ಕಲ್ಲು ತೂರಾಟಗಾರನನ್ನು ಜೀಪಿಗೆ ಕಟ್ಟಿದ್ದು ಸರಿ ಅಲ್ಲ ಅನ್ನುವುದಾದರೆ ಇನ್ನೇನು ಸೇನೆ ಗುಂಡಿಕ್ಕಬೇಕಾಗಿತ್ತೇ?

ಡಿಜಿಟಲ್ ಕನ್ನಡ ಟೀಮ್:

ಜಮ್ಮು- ಕಾಶ್ಮೀರದ ಕಲ್ಲು ತೂರಾಟಗಾರನೊಬ್ಬನನ್ನು ಭಾರತೀಯ ಸೇನೆಯು ಜೀಪಿನ ಮುಂದೆ ಕಟ್ಟಿಕೊಂಡು ಹೋಗುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಜಮ್ಮು-ಕಾಶ್ಮೀರದ ಮಾಜಿ  ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಹ ಈ ವಿಡಿಯೋವನ್ನು ಟ್ವಿಟ್ಟರಿನಲ್ಲಿ ಶೇರ್ ಮಾಡಿಕೊಂಡಿದ್ದು, ‘ಇದೊಂದು ಹೇಯ ಕೃತ್ಯ. ಈ ಬಗ್ಗೆ ತನಿಖೆಯಾಗಬೇಕು’ ಎಂದಿದ್ದಾರೆ.

ಈ ವಿಡಿಯೋ ಪ್ರಸಾರಿಸಿರುವ ಸುದ್ದಿವಾಹಿನಿಗಳೆಲ್ಲ, ತಮಗೆ ಮೂಲಗಳಿಂದ ಲಭಿಸಿರುವ ಈ ವಿಡಿಯೋ ದೃಶ್ಯವನ್ನು ಸ್ವತಂತ್ರವಾಗಿ ದೃಢೀಕರಿಸಲಾಗುತ್ತಿಲ್ಲ ಎಂಬ ಟಿಪ್ಪಣಿಯೊಂದಿಗೇ, ಸೇನೆ ಹೀಗೆ ಮಾಡುವುದು ಥರವೇ ಎಂಬ ಪ್ರಶ್ನೆಗಳನ್ನೆತ್ತಿವೆ.

ಈ ಬಗ್ಗೆ ಥರಾವರಿ ಚರ್ಚೆಗಳೆದ್ದಿವೆ. ಚುನಾವಣಾ ಕರ್ತವ್ಯವನ್ನು ನಿಭಾಯಿಸುವುದಕ್ಕೆ ತೆರಳಿದ್ದ ಸಿಆರ್ಪಿಎಫ್ ಯೋಧರ ಮೇಲೆ ಕಾಶ್ಮೀರಿ ಯುವಕರು ದಾಳಿ ಮಾಡಿದ್ದರ ವಿರುದ್ಧ ದೇಶಾದ್ಯಂತ್ಯ ಆಕ್ರೋಶವೆದ್ದಿತ್ತು. ಇದನ್ನು ಬೇರೆಡೆ ತಿರುಗಿಸಲೆಂದೇ ಇಂಥದೊಂದು ವಿಡಿಯೋ ಹರಿದಾಡುತ್ತಿದೆ ಎಂಬ ವಾದವೂ ಇದೆ.

ಅದೇನೇ ಇದ್ದರೂ, ಸಿಆರ್ಪಿಎಫ್ ಯೋಧರ ಮೇಲೆ ಕಾಶ್ಮೀರಿ ಪುಂಡರು ಮಾಡಿದ ಹಲ್ಲೆಯನ್ನು ಖಂಡಿಸದೇ ಉಳಿದವರು, ದಾಖಲೆಗಿರಲಿ ಅಂತ ಲೊಚಗುಟ್ಟಿದವರೆಲ್ಲ ಈಗ ‘ಅಯ್ಯಯ್ಯೋ, ಸೇನೆ ನಾಗರಿಕರನ್ನು ಹೀಗೆಲ್ಲ ನಡೆಸಿಕೊಳ್ಳಬಹುದೇ? ಮಾನವ ಹಕ್ಕಿನ ಕತೆಯೇನು’ ಅಂತ ಬೊಬ್ಬಿರಿಯುತ್ತಿದ್ದಾರೆ.

ಇದು ನಡೆದಿದೆಯೋ, ಇಲ್ಲವೋ ಆ ವಿಷಯ ಹಾಗಿರಲಿ. ಆದರೆ ಇದರ ಉದ್ದೇಶ ಅರ್ಥ ಮಾಡಿಕೊಳ್ಳಬೇಕು. ಪ್ಯಾಲಸ್ತೀನಿನ ಕಲ್ಲು ತೂರಾಟಗಾರರನ್ನು ಎದುರಿಸುವುದಕ್ಕೆ ಇಸ್ರೇಲಿ ಯೋಧರು ಅನುಸರಿಸುವ ನಡೆ ಇದೇ ಆಗಿದೆ. ಜೀಪಿನ ಮುಂದೆ ಕಲ್ಲು ತೂರಾಟಗಾರರ ಪೈಕಿಯೇ ಒಬ್ಬನನ್ನು ಹಿಡಿದು ಕಟ್ಟಿದಾಗ ಕಲ್ಲು ತೂರಾಟವೇ ನಿಂತು ಹೋಗುತ್ತದೆ. ಏಕೆಂದರೆ, ಕಲ್ಲು ತೂರಿದರೆ ಅದು ತಮ್ಮ ಬಾಂಧವನಿಗೇ ಬೀಳುವ ಸಂಕಷ್ಟ ಎದುರಾಗುವುದರಿಂದ.

ಭಾರತೀಯ ಸೇನೆ ಈ ಮಾದರಿಯನ್ನು ಅನುಸರಿಸಿದ್ದು ಹೌದು ಎಂದಾದರೆ ಅಲ್ಲಿನ ಆಯ್ಕೆಗಳು ಸ್ಪಷ್ಟ. ಚುನಾವಣೆಗೆ ಅಡ್ಡಿಪಡಿಸುವುದಕ್ಕೆ ಕಲ್ಲು ತೂರಾಟಕ್ಕೆ ಇಳಿದವರನ್ನು ಏನು ಮಾಡಬೇಕು? ಸೇನೆ ಲಾಟಿ ಹಿಡಿದುಕೊಂಡಿರುವುದಿಲ್ಲ, ಪೆಲ್ಲೆಟ್ ಗನ್ ಸಹ ಇಲ್ಲ. ಅವರ ಕೈಯಲ್ಲಿರುವುದು ರೈಫಲ್ ಗಳಷ್ಟೆ. ಕಲ್ಲು ತೂರಾಟಗಾರರನ್ನು ನಿಯಂತ್ರಿಸುವುದಕ್ಕೆ ರೈಫಲ್ ಉಪಯೋಗಿಸಿದ್ದೇ ಆದರೆ ಪುಂಡರ ಹೆಣ ಬೀಳುತ್ತದೆ. ಆಗ ಅಯ್ಯಯ್ಯೋ ಕಾಶ್ಮೀರಿ ನಾಗರಿಕರನ್ನು ಸೇನೆಯೇ ಕೊಲ್ಲುತ್ತಿದೆ ಎಂಬ ಬೊಬ್ಬೆ ಇದ್ದದ್ದೇ. ಅದೇ ಕಲ್ಲು ತೂರಾಟಗಾರನೊಬ್ಬನನ್ನು ಜೀಪಿನೆದುರು ಕಟ್ಟಿದ್ದೇ ಆದರೆ ಏಕಾಏಕಿ ಕಲ್ಲು ತೂರಾಟ ನಿಂತು ವಾಹನ ಹೋದಲ್ಲೆಲ್ಲ ಕರ್ತವ್ಯ ಸುಸೂತ್ರ! ಯಾರ ಪ್ರಾಣಕ್ಕೂ ಹಾನಿಯಿಲ್ಲ.

ಇಷ್ಟಾಗಿಯೂ ಉಳಿದುಹೋಗುವ ಪ್ರಶ್ನೆ ಎಂದರೆ ನಮ್ಮ ದೇಶದ ಸೇನೆ ನಮ್ಮದೇ ನಾಗರಿಕರನ್ನು ರಕ್ಷಣಾ ಕವಚವಾಗಿ ಉಪಯೋಗಿಸುವುದು ಸರಿಯೇ? ಆದರೆ ಈ ಪ್ರಶ್ನೆಗೆ ಉತ್ತರಿಸುವುದಕ್ಕೆ ಮೊದಲು ಇನ್ನೊಂದು ಪ್ರಶ್ನೆಯನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ. ನಾಗರಿಕರೆನಿಸಿಕೊಳ್ಳುವವರು ನಮ್ಮದೇ ದೇಶದ ಸೇನೆಗೆ ಕಲ್ಲು ತೂರುವುದು ಸರಿಯೇ?

Leave a Reply