ಡಿಜಿಧನ್ ಯೋಜನೆಯಲ್ಲಿ ಕೋಟ್ಯಧಿಪತಿಯಾದ ಯೋಗ ವಿದ್ಯಾರ್ಥಿನಿಯದ್ದು, ಗಂಗೆ ಶುದ್ಧಿಗೆ ಗೆದ್ದ ಹಣದ ತ್ಯಾಗ ತಮಿಳು ವ್ಯಾಪಾರಿಯದ್ದು

ಡಿಜಿಟಲ್ ಕನ್ನಡ ಟೀಮ್:

ನೋಟು ಅಮಾನ್ಯ ನಿರ್ಧಾರದ ನಂತರ ದೇಶದಲ್ಲಿ ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀತಿ ಆಯೋಗದ ಮೂಲಕ ಲಕ್ಕಿ ಗ್ರಾಹಕ ಯೋಜನೆ ಹಾಗೂ ಡಿಜಿಧನ್ ವ್ಯಾಪಾರ ಯೋಜನೆ ಎಂಬ ಎರಡು ಯೋಜನೆಯನ್ನು ಡಿಸೆಂಬರ್ 25ರ ಕ್ರಿಸ್ ಮಸ್ ದಿನದಿಂದ ಏಪ್ರಿಲ್ 14 ಅಂಬೇಡ್ಕರ್ ಜಯಂತಿ ವರೆಗೂ ಜಾರಿಗೆ ತಂದಿತ್ತು. ಈಗ ಯೋಜನೆ ಅಂತ್ಯಗೊಂಡಿದ್ದು ಈ ಯೋಜನೆಯಲ್ಲಿ ಬಹುಮಾನ ಗೆದ್ದವರ ಹೆಸರನ್ನು ಪ್ರಕಟಿಸಲಾಗಿದೆ.

ಈ ನಾಲ್ಕು ತಿಂಗಳ ಅವಧಿಯಲ್ಲಿ ಡಿಜಿಟಲ್ ವ್ಯವಸ್ಥೆ ಮೂಲಕ ದೈನಂದಿನ ವ್ಯವಹಾರದ ವಹಿವಾಟಿನಲ್ಲಿ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ಎರಡೂ ಯೋಜನೆಗಳಲ್ಲಿ ಮೂರು ವಿಜೇತರನ್ನು ಆಯ್ಕೆ ಮಾಡಲಾಗಿದೆ. ಲಕ್ಕಿ ಗ್ರಾಹಕ ಯೋಜನೆಯಲ್ಲಿ ಮೊದಲ ಬಹುಮಾನ ₹ 1 ಕೋಟಿ ಲಾತುರ್ ನ ಇಂಜಿನಿಯರಿಂಗ್ ವಿದ್ಯಾರ್ಥಿ ಶ್ರದ್ಧಾ ಮೋಹನ್ ಮೆಂಗಶೆಟ್ಟಿ ಎಂಬ ಯುವತಿ ಪಾಲಾಗಿದೆ. ಈಕೆ ತಾನು ಖರೀದಿಸಿದ ಹೊಸ ಮೊಬೈಲ್ ಫೋನಿನ ಇಎಂಐ ಮೊತ್ತ ₹ 1590 ಅನ್ನು ರುಪೇ ಕಾರ್ಡ್ ಮೂಲಕ ಪಾವತಿ ಮಾಡಿದ್ದಳು. ಈಕೆಯ ಈ ವಹಿವಾಟು ಲಕ್ಕಿ ಡ್ರಾನಲ್ಲಿ ಮೊದಲ ವಿಜೇತೆಯಾಗಿ ಆಯ್ಕೆಯಾಗುವ ಮೂಲಕ, ₹ 1 ಕೋಟಿ ಹಣ ಈಕೆಯ ಪಾಲಾಗಿದೆ.

ಇದೇ ಯೋಜನೆಯ ದ್ವಿತೀಯ ಬಹುಮಾನ ₹ 50 ಲಕ್ಷ, ಗುಜರಾತಿನ ಖಂಭಟ್ ಪ್ರದೇಶದ ಪ್ರಾಥಮಿಕ ಶಾಲಾ ಶಿಕ್ಷಕ ಹಾರ್ದಿಕ್ ಕುಮಾರ್ ಅವರ ಪಾಲಾಗಿದೆ. ಇವರು ರುಪೇ ಕಾರ್ಡ್ ಮೂಲಕ ₹ 1,100ಯ ವಹಿವಾಟು ಮಾಡಿದ್ದರು. ಇನ್ನು ತೃತೀಯ ಬಹುಮಾನ ₹ 25 ಲಕ್ಷ ಉತ್ತರಾಖಂಡದ ಶೆರ್ಪುರ್ ಹಳ್ಳಿಯ ವ್ಯಕ್ತಿ ಭರತ್ ಸಿಂಗ್ ಎಂಬುವವರು ಮಾಡಿದ್ದ ₹ 100 ವಹಿವಾಟಿಗೆ ಒಲಿದಿದೆ.

ವ್ಯಾಪಾರಿಗಳಿಗಾಗಿ ನೀಡಿದ್ದ ಡಿಜಿಧನ್ ವ್ಯಾಪಾರ ಯೋಜನೆಯಲ್ಲಿ ಮೊದಲ ಬಹುಮಾನ ತಮಿಳುನಾಡಿನ ಆಭರಣ ಮಾರಾಟ ಮಳಿಗೆ ಜಿಆರ್ ಟಿ ಜುವೆಲರಿ ಮಾಲೀಕ ಆನಂದ್ ಅನಂತಪದ್ಮನಾಭ ಅವರಿಗೆ ಬಂದಿದೆ. ಇವರು ತಮ್ಮ ಮಳಿಗೆಯಲ್ಲಿ ಗ್ರಾಹಕರೊಬ್ಬರಿಂದ ₹ 300 ಹಣವನ್ನು ಡಿಜಿಟಲ್ ವ್ಯವಸ್ಥೆ ಮೂಲಕ ಪಡೆದಿದ್ದರು. ಇವರಿಗೆ ಮೊದಲ ಬಹುಮಾನ ₹ 50 ಲಕ್ಷ ಸಿಕ್ಕಿದೆ. ಆನಂದ್ ಅವರು ಈ ಬಹುಮಾನಕ್ಕೆ ಆಯ್ಕೆಯಾಗುತ್ತಿದ್ದಂತೆ ಇದನ್ನು ಗಂಗಾ ನದಿ ಶುದ್ಧೀಕರಣಕ್ಕಾಗಿ ದೇಣಿಗೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.  ಇನ್ನು ಥಾಣೆಯ ಬ್ಯೂಟಿ ಪಾರ್ಲರ್ ನ ಮಾಲಿಕರಾದ ರಾಗಿಣಿ ರಾಜೇಂದ್ರ ಉತ್ತೇಕರ್ ಎಂಬುವವರಿಗೆ ದ್ವಿತೀಯ ಬಹುಮಾನ್ ₹ 25 ಲಕ್ಷ ಸಿಕ್ಕಿದೆ. ಇವರು ತಮ್ಮ ಗ್ರಾಹಕರಿಂದ ₹ 510 ಅನ್ನು ಡಿಜಿಟಲ್ ಮೂಲಕ ಪಡೆದಿದ್ದರು. ತೆಲಂಗಾಣದ ಅಮೀರ್ ಪೇಟೆಯ ಬಟ್ಟೆ ಮಳಿಗೆ ಮಾಲೀಕರಾದ 33 ವರ್ಷದ ಶೇಖ್ ರಫಿ ಎಂಬುವವರಿಗೆ ತೃತೀಯ ಬಹುಮಾನ ₹ 12 ಲಕ್ಷ ಬಹುಮಾನ ಸಿಕ್ಕಿದೆ. ಇವರು ತಮ್ಮ ಗ್ರಾಹಕರಿಂದ ₹ 2000 ಹಣವನ್ನು ಡಿಜಿಟಲ್ ಪಾವತಿ ಮೂಲಕ ಪಡೆದಿದ್ದರು.

Leave a Reply