಬಿ ಬ್ಯಾಟ್ಸ್ ಮನ್ ಗಳು ಒಂದೇ ಒಂದು ಬೌಂಡರಿ ದಾಖಲಿಸಲಿಲ್ಲ.

ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರ್ ಸಿಬಿ ಪ್ರತಿತಂತ್ರ ರೂಪಿಸಿತು. ಅದರ ಭಾಗವಾಗಿ ಕೊಹ್ಲಿ ಪ್ರಯೋಗಿಸಿದ್ದು ಬದ್ರೀ ಎಂಬ ಸ್ಪಿನ್ ಬ್ರಹ್ಮಾಸ್ತ್ರ. ಆರ್ ಸಿಬಿಯ ಈ ಅಸ್ತ್ರ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭದಲ್ಲೇ ದೊಡ್ಡ ಶಾಕ್ ನೀಡಿತು. ತಮ್ಮ ಎರಡನೇ ಓವರ್ ನಲ್ಲಿ ಹ್ಯಾಟ್ರಿಕ್ ಪಡೆದ ಬದ್ರಿ, ಮುಂಬೈ ಪಾಲಿಗೆ ವಿಲನ್ ಆದರು. ಪರಿಣಾಮ ಪಂದ್ಯದ ಆರಂಭಿಕ 8 ಓವರ್ ಗಳಲ್ಲಿ 33 ರನ್ ಗಳಿಗೆ ಮುಂಬೈನ ಅರ್ಧ ಬ್ಯಾಟಿಂಗ್ ಪಡೆಯನ್ನು ಪೆವಿಲಿಯನ್ ಗೆ ಕಳುಹಿಸುವಲ್ಲಿ ಆರ್ ಸಿಬಿ ಯಶಸ್ವಿಯಾಯಿತು. 4 ಓವರ್ ಗಳಲ್ಲಿ ಕೇವಲ 9 ರನ್ ಗಳಿಗೆ 4 ವಿಕೆಟ್ ಕಬಳಿಸಿದ ಬದ್ರೀ ಆರ್ ಸಿಬಿ ಪಾಲಿಗೆ ಆಪ್ತ ರಕ್ಷಕನಾದರು. ಮುಂಬೈ ಇಂಡಿಯನ್ಸ್ ವಿರುದ್ಧ ಸಾಧ್ಯವಾದಷ್ಟು ಒತ್ತಡ ಹೇರಬೇಕು ಎನ್ನುವ ಉದ್ದೇಶದೊಂದಿಗೆ ಕೊಹ್ಲಿ ಆರಂಭದಲ್ಲೇ ಬದ್ರೀ ಅವರಿಂದ ನಾಲ್ಕು ಓವರ್ ಮಾಡಿಸಿ ಬಿಟ್ಟರು. ಇದು ಇನಿಂಗ್ಸ್ ಅಂತಿಮ ಹಂತದಲ್ಲಿ ತಪ್ಪು ನಿರ್ಧಾರವಾಗಿ ಪರಿಣಮಿಸಿತು.

ಆರಂಭದಲ್ಲಿ ಆಘಾತ ಅನುಭವಿಸಿದರು ಮಹತ್ವದ ಹಂತದಲ್ಲಿ ಜತೆಯಾದ ಪೊಲಾರ್ಡ್ (70 ರನ್, 47 ಎಸೆತ) ಹಾಗೂ ಕುನಾಲ್ ಪಾಂಡ್ಯ (ಅಜೇಯ 37, 30 ಎಸೆತ) ಉತ್ತಮ ಜತೆಯಾಟದ ಮೂಲಕ ಇನಿಂಗ್ಸ್ ಕಟ್ಟಿದರು. ಅಂತಿಮ ಹಂತದಲ್ಲಿ ಚಾಹಲ್ ಎಸೆತಕ್ಕೆ ಪೊಲಾರ್ಡ್ ಔಟಾದರೂ ಅಷ್ಟು ಹೊತ್ತಿಗಾಗಲೇ ಪೊಲಾರ್ಡ್ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದ್ದರು. ಆಗ ಜತೆಯಾದ ಪಾಂಡ್ಯ ಸಹೋದರರು ತಂಡವನ್ನು ಯಶಸ್ವಿಯಾಗಿ ಜಯದ ದಡಕ್ಕೆ ಸೇರಿಸಿದರು.

ಈ ರೋಚಕ ಪಂದ್ಯದ ನಂತರ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ ಎಂದರೆ, ಬ್ಯಾಟ್ಸ್ ಮನ್ ಗಳ ಸ್ವರ್ಗವಾಗಿದ್ದ ಚಿನ್ನಸ್ವಾಮಿ ಅಂಗಳ ಬೌಲರ್ ಸ್ನೇಹಿಯಾಗಿ ಪರಿವರ್ತನೆಯಾಗಿದೆಯೇ ಎಂದು. ಇದಕ್ಕೆ ಬಲವಾದ ಕಾರಣವಿದೆ. ಕಳೆದ ಆವೃತ್ತಿವರೆಗೂ ಈ ಅಂಗಣದಲ್ಲಿ ರನ್ ಹೊಳೆಯೇ ಹರಿಯುತ್ತಿತ್ತು. ಆದರೆ ಈ ಆವೃತ್ತಿಯ ಆರಂಭಿಕ ಎರಡೂ ಪಂದ್ಯಗಳಲ್ಲೂ ರನ್ ಸುಲಭವಾಗಿ ಹರಿಯುತ್ತಿಲ್ಲ. ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಸಾಧಾರಣ ಮೊತ್ತ ಪೇರಿಸಿದರು ಅದನ್ನು ಯಶಸ್ವಿಯಾಗಿ ರಕ್ಷಿಸಿಕೊಂಡು ಪಂದ್ಯದಲ್ಲಿ ಅಚ್ಚರಿಯ ಗೆಲವು ದಾಖಲಿಸಿತ್ತು. ಇನ್ನು ಈ ಪಂದ್ಯದಲ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಪರದಾಟ ನಡೆಸುವಂತಾಯಿತು. ಈ ಎರಡು ಪಂದ್ಯಗಳಲ್ಲಿ ಪಿಚ್ ನ ವರ್ತನೆ ನೋಡಿದರೆ ಈ ಬಾರಿ ಚಿನ್ನಸ್ವಾಮಿ ಅಂಗಣ ಬೌಲರ್ ಗಳಿಗೂ ಸ್ನೇಹಿಯಾಗುವ ಸ್ಪಷ್ಟ ಸೂಚನೆ ಸಿಕ್ಕಿದೆ. ಇದರಿಂದ ಅಭಿಮಾನಿಗಳು ಮುಂದಿನ ಪಂದ್ಯಗಳಲ್ಲಿ ಇಂತಹುದೇ ರೋಚಕ ಹಣಾಹಣಿ ನಿರೀಕ್ಷಿಸಬಹುದು.

Leave a Reply