ಇದೇ ಮೊದಲ ಬಾರಿಗೆ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಮಹಿಳೆಯರ ಸೇವೆ!

(ಸಾಂದರ್ಭಿಕ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಇಷ್ಟು ದಿನಗಳ ಕಾಲ ಪುರುಷರ ಸೇವೆಯನ್ನಷ್ಟೇ ಪಡೆಯುತ್ತಿದ್ದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಇನ್ನು ಮುಂದೆ ಮಹಿಳಾ ಸಿಬ್ಬಂದಿ ಸೇವೆಯನ್ನು ಪಡೆಯಲಿದೆ. ಇದೇ ಮೊದಲ ಬಾರಿಗೆ ಮೀಸಲು ಪೊಲೀಸ್ ಪಡೆ ವಿಭಾಗಕ್ಕೆ ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಈ ಬಾರಿ 108 ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಸದ್ಯ ಈ ಮಹಿಳಾ ಸಿಬ್ಬಂದಿಗೆ 9 ತಿಂಗಳ ತರಬೇತಿ ನೀಡಲಾಗುತ್ತಿದ್ದು, ಬೆಂಗಳೂರಿನಲ್ಲಿ 64 ಹಾಗೂ ಬೆಳಗಾವಿಯಲ್ಲಿ 44 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಈ ಎಲ್ಲ ಅಭ್ಯರ್ಥಿಗಳು ಪದವಿದರರಾಗಿದ್ದು, ಕೆಲವರು ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದವರಾಗಿರುವುದು ವಿಶೇಷ. ಈ ತರಬೇತಿ ಹಂತದಲ್ಲಿ ದೈಹಿಕ ಕ್ಷಮತೆ ಹೆಚ್ಚಿಸುವ ತರಬೇತಿ ಜತೆಗೆ ಗಲಭೆ ಹಾಗೂ ಉದ್ರಿಕ್ತ ಪರಿಸ್ಥಿತಿಯಲ್ಲಿ ಜನರನ್ನು ನಿಯಂತ್ರಿಸುವುದು ಹೇಗೆ, ಅಂತಹ ಪರಿಸ್ಥಿತಿಯಲ್ಲಿ ಯಾವ ರೀತಿ ಮುಜಾಗ್ರತೆ ವಹಿಸಬೇಕು ಎಂಬ ತರಬೇತಿ ನೀಡಲಾಗುತ್ತಿದೆ.

Leave a Reply