ಶಶಿಕಲಾ ಸಹೋದರ ಸಂಬಂಧಿ ದಿನಕರನ್ ವಿರುದ್ಧ ಬಂಡಾಯ, ಜೈಲು ಹಕ್ಕಿಯ ನಿಯಂತ್ರಣ ತಪ್ಪಿ ಹೊರಟಿತೇ ತಮಿಳುನಾಡು ರಾಜಕೀಯ

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಿನಲ್ಲಿ ಅಧಿಕಾರ ಹೊಂದಿರುವ ಎಐಎಡಿಎಂಕೆ ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳು ಮತ್ತೆ ಗರಿಗೆದರಿವೆ. ಪಕ್ಷದ ಉಪ ಕಾರ್ಯದರ್ಶಿ ಹುದ್ದೆಗೆ ಟಿಟಿವಿ ದಿನಕರನ್ ರಾಜಿನಾಮೆ ನೀಡಬೇಕು ಎಂಬ ಬಂಡಾಯ ಕೂಗು ಹೆಚ್ಚುತ್ತಿದೆ.

ಆರ್.ಕೆ ನಗರ ಉಪಚುನಾವಣೆ ಸಂದರ್ಭದಲ್ಲಿ ಸಚಿವರ ಮನೆಗಳ ಮೇಲೆ ಐಟಿ ಅಧಿಕಾರಿಗಳ ದಾಳಿಯ ಶಾಕ್ ನಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಪಕ್ಷದಲ್ಲಿ ಬಂಡಾಯದ ಕೂಗು ಹೆಚ್ಚಾಗಿದೆ. ಐಟಿ ಅಧಿಕಾರಿಗಳ ದಾಳಿ ನಂತರ ಉಪಚುನಾವಣೆ ರದ್ದಾದ ಹಿನ್ನೆಲೆಯಲ್ಲಿ ದಿನಕರನ್ ವಿರುದ್ಧದ ಹಿರಿಯ ನಾಯಕರುಗಳು ತಿರುಗಿ ಬಿದ್ದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜಯಲಲಿತಾ ಅವರ ನಿಧನದಿಂದ ತೆರವಾದ ಆರ್.ಕೆ ನಗರ ಕ್ಷೇತ್ರ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಈ ಚುನಾವಣೆ ಕೇವಲ ವಿಧಾನಸಭೆಯ ಒಂದು ಕ್ಷೇತ್ರದ ಸ್ಪರ್ಧೆಯಷ್ಟೇ ಆಗಿರದೇ, ಜಯಲಲಿತಾ ಅವರ ಅಧಿಕಾರದ ಉತ್ತರಾಧಿಕಾರಿಯನ್ನು ನಿರ್ಧರಿಸಲು ವೇದಿಕೆಯಾಗಿತ್ತು. ಹೀಗಾಗಿ ಶಶಿಕಲಾ ಅವರು ಪಕ್ಷದ ಮೇಲಿನ ತನ್ನ ನಿಯಂತ್ರಣವನ್ನು ಉಳಿಸಿಕೊಳ್ಳಲು ತಮ್ಮ ಸಹೋದರ ಸಂಬಂಧಿ ದಿನಕರನ್ ಅವರನ್ನೇ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದರು.

ಚುನಾವಣೆ ಸಂದರ್ಭದಲ್ಲಿ ಶಶಿಕಲಾ ಆಪ್ತರಾದ ಆರೋಗ್ಯ ಸಚಿವ ಸಿ ವಿಜಯಬಾಸ್ಕರ್ ಹಾಗೂ ಇತರೆ ಮೂವರು ಸಚಿವರ ಮೇನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸಿಕ್ಕ ದಾಖಲೆ ಪ್ರಕಾರ ಈ ಉಪಚುನಾವಣೆಯಲ್ಲಿ ಪ್ರತಿ ಮತದಾರನಿಗೆ ₹ 4ಸಾವಿರ ಹಣ ಹಂಚುತ್ತಿರುವ ವಿಷಯ ಬಹಿರಂಗವಾಯಿತು. ಹೀಗೆ ಹಣದ ಹೊಳೆ ಹರಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಉಪಚುನಾವಣೆಯನ್ನು ರದ್ದು ಮಾಡಿತು. ಈ ಬೆಳವಣಿಗೆಗಳಿಂದಾಗಿ ಪಕ್ಷದ ಕೆಲವು ಹಿರಿಯ ನಾಯಕರು ದಿನಕರ್ ಅವರನ್ನು ಪಕ್ಷದ ಉಪ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳುಯುವಂತೆ ಒತ್ತಡ ಹೇರಲು ಮುಂದಾಗಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಇತ್ತ ಪಕ್ಷದಲ್ಲಿ ಶಶಿಕಲಾ ಹಾಗೂ ಓ ಪನ್ನೀರ್ ಸೆಲ್ವಂ ಬಣಗಳ ನಡುವೆ ಭಿನ್ನಮತ ಇದ್ದರೂ ಯಾರಿಗೂ ಸರ್ಕಾರವನ್ನು ಬೀಳಿಸುವ ಮನಸ್ಸಿಲ್ಲ. ಇಂತಹ ಪರಿಸ್ಥಿತಿಯಲ್ಲೇ ಪಕ್ಷದ ಆಂತರಿಕ ಭಿನ್ನಮತ ಹೆಚ್ಚುತ್ತಿದೆ. ಈ ಬೆಳವಣಿಗೆಗಳಿಂದ ಸರ್ಕಾರ ಪತನವಾಗಿ ಮತ್ತೆ ಚುನಾವಣೆ ಎದುರಾದರೆ ಅದನ್ನು ಎದುರಿಸಲು ವಿರೋಧ ಪಕ್ಷ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಇತರೆ ಸಣ್ಣ ಪಕ್ಷಗಳ ಮನವೊಲಿಸುವ ಕೆಲಸ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ 2019ರ ಲೋಕ ಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಈ ಎಲ್ಲ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಶಶಿಕಲಾ ಅವರ ಬಣಕ್ಕೆ ದೊಡ್ಡ ಸವಾಲು ಎದುರಾಗುವ ಸೂಚನೆಗಳನ್ನು ರವಾನಿಸುತ್ತಿವೆ.

Leave a Reply