ಇಸ್ರೋದ ದಕ್ಷಿಣ ಏಷ್ಯಾ ಉಪಗ್ರಹ ಯೋಜನೆಯಲ್ಲಿ ಪಾಕಿಸ್ತಾನ ಮಾತ್ರ ಹೊರಗೆ, ಸೃಷ್ಟಿಯಲಲ್ಲ ವಿಧ್ವಂಸದಲ್ಲಷ್ಟೇ ಆಸಕ್ತಿ ಇವರಿಗೆ!

ಡಿಜಿಟಲ್ ಕನ್ನಡ ಟೀಮ್:

ಬಹುನಿರೀಕ್ಷಿತ ದಕ್ಷಿಣ ಏಷ್ಯಾ ಉಪಗ್ರಹ ಜಿಸ್ಯಾಟ್-9 ಅನ್ನು ಮೇ 5ರಂದು ಕಕ್ಷೆಗೆ ಸೇರಿಸಲು ಇಸ್ರೋ ನಿರ್ಧರಿಸಿದೆ. ಈ ಬಗ್ಗೆ ಇಸ್ರೋ ಮುಖ್ಯಸ್ಥ ಎ.ಎಸ್.ಕಿರಣ ಕುಮಾರ್ ಮಾಹಿತಿ ಕೊಟ್ಟಿದ್ದು, ಅದು ಹೀಗಿದೆ…

ಮೇ ಮೊದಲ ವಾರದಲ್ಲಿ ಅಂದರೆ 5ರಂದು ಈ ಉಪಗ್ರಹವನ್ನು ಜಿಎಸ್ಎಲ್ ವಿ-09 ರಾಕೆಟ್ ಮೂಲಕ ಕಕ್ಷೆಗೆ ಸೇರಿಸಲಾಗುತ್ತಿದೆ. ಇದೊಂದು ಸಂವಹನ ಉಪಗ್ರಹವಾಗಿದ್ದು, ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಉತ್ತಮ ಸಂಪರ್ಕ ಪಡೆಯಲು ನೆರವಾಗಲಿದೆ. ಪಾಕಿಸ್ತಾನವನ್ನು ಈ ಯೋಜನೆಯಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಈ ಉಪಗ್ರಹದ ಅನುಕೂಲಗಳು ಸಿಗುವುದಿಲ್ಲ.

ಈ ಉಪಗ್ರಹ 2,195 ಕೆ.ಜಿ ತೂಕವನ್ನು ಹೊಂದಿದ್ದು, 12 ಕು ಬ್ಯಾಂಡ್ ಟಾರಾನ್ಸ್ ಪಾಂಡರ್ ಗಳನ್ನು ಹೊಂದಿದೆ. ಮುಂದಿನ 12 ವರ್ಷಗಳ ಕಾಲ ಕಾರ್ಯನಿರ್ವಹಿಸುವಂತೆ ಈ ಉಪಗ್ರಹವನ್ನು ನಿರ್ಮಿಸಲಾಗಿದೆ. 2014ರಲ್ಲಿ ಕಠ್ಮಂಡುವಿನಲ್ಲಿ ನಡೆದ ಸಾರ್ಕ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಉಪಗ್ರಹ ಉಡಾವಣೆಯ ಘೋಷಣೆ ಮಾಡಿದ್ದು, ಇದನ್ನು ‘ಗಿಫ್ಟ್ ಟು ಇಂಡಿಯಾಸ್ ನೈಬರ್ಸ್’ ಎಂದು ಬಣ್ಣಿಸಿದ್ದರು. ಆದರೆ ಪಾಕಿಸ್ತಾನ ತನಗೆ ಈ ಉಪಗ್ರಹದ ಪ್ರಯೋಜನ ಬೇಡ ಎಂದ ಹಿನ್ನೆಲೆಯಲ್ಲಿ ಪಾಕಿಸ್ತಾನವನ್ನು ಈ ಯೋಜನೆಯಿಂದ ಕೈಬಿಡಲಾಯಿತು. ಹೀಗಾಗಿ ಆರಂಭದಲ್ಲಿ ‘ಸಾರ್ಕ್ ಸ್ಯಾಟಲೇಟ್’ ಎಂಬ ಈ ಉಪಗ್ರಹದ ಹೆಸರನ್ನು ಬದಲಾಯಿಸಿ ‘ದಕ್ಷಿಣ ಏಷ್ಯಾ ಉಪಗ್ರಹ’ ಎಂದು ಮರುನಾಮಕರಣ ಮಾಡಲಾಯಿತು. ಈ ಉಪಗ್ರಹ ಉಡಾವಣೆಯಿಂದ ಪಾಕಿಸ್ತಾನ ಹೊರತುಪಡಿಸಿ ಭಾರತ ಹಾಗೂ ದಕ್ಷಿಣ ಏಷ್ಯಾದ ಇತರೆ ನೆರೆ ರಾಷ್ಟ್ರಗಳಿಗೆ ಸಂಪರ್ಕ ವ್ಯವಸ್ಥೆ, ವಿಪತ್ತು ನಿರ್ವಹಣೆ, ರಾಜ್ಯಗಳ ನಡುವಣ ಸಂಪರ್ಕ, ಡಿಟಿಎಚ್ ಹಾಗೂ ವಿಸ್ಯಾಟ್ ಗೆ ಸಂಬಂಧಿಸಿದ ಅನುಕೂಲಗಳು ಸಿಗಲಿವೆ.

Leave a Reply