ರಾಸಾಯನಿಕ ಅಸ್ತ್ರಗಳ ಪ್ರಯೋಗ – ಸಿರಿಯಾ ಕ್ರೌರ್ಯ ನಿಲ್ಲಿಸುವುದು ಯಾವಾಗ?

ಸಿರಿಯಾದಲ್ಲಿ ಆಂತರಿಕ ಯುದ್ಧ ಪ್ರಾರಂಭವಾಗಿ ಇದೀಗ ಏಳನೇ ವರ್ಷಕ್ಕೆ ಕಾಲಿಡುತ್ತಿದೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. 50-60ರ ದಶಕದಲ್ಲಿ ಅಂದಿನ ಸೋವಿಯತ್ ರಷ್ಯ ಮತ್ತು ಅಮೆರಿಕ ಶೀತಲ ಯುದ್ಧದಲ್ಲಿ ತೊಡಗಿದ್ದುದನ್ನು ಜಗತ್ತೇ ಬಲ್ಲದು. ಇದೀಗ ಮತ್ತೆ ಸಿರಿಯಾದ ವಿಚಾರದಲ್ಲಿ ರಷ್ಯ ಮತ್ತು ಅಮೆರಿಕ ತೊಡೆ ತಟ್ಟಿ ನಿಂತಿವೆ. ಹಲವು ರಾಷ್ಟ್ರಗಳ ಧ್ರುವೀಕರಣವಾಗುವ ಸೂಚನೆ ಕಾಣುತ್ತಿದೆ. ಕಳೆದ ಆರು ವರ್ಷಗಳಲ್ಲಿ ಆದದ್ದೇನು? 4,65,000 ಮಂದಿ ಸಿರಿಯಾದ ಪ್ರಜೆಗಳನ್ನು ಹತ್ಯೆಮಾಡಲಾಗಿದೆ. ಹತ್ತು ಲಕ್ಷಕ್ಕೂ ಮಿಗಿಲು ನಾಗರಿಕರು ಗಾಯಗೊಂಡಿದ್ದಾರೆ, ಹನ್ನೆರಡು ದಶಲಕ್ಷ ಪ್ರಜೆಗಳು ಸಿರಿಯ ತೊರೆದು ನೆರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಯೂರೋಪಿನಲ್ಲಿ ಆಶ್ರಯ ಪಡೆಯುವುದೇ ಸುರಕ್ಷಿತ ಎಂಬ ಭಾವನೆ ವಲಸಿಗರಲ್ಲಿ ಮೂಡುತ್ತಿದೆ.

ಇದು ಸಿರಿಯಾದ ಆಂತರಿಕ ಯುದ್ಧವೆಂದು ಲಘುವಾಗಿ ಪರಿಗಣಿಸುವ ಸ್ಥಿತಿಯಲ್ಲ. ಅಧ್ಯಕ್ಷ ಬಷಾರ್ ಆಲ್ ಅಸಾದ್ ಗೆ ರಷ್ಯದ ಬೆಂಬಲವಿದೆ. ಅಮೆರಿಕ, ಬಷಾರ್ ವಿರುದ್ಧ ಸೆಟೆದುನಿಂತಿದೆ. ಈ ನಡುವೆ ಇಸ್ಲಾಮಿಕ್ ಸ್ಟೇಟ್ ಸಿರಿಯಾದಲ್ಲಿ ತನ್ನ ಅಜೆಂಡ ತೂರಿಸುತ್ತಿದೆ. ಸಿರಿಯದಲ್ಲಾಗುತ್ತಿರುವ ವ್ಯಾಪಕ ಹಿಂಸಾಚಾರ, ಸಂಕೀರ್ಣವಾದ ಅಲ್ಲಿನ ಪಾಲಿಟಿಕ್ಸ್ ಕುರಿತು ಬಗೆಬಗೆಯ ವರದಿಗಳು ಮಾಧ್ಯಮದಲ್ಲಿ ಬರುತ್ತಿದೆ. ಯುದ್ಧವೆಂದ ಮೇಲೆ ಅದಕ್ಕೆ ನೀತಿಸಂಹಿತೆ ಎಲ್ಲಿ ಬಂತು? ಎದುರಾಳಿಗಳನ್ನು ಬಗ್ಗುಬಡಿಯಲು ಯಾವ ತಂತ್ರವನ್ನು ಬಳಸಿದರೂ ಅದು ಯುದ್ಧ ನೀತಿಯೇ. ಸಿರಿಯಾದ ಪ್ರಜೆಗಳು ಬಹುತೇಕ ಸುನ್ನಿ ಮುಸ್ಲಿಮರು. ಶಿಯಾ ಮುಸ್ಲಿಂ ಪಂಗಡದ ಒಂದು ಉಪಪಂಗಡ `ಅಲಾವೈಟ್ಸ್’ಗೆ (Alawites) ಸೇರಿದ ಬಷಾರ್ ಸರ್ಕಾರದಿಂದ ಪ್ರಜೆಗಳು ರೋಸತ್ತಿದ್ದಾರೆ ಎಂಬ ಆರೋಪವಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಲ್ಲಿ ಧಕ್ಕೆಯಾಗಿದೆ, ಆರ್ಥಿಕ ಸ್ಥಿತಿಯಂತೂ ಅಧೋಗತಿಗೆ ಇಳಿದಿದೆ. ತುನೀಸಿಯ ಮತ್ತು ಈಜಿಪ್ಟಿನ ಅಧ್ಯಕ್ಷರನ್ನು ಬಂಡುಕೋರರು ಬಗ್ಗಿಸಿದ `ಅರಬ್ ಸ್ಪ್ರಿಂಗ್’ 2001ರ ಕ್ರಾಂತಿ ಸಿರಿಯಾದ ಪ್ರಜೆಗಳು ತಿರುಗಿಬೀಳಲು ಸ್ಫೂರ್ತಿ ಒದಗಿಸಿತು. ಗೋಡೆ ಬರಹಗಳ ಮೂಲಕ ಕ್ರಾಂತಿ ಮಾಡಿದ ವಿದ್ಯಾರ್ಥಿಗಳನ್ನು ಶಿಕ್ಷಿಸಿ ಜೈಲು ಪಾಲು ಮಾಡಲಾಯಿತು. ಅಶಾಂತಿ ಮುಂದುವರಿಯಿತು. ಸಿರಿಯಾ ನೋಡನೋಡುತ್ತಲೇ ರಣರಂಗವಾಯಿತು. ಈಗ ಬಷಾರ್ ಸರ್ಕಾರ ಇಡೀ ಪ್ರಜೆಗಳನ್ನೇ ಬಂಡುಕೋರರೆಂದು ಭಾವಿಸಿ ಬಡಿಯಲು ತೊಡಗಿದೆ.

ಇದೇ ತಿಂಗಳ ನಾಲ್ಕರಂದು ಖಾನ್ ಷೇಕ್ ಹೌನ್ ನಗರದ ಮೇಲೆ ದೊಡ್ಡ ಪ್ರಮಾಣದ ರಾಸಾಯನಿಕ ದಾಳಿಯನ್ನು ಸರ್ಕಾರ ಮಾಡಿತು. ಮಕ್ಕಳು, ಹಿರಿಯರೆನ್ನದೆ ಈ ರಾಸಾಯನಿಕ ಸಿಂಚನಕ್ಕೆ 80 ಮಂದಿ ಬಲಿಯಾದರು. ಸರ್ಕಾರ ಇದು ಬಂಡುಕೋರರ ಕೃತ್ಯ ಎಂದಿತು. ರಷ್ಯ ಸಿರಿಯಾದ ಪರನಿಂತು `ಎಲ್ಲಿದೆ ಪುರಾವೆ?’ ಎಂದಿತು. ಗಾಯಾಳುಗಳನ್ನು ಉಪಚರಿಸುತ್ತಿದ್ದ ಆಸ್ಪತ್ರೆಯ ಮೇಲೆಯೇ ದಾಳಿಮಾಡಿ ಸರ್ಕಾರ ಅಮಾನವೀಯತೆಯನ್ನು ತೋರಿತು (ಬಷಾರ್ ವೃತ್ತಿಯಿಂದ ವೈದ್ಯ!). ಈ ದಾಳಿಯಲ್ಲಿ `ಸಾರಿನ್’ ಎಂಬ ರಾಸಾಯನಿಕವನ್ನು ಬಳಸಿರುವುದಾಗಿ ಟರ್ಕಿ ಶವಪರೀಕ್ಷೆ ಮಾಡಿ ಹೇಳಿದಾಗಲೂ ಸಿರಿಯಾ ಒಪ್ಪಲಿಲ್ಲ. ಖಾನ್ ಷೇಕ್ ಹೌನ್ ನಲ್ಲಿ ಬಂಡುಕೋರರು ರಾಸಾಯನಿಕ ಯುದ್ಧಾಸ್ತ್ರಗಳ ಕಾರ್ಖಾನೆಯಿಂದ ಸಾವಿರಾರು ಟನ್ನು ರಾಸಾಯನಿಕಗಳನ್ನು ಉತ್ಪಾದಿಸಿ ಟರ್ಕಿಗೆ ಒಯ್ಯುತ್ತಿದ್ದರು. ಅದನ್ನು ತಡೆಯಬೇಕಾಗಿತ್ತು ಎಂದು ಅಧ್ಯಕ್ಷ ಸಮರ್ಥಿಸಿಕೊಂಡರು.

ಸಿರಿಯಾದ ಈ ಚಾಳಿ ಇದೇ ಮೊದಲಲ್ಲ. ಅದರ ಉತ್ತರ ಭಾಗದ ಖಾನ್ ಆಲ್ ಅಸಾಲ್ ಪಟ್ಟಣದಲ್ಲಿ ನಾಗರಿಕರು ದಂಗೆ ಎದ್ದಾಗ ಅಲ್ಲಿ ಕ್ಲೋರಿನ್ ಅನಿಲವನ್ನು ಪ್ರಯೋಗಿಸಿ, ನರಳಿ ನರಳಿ ಸಾಯುವಂತೆ ಮಾಡಿತ್ತು. ಅನಂತರ ಯಾವ ಆಂತರಿಕ ಸಮಸ್ಯೆಯಾದರೂ ಸರ್ಕಾರ ರಾಸಾಯನಿಕ ಅಸ್ತ್ರಗಳ ಮೊರೆಹೋಯಿತು. ತನ್ನ ಪ್ರಜೆಗಳನ್ನೇ ತಾನು ಕೊಲ್ಲುವುದನ್ನು ಅದು ಯುದ್ಧವೆಂಬಂತೆ ಕೈಗೆತ್ತಿಕೊಂಡಿತು. ಏಪ್ರಿಲ್ 4ರ ರಾಸಾಯನಿಕ ದಾಳಿಯನ್ನು ವಿಶ್ವಸಂಸ್ಥೆ, ಮಾನವ ಹಕ್ಕು ಸಂಸ್ಥೆ, ಅಷ್ಟೇ ಅಲ್ಲ ಇಡೀ ಜಗತ್ತೇ ಖಂಡಿಸುತ್ತಿದೆ. ಕಳೆದ ಸೆಪ್ಟೆಂಬರ್ ನಲ್ಲಿ ರಾಸಾಯನಿಕ ಯುದ್ಧಾಸ್ತ್ರಗಳ ನಿಷೇಧ ಸಂಸ್ಥೆ (Organisation for Prohibition of Chemical weapons) ಸಿರಿಯಾದಲ್ಲಿ ಸಂಗ್ರಹಿಸಿರುವ ರಾಸಾಯನಿಕ ಅಸ್ತ್ರಗಳ ವರದಿ ಕೊಟ್ಟಿತ್ತು. ಇದನ್ನು ಸಿರಿಯಾ ಅಲ್ಲಗಳೆಯಲಾಗಲಿಲ್ಲ. ವಿಷಾದವೆಂದರೆ ಸಿರಿಯಾ ರಾಸಾಯನಿಕ ಅಸ್ತ್ರ ನಿಷೇಧ ಒಪ್ಪಂದಕ್ಕೆ (Chemical weapons convention-1997) ಸಹಿಹಾಕಿದೆ. ಅದರಂತೆ ರಾಸಾಯನಿಕ ಅಸ್ತ್ರಗಳನ್ನು ಉತ್ಪಾದಿಸುವುದಾಗಲಿ, ಸಂಗ್ರಹಿಸುವುದಾಗಲಿ, ಪ್ರಯೋಗಿಸುವುದಾಗಲಿ ನಿಷಿದ್ಧ. ಈ ಒಪ್ಪಂದದನ್ವಯ ಬಲಾಢ್ಯ ರಾಷ್ಟ್ರಗಳೂ ಸೇರಿದಂತೆ ಜಗತ್ತಿನ ಶೇ. 92 ಪ್ರಮಾಣದ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಈಗಾಗಲೇ ನಾಶಮಾಡಲಾಗಿದೆ. ಇದರ ಉಸ್ತುವಾರಿ ನೋಡಿಕೊಳ್ಳುವುದು ರಾಸಾಯನಿಕ ಯುದ್ಧಾಸ್ತ್ರಗಳ ನಿಷೇಧ ಸಂಸ್ಥೆ. ಇದರ ಶ್ರಮಕ್ಕಾಗಿ 2013ರಲ್ಲಿ ನೊಬೆಲ್ ಪ್ರಶಸ್ತಿ ಕೂಡ ಅದಕ್ಕೆ ಸಂದಿದೆ. ಅಕ್ಟೋಬರ್ 14, 2013ರ ಹೊತ್ತಿಗೆ ಸಿರಿಯಾ ಯಾವ ರಾಸಾಯನಿಕ ಅಸ್ತ್ರಗಳ ದಾಸ್ತಾನನ್ನೂ ಇಟ್ಟುಕೊಳ್ಳುವಂತಿಲ್ಲ ಎಂಬ ವಿಶ್ವಸಂಸ್ಥೆಯ ಷರತ್ತಿಗೆ ಅದು ಬದ್ಧವಾಗಬೇಕಾಗಿತ್ತು. ಆದರೆ ಈಗ ಇಲ್ಲಿ ರಾಸಾಯನಿಕ ಅಸ್ತ್ರಗಳು 1,000 ಟನ್ನಿಗಿಂತ ಹೆಚ್ಚಾಗಿದೆ ಎನ್ನುವುದನ್ನು ಫ್ರಾನ್ಸಿನ ಇಂಟೆಲಿಜೆನ್ಸ್ ಏಜೆನ್ಸಿ ವರದಿಮಾಡಿದೆ.

ಹೆಚ್ಚಿನ ಪಾಲು ರಾಸಾಯನಿಕ ಅಸ್ತ್ರಗಳೆಂದರೆ ಸಲ್ಫರ್, ಮಸ್ಟರ್ಡ್, ಸಾರಿನ್, ಮುಂತಾದವು. ಮೊದಲನೆ ಮಹಾಯುದ್ಧದಲ್ಲೇ ಜರ್ಮನಿ ಏಪ್ರಸ್ ಎಂಬಲ್ಲಿ ಫ್ರಾನ್ಸ್ ಮತ್ತು ಕೆನಡದ ಸೈನಿಕರ ಮೇಲೆ ಕ್ಲೋರಿನ್ ಅನಿಲವನ್ನು ಪ್ರಯೋಗಿಸಿ ನರಳುವಂತೆ ಮಾಡಿ ಏಕಕಾಲಕ್ಕೆ ವ್ಯಕ್ತಿಯ ದೃಷ್ಟಿ, ಶ್ವಾಸಕೋಶ, ಗಂಟಲು, ಮೂಗಿನ ಮೇಲೆ ದಾಳಿಮಾಡಿ ಉಸಿರುಕಟ್ಟುವಂತೆ ಮಾಡಿ ಕೊಂದಿತ್ತು. ಅದೇ ಯುದ್ಧದಲ್ಲಿ ಟಿಯರ್ ಗ್ಯಾಸ್ (Ethyl Bromoacetate) ತುಂಬಿದ ಗ್ರನೇಡ್ ಗಳನ್ನು ಫ್ರೆಂಚ್ ಸೈನ್ಯ ಜರ್ಮನಿಯ ಮೇಲೆ ಎಸೆದಿತ್ತು. ಮುಂದೆ ಇದನ್ನು ಕ್ಲೋರೋಅಸಿಟೇಟ್ ಎಂಬ ರಾಸಾಯನಿಕಕ್ಕೆ ಬದಲಾಯಿಸಿತು.

ಯುದ್ಧಕ್ಕಾಗಿ ಬಳಸುವ ಎಲ್ಲ ರಾಸಾಯನಿಕಗಳು ಒಂದಕ್ಕಿಂತ ಒಂದು ಘೋರ. ಸಾರಿನ್ ಬಣ್ಣವಿಲ್ಲದ, ರುಚಿಯಿಲ್ಲದ, ದ್ರವರೂಪದ ರಾಸಾಯನಿಕ. ಇದನ್ನು ಪ್ರಯೋಗಿಸಿದ ಹತ್ತು ನಿಮಿಷಗಳೊಳಗಾಗಿ ಶ್ವಾಸಕೋಶದ ಸ್ನಾಯು ಒಡನೆಯೇ ಸೆಳೆತವಾಗಿ ಉಸಿರುಕಟ್ಟಿಸುತ್ತದೆ. ರಸಾಯನ ವಿಜ್ಞಾನದಲ್ಲಿ ಇದನ್ನು `ಆಗ್ರ್ಯನೋ ಫಾಸ್ಫರಸ್ ಸಂಯುಕ್ತ’ ಎನ್ನುತ್ತಾರೆ. ಏಪ್ರಿಲ್ 4ರ ದಾಳಿಯಲ್ಲಿ ವಿಮಾನದಲ್ಲಿ ಇದನ್ನು ಖಾನ್ ಷೇಕ್ ಹೌನ್ ನಗರದ ಮೇಲೆ ಸುರಿಯಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ತಕ್ಷಣವೇ ಅಟ್ರೋಪೈನ್, ಆಕ್ಸೈನ್-ಆಂಟಿಡೋಟ್ಸ್ ನೀಡಿದರೆ ಪರಿಣಾಮವನ್ನು ಶಮನಗೊಳಿಸಬಹುದು. ಆದರೆ ಸ್ವಲ್ಪ ಪ್ರಮಾಣದಲ್ಲೂ ಅದು ದೇಹವನ್ನು ಹೊಕ್ಕರೂ ಸಾಕು ಶಾಶ್ವತ ನರಬೇನೆಯನ್ನು ತರುತ್ತದೆ ಎಂಬುದನ್ನು ಯುದ್ಧ ನಿಪುಣರು ಬಲ್ಲರು.

ಇದರಂತೆ ಇನ್ನೊಂದು ಘೋರ ರಾಸಾಯನಿಕ ಸಲ್ಫರ್ ಮಸ್ಟರ್ಡ್. ಇದರ ದಾಳಿಗೆ ಒಡ್ಡಿಕೊಂಡವರಿಗೆ ಮೈಯಲ್ಲ ಬೊಬ್ಬೆಗಳೇಳುತ್ತವೆ, ಬದುಕಿನುದ್ದಕ್ಕೂ ಬಾಧೆ ಕಾಡುತ್ತದೆ. ಹೆಸರು ಮಸ್ಟರ್ಡ್ ಗ್ಯಾಸ್ ಎಂದಿದ್ದರೂ ಇದಕ್ಕೂ ಸಾಸಿವೆಗೂ ಸಂಬಂಧವಿಲ್ಲ. ವಾಸನೆ ಮಾತ್ರ ಬೆಳ್ಳುಳ್ಳಿ, ಈರುಳ್ಳಿ, ಸಾಸಿವೆಯನ್ನು ನೆನಪಿಸುತ್ತದೆ. ಸಾಮಾನ್ಯ ಉಷ್ಣತೆಯಲ್ಲಿ ಇದು ದ್ರವರೂಪಿ. ದಾಳಿ ಮಾಡುವಾಗ ಗಾಳಿಯಲ್ಲಿ ಬಾಷ್ಪ ರೂಪವಾಗಿ ಪ್ರಯೋಗಿಸಲಾಗುತ್ತದೆ. ಒಡನೆಯೇ ಚರ್ಮದಲ್ಲಿ ಬೊಬ್ಬೆ ಏಳುತ್ತದೆ. ಲೋಳೆ ಪೊರೆಯ ಮೇಲೆ ಆಕ್ರಮಣಮಾಡುತ್ತದೆ. ಸಿರಿಯಾ 1993ರಿಂದಲೂ ಇದನ್ನು ಟ್ಯೂಬ್ ಗಳಲ್ಲಿ ತುಂಬಿ ರಾಕೆಟ್ ಮೂಲಕ ಸಿಡಿಸುವ ಯುದ್ಧಾಸ್ತ್ರವಾಗಿ ಬಳಸುತ್ತಿದೆ. ಎಥಿಲೀನ್ ಅನ್ನು ಡೈ ಕ್ಲೋರೈಡ್ ನಲ್ಲಿ ಸಂಸ್ಕರಿಸಿ ಈ ರಾಸಾಯನಿಕವನ್ನು ಸಂಶ್ಲೇಷಣೆ ಮಾಡುತ್ತಾರೆ.

ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿ ಈಗಲೂ ರಾಸಾಯನಿಕ ಯುದ್ಧಾಸ್ತ್ರಗಳ ಕುರಿತು ಸಂಶೋಧನೆ ನಡೆಯುತ್ತಿದೆ ಎಂದು ಓ.ಪಿ.ಸಿ.ಡಬ್ಲ್ಯೂ ವರದಿಮಾಡಿದೆ. ವಿಜ್ಞಾನದ ದುರ್ಬಳಕೆ ಹೇಗಾಗುತ್ತದೆಂಬುದನ್ನು ಸಿರಿಯಾ ತೋರಿಸಿಕೊಟ್ಟು ಮೊದಲನೆ ಮತ್ತು ಎರಡನೆ ಜಾಗತಿಕ ಯುದ್ಧದ ಕರಾಳ ದಿನಗಳನ್ನು ನೆನಪಿಸುತ್ತಿದೆ.

Leave a Reply