ಈಡನ್ ಗಾರ್ಡನ್ ನಲ್ಲಿ ಮುಂದುವರಿದ ಸನ್ ರೈಸರ್ಸ್ ವೈಫಲ್ಯ, ಉತ್ತಪ್ಪ- ಪಾಂಡೆ ಆಕರ್ಷಕ ಬ್ಯಾಟಿಂಗ್ ನಿಂದ ಅಗ್ರಸ್ಥಾನಕ್ಕೆ ಕೆಕೆಆರ್

ಡಿಜಿಟಲ್ ಕನ್ನಡ ಟೀಮ್:

ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಸತತ ಎರಡು ಪಂದ್ಯಗಳ ಸೋಲು ಆಘಾತ ತಂದಿದೆ. ಈ ಪಂದ್ಯದಲ್ಲಿ 17 ರನ್ ಗಳ ಪರಾಭವ ಅನುಭವಿಸಿದ ಸನ್ ರೈಸರ್ಸ್, ಆ ಮೂಲಕ ಈಡನ್ ಗಾರ್ಡನ್ ಮೈದಾನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸತತ ಐದನೇ ಬಾರಿಗೆ ಸೋಲನುಭವಿಸಿದಂತಾಗಿದೆ. ಮತ್ತೊಂದೆಡೆ ಕೆಕೆಆರ್ ಸತತ ಎರಡು ಜಯದ ಮೂಲಕ ಟೂರ್ನಿಯಲ್ಲಿ ಉತ್ತಮ ಲಯ ಕಂಡುಕೊಂಡಿದೆ.

ಟಾಸ್ ಗೆದ್ದ ಸನ್ ರೈಸರ್ಸ್ ತಂಡ ಚೇಸಿಂಗ್ ಮಾಡುವ ಉದ್ದೇಶದೊಂದಿಗೆ ಮೊದಲು ಆತಿಥೇಯ ತಂಡಕ್ಕೆ ಬ್ಯಾಟಿಂಗ್ ಮಾಡಲು ಆಹ್ವಾನ ನೀಡಿತು. ಕೆಕೆಆರ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಸ್ಪರ್ಧಾತ್ಮಕ 172 ರನ್ ಪೇರಿಸಿತು. ಅದರೊಂದಿಗೆ ಡೇವಿಡ್ ವಾರ್ನರ್ ಅವರ ಈ ನಿರ್ಧಾರ ದುಬಾರಿಯಾಯಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಹೈದರಾಬಾದ್ ಪಡೆಗೆ ಯಾವುದೇ ಆಟಗಾರನಿಂದ ಪ್ರಮುಖವಾದ ಕಾಣಿಕ ಬಾರದ ಹಿನ್ನೆಲೆಯಲ್ಲಿ ವಾರ್ನರ್ ಪಡೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 155 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡದ ಪರ ಕಳೆದ ಪಂದ್ಯದ ಹಿಟ್ ಜೋಡಿ, ಗೌತಮ್ ಗಂಭೀರ್ ಹಾಗೂ ಸುನೀಲ್ ನಾರಾಯಣ್ ಇನಿಂಗ್ಸ್ ಆರಂಭಿಸಿದರು. ಆದರೆ ಈ ಪಂದ್ಯದಲ್ಲಿ ಈ ಇಬ್ಬರೂ ವಿಫಲರಾಗುವ ಮೂಲಕ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಈ ಹಂತದಲ್ಲಿ ಜತೆಯಾದ ರಾಬಿನ್ ಉತ್ತಪ್ಪ (68 ರನ್, 39 ಎಸೆತ) ಹಾಗೂ ಮನೀಷ್ ಪಾಂಡೆ (46 ರನ್, 35 ಎಸೆತ) ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ ತಂಡ ಉತ್ತಮ ರನ್ ಕಲೆ ಹಾಕಲು ನೆರವಾದರು. ನಂತರ ಬೌಲಿಂಗ್ ನಲ್ಲಿಯೂ ಶಿಸ್ತುಬದ್ಧ ದಾಳಿ ಸಂಘಟಿಸಿದ ಕೆಕೆಆರ್, ಹೈದರಾಬಾದ್ ತಂಡದ ಬ್ಯಾಟ್ಸ್ ಮನ್ ಗಳು ಜತೆಯಾಟವಾಡಿ ಇನಿಂಗ್ಸ್ ಕಟ್ಟಲು ಅವಕಾಶ ನೀಡದೆ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಇನ್ನು ಹೈದರಾಬಾದ್ ತಂಡದ ಪ್ರದರ್ಶನ ನೋಡುವುದಾದ್ರೆ, ಭುವನೇಶ್ವರ್ ಕುಮಾರ್ ಮಾರಕ ದಾಳಿಯ ಹೊರತಾಗಿ ಇತರೆ ಬೌಲರ್ ಗಳು ನಿರೀಕ್ಷಿತ ಪ್ರದರ್ಶನ ನೀಡದಿರುವುದು ತಂಡದ ಹಿನ್ನಡೆಗೆ ಕಾರಣವಾಯಿತು. ಇನ್ನು ಬ್ಯಾಟಿಂಗ್ ನಲ್ಲಿ ವಾರ್ನರ್ (26), ಧವನ್ (23), ಯುವರಾಜ್ (26) ಹೀಗೆ ಉತ್ತಮ ಆರಂಭ ಪಡೆದರೂ ಕ್ರೀಸ್ ನಲ್ಲಿ ನಿಂತು ತಂಡವನ್ನು ಮುನ್ನಡೆಸುವಲ್ಲಿ ಎಡವಿದರು. ಈ ಪಂದ್ಯದ ಸೋಲಿನಿಂದಾಗಿ ಸನ್ ರೈಸರ್ಸ್ ತಂಡ 4 ಪಂದ್ಯಗಳಲ್ಲಿ 4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, 4 ಪಂದ್ಯಗಳಿಂದ 6 ಅಂಕಗಳನ್ನು ಪಡೆದ ಕೆಕೆಆರ್ ಅಗ್ರಸ್ಥಾನಕ್ಕೇರಿದೆ.

ಕೆಕೆಆರ್ ಪರ ಆಕ್ರಷಕ ಬ್ಯಾಟಿಂಗ್ ಮಾಡಿದ ರಾಬಿನ್ ಉತ್ತಪ್ಪ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply