ತೆರಿಗೆ ಇಲಾಖೆಯ ನಗದು ಸ್ವಚ್ಛ ಕಾರ್ಯ: 60 ಸಾವಿರ ಮಂದಿಯ ವಿರುದ್ಧ ಐಟಿ ತನಿಖೆ!

ಡಿಜಿಟಲ್ ಕನ್ನಡ ಟೀಮ್:

ನೋಟು ಅಮಾನ್ಯ ನಿರ್ಧಾರದ ನಂತರ ದೇಶದ ನಗದು ಸ್ವಚ್ಛತಾ ಕಾರ್ಯ ಆರಂಭಿಸಿದ್ದ ತೆರಿಗೆ ಇಲಾಖೆ ಈ ಅವಧಿಯಲ್ಲಿ ನಡೆದ ನಗದು ವಹಿವಾಟುಗಳನ್ನು ಪರಿಶೀಲಿಸಿ ಈಗ 60 ಸಾವಿರ ಮಂದಿಯನ್ನು ತನಿಖೆಗೆ ಒಳಪಡಿಸಲು ನಿರ್ಧರಿಸಿದೆ.

ಈ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತ ಹೇಳಿಕೆಯನ್ನು ನೀಡಿದ್ದು, 60 ಸಾವಿರಕ್ಕೂ ಹೆಚ್ಚು ಜನ ಐಟಿ ಅಧಿಕಾರಿಗಳ ತನಿಖೆಯನ್ನು ಎದುರಿಸಲಿದ್ದು, ಆ ಪೈಕಿ 1,300 ಜನರ ವಿರುದ್ಧ ಗಂಭೀರ ಪ್ರಕರಣದ ವಿಚಾರಣೆಯಾಗಲಿದೆ. ಅಷ್ಟೇಅಲ್ಲದೆ 6 ಸಾವಿರ ವಹಿವಾಟುಗಳು ದುಬಾರಿ ಆಸ್ತಿ ಖರೀದಿಗೆ ಸಂಬಂಧಿಸಿದ್ದು, 6600 ಅತಿ ಹೆಚ್ಚು ಹಣ ಠೇವಣಿ ಮಾಡಿದ ಪ್ರಕರಣಗಳಾಗಿವೆ ಎಂದು ತಿಳಿಸಿದೆ.

ತೆರಿಗೆ ಇಲಾಖೆಯು ಇದೇ ವರ್ಷ ಜನವರಿ 31ರಿಂದ ನಗದು ಸ್ವಚ್ಛತಾ ಕಾರ್ಯವನ್ನು ಆರಂಭಿಸಿದ್ದು, ನೋಟು ಅಮಾನ್ಯ ನಿರ್ಧಾರದ ಅವಧಿಯಲ್ಲಿ ಮಾಡಲಾದ ನಗದು ವ್ಯವಹಾರ ಹಾಗೂ ಠೇವಣಿಗಳನ್ನು ಡಿಜಿಟಲ್ ತಾಂತ್ರಿಕ ವ್ಯವಸ್ಥೆಯಿಂದ ಪರಿಶೀಲನೆ ನಡೆಸಲಾಗಿದೆ. ಮೊದಲ ಹಂತದ ಪರಿಶೀಲನೆಯಲ್ಲಿ ಬ್ಯಾಂಕುಗಳ ಖಾತೆಗಳಿಗೆ ಜಮೆಯಾದ ನಗದಿನ ಪ್ರಮಾಣ ಹಾಗೂ ಅದರ ಮೂಲದ ಪರಿಶೀಲನೆ ಮಾಡಲಾಯಿತು. ಈ ಹಂತದಲ್ಲಿ 17,92 ಲಕ್ಷ ಮಂದಿ ತೆರಿಗೆ ಕಟ್ಟದವರು ನಗದು ವ್ಯವಹಾರ ಮಾಡಿರುವುದು ಕಂಡುಬಂದಿದ್ದು, ಹೆಚ್ಚು ಮೌಲ್ಯದ ನಗದು ವಹಿವಾಟು ಮಾಡಿದವರಿಗೆ ಆನ್ ಲೈನ್ ಮೂಲಕ ಸ್ಪಷ್ಟನೆ ನೀಡುವಂತೆ ತಿಳಿಸಲಾಗಿತ್ತು. ಇದಕ್ಕೆ 9.46 ಲಕ್ಷ ಮಂದಿ ತಮ್ಮ ಹಣದ ಮೂಲಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿದ್ದಾರೆ. ಹೀಗೆ ಆನ್ ಲೈನ್ ಮೂಲಕವೇ ತಮ್ಮ ದಾಖಲೆ ಹಾಗೂ ಮಾಹಿತಿಗಳನ್ನು ಒದಗಿಸಿದ ನಂತರ ಆ ಪ್ರಕರಣಗಳನ್ನು ಮುಕ್ತಾಯ ಮಾಡಲಾಗಿದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅಷ್ಟೇ ಅಲ್ಲದೆ, ನವೆಂಬರ್ 9, 2016ರಿಂದ ಫೆಬ್ರವರಿ 28, 2017 ರವರೆಗೆ ತೆರಿಗೆ ಇಲಾಖೆ ಅಧಿಕಾರಿಗಳು 2,362 ಶೋಧ ಕಾರ್ಯ ನಡೆಸಿದ್ದು, ಈ ಹಂತದಲ್ಲಿ ₹ 818 ಕೋಟಿ ಬೆಲೆಬಾಳುವ ವಸ್ತುಗಳು, ₹622 ಕೋಟಿ ಹಣ, ₹ ಘೋಷಣೆಯಾಗದ 9,334 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದೆ. ಈ ಪೈಕಿ 400ಕ್ಕೂ ಹೆಚ್ಚಿನ ಪ್ರಕರಣಗಳ ತನಿಖೆಯನ್ನು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಗೆ ವಹಿಸಲಾಗಿದೆ.

ಸರ್ಕಾರದ ನೋಟು ಅಮಾನ್ಯದ ನಿರ್ಧಾರದಿಂದ ಉತ್ತಮ ಫಲಿತಾಂಶ ಗೋಚರಿಸುತ್ತಿವೆ. ಅದಕ್ಕೆ ಪುಷ್ಟಿ ನೀಡುವಂತೆ 2016-17ನೇ ಆರ್ಥಿಕ ವರ್ಷದಲ್ಲಿ ತೆರಿಗೆ ಆದಾಯ ಪಾವತಿಯಲ್ಲಿ ಶೇ.21.7 ರಷ್ಟು ಹೆಚ್ಚಾಗಿದೆ. ಶೇ.16 ರಷ್ಟು ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ. ಇದು ಕಳೆದ ಐದು ವರ್ಷಗಳಲ್ಲಿ ಇದು ಹೆಚ್ಚಿನ ಏರಿಕೆ. ಜತೆಗೆ ಶೇ.18ರಷ್ಟು ವೈಯಕ್ತಿಕ ತೆರಿಗೆ, ಶೇ.25ರಷ್ಟು ನಿರಂತರ ತೆರಿಗೆ, ಶೇ.22 ರಷ್ಟು ಸ್ವಯಂ ತೆರಿಗೆ ಪಾವತಿಯಲ್ಲಿ ಏರಿಕೆಯಾಗಿರುವುದಾಗಿ ತಿಳಿಸಿದೆ.

Leave a Reply