ಐಪಿಎಲ್ ಗೆ ಮರಳುವುದೇ ಚೆನ್ನೈ ಸೂಪರ್ ಕಿಂಗ್ಸ್- ರಾಜಸ್ಥಾನ ರಾಯಲ್ಸ್? ಬಿಸಿಸಿಐ ತೆಗೆದುಕೊಂಡ ನಿರ್ಧಾರ ಏನು?

ಡಿಜಿಟಲ್ ಕನ್ನಡ ಟೀಮ್:

ಸ್ಪಾಟ್ ಫಿಕ್ಸಿಂಗ್ ಪ್ರಕರಣದ ನಂತರ ಸುಪ್ರೀಂ ಕೋರ್ಟ್ ನಿಂದ ಎರಡು ವರ್ಷಗಳ ಕಾಲ ನಿಷೇಧದ ಶಿಕ್ಷೆ ಅನುಭವಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಮುಂದಿನ ಆವೃತ್ತಿಯಲ್ಲಿ ಮತ್ತೆ ಮರಳುವುದೇ ಎಂಬ ಅನುಮಾನ ಈ ಎರಡೂ ತಂಡಗಳ ಅಭಿಮಾನಿಗಳ ಮನದಲ್ಲಿತ್ತು. ಈಗ ಈ ಅನುಮಾನಗಳಿಗೆ ತೆರೆಬಿದ್ದಿದ್ದು, ಈ ಎರಡೂ ತಂಡಗಳು ಮತ್ತೆ ಟೂರ್ನಿಗೆ ಮರಳಲು ಬಿಸಿಸಿಐ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಮುಂದಿನ ವರ್ಷದಿಂದ ಐಪಿಎಲ್ ಹೊಸ ಆರಂಭ ಪಡೆಯಲಿದ್ದು, ಮತ್ತೆ ತನ್ನ ಹಳೇಯ ಎರಡು ತಂಡಗಳನ್ನು ಹೊಂದಲಿದೆ. ನಿನ್ನೆಯಷ್ಟೇ ಐಪಿಎಲ್ ನ ಮಾಧ್ಯಮ ಪ್ರಸಾರ ಹಕ್ಕಿನ ಅವಧಿಯನ್ನು 10 ವರ್ಷದಿಂದ ಐದು ವರ್ಷಕ್ಕೆ ಇಳಿಸಿದ್ದ ಬಿಸಿಸಿಐ, ಟೆಂಡರ್ ಆಹ್ವಾನವನ್ನು ಕೊಟ್ಟಿತ್ತು. ಇದರ ಬೆನ್ನಲ್ಲೇ ಈ ಎರಡೂ ತಂಡಗಳು ಟೂರ್ನಿಗೆ ಸ್ವಾಗತಿಸಲು ಬಿಸಿಸಿಐ ನಿರ್ಧರಿಸಿದೆ. 2 ಬಾರಿ ಚಾಂಪಿಯನ್ ಸಿಎಸ್ ಕೆ ಹಾಗೂ 1 ಬಾರಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡಗಳ ಮಾಲೀಕರು 2015ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದ ಈ ತಂಡಗಳನ್ನು 2016 ಹಾಗೂ 2017ರ ಆವೃತ್ತಿಯಲ್ಲಿ ಭಾಗವಹಿಸದಂತೆ ನಿಷೇಧ ಹೇರಲಾಗಿತ್ತು. ಈ ಎರಡು ತಂಡಗಳು ನಿರ್ಗಮಿಸಿದ ಹಿನ್ನೆಲೆಯಲ್ಲಿ ರೈಸಿಂಗ್ ಪುಣೆ ಸೂಪರ್ಜೈಟ್ ಹಾಗೂ ಗುಜರಾತ್ ಲಯನ್ಸ್ ತಂಡಗಳು ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ್ದವು. ಸಿಎಸ್ ಕೆ ಹಾಗೂ ರಾಜಸ್ಥಾನ ತಂಡಗಳು ಮರಳುತ್ತಿರುವ ಹಿನ್ನೆಲೆಯಲ್ಲಿ ಆರ್ ಪಿಎಸ್ ಹಾಗೂ ಗುಜರಾತ್ ತಂಡಗಳ ಭವಿಷ್ಯ ಏನು ಎಂಬುದರ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ.

ಸಿಎಸ್ ಕೆ ತಂಡ ಟೂರ್ನಿಗೆ ಮರಳುತ್ತಿರುವ ಸುದ್ದಿ ಹೊರಬರುತ್ತಿದ್ದಂತೆ ಈ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೆ ಈ ತಂಡಕ್ಕೆ ಮರಳುತ್ತಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ. ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್ ತಂಡ ಹೊಸ ಮಾಲೀಕರನ್ನು ಹೊಂದುವ ಸಾಧ್ಯತೆಗಳು ಹೆಚ್ಚಾಗಿದ್ದು, ಹೊಸ ಹೆಸರಿನೊಂದಿಗೆ ಕಣಕ್ಕಿಳಿಯಲಿದೆ ಎಂಬ ಮಾತುಗಳು ಹರಿದಾಡಿವೆ.

ಒಟ್ಟಿನಲ್ಲಿ ಈ ಎರಡು ತಂಡಗಳು 2018ರ ಆವೃತ್ತಿಯಲ್ಲಿ ಆಡುವುದು ಖಚಿತವಾಗಿದ್ದು, ಅಭಿಮಾನಿಗಳ ಪಾಲಿಗೆ ಸಿಹಿ ಸುದ್ದಿಯಾಗಿದೆ.

Leave a Reply