ಡೆವಿಲ್ಸ್ ಅಂಗಳದಲ್ಲಿ ನಡೆಯದ ಕಿಂಗ್ಸ್ ಆಟ, ಭರ್ಜರಿ ಜಯದೊಂದಿಗೆ ಮೂರನೇ ಸ್ಥಾನಕ್ಕೇರಿದ ಜಹೀರ್ ಪಡೆ

ಡಿಜಿಟಲ್ ಕನ್ನಡ ಟೀಮ್:

ಆರಂಭಿಕ ಪಂದ್ಯದಲ್ಲಿ ಸೋಲನುಭವಿಸಿದರೂ ನಂತರ ತವರಿನ ಅಂಗಳದಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಟೂರ್ನಿಯಲ್ಲಿ ತನ್ನ ಲಯ ಕಂಡುಕೊಂಡಿದೆ. ಮತ್ತೊಂದೆಡೆ ಕಿಂಗ್ಸ್ ಇಲೆವೆನ್ ತಂಡ ಸತತ ಎರಡನೇ ಸೋಲಿನಿಂದಾಗಿ ದೊಡ್ಡ ಆಘಾತ ಅನುಭವಿಸಿದೆ.

ದೆಹಲಿಯ ಫಿರೋಜ್ ಶಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಡೇರ್ ಡೆವಿಲ್ಸ್ ಪಡೆ 51 ರನ್ ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿದೆ. ಟಾಸ್ ಗೆದ್ದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 188 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕಲೆ ಹಾಕಿದ್ದು ಕೇವಲ 137 ರನ್ ಮಾತ್ರ. ಈ ಜಯದೊಂದಿಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಭರ್ಜರಿ ನೆಟ್ ರನ್ ರೇಟ್ ನೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಿದೆ. ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 4ರಿಂದ ಐದನೇ ಸ್ಥಾನಕ್ಕೆ ಕುಸಿದಿದೆ.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡಕ್ಕೆ ಆರಂಭಿಕ ಸ್ಯಾಮ್ ಬಿಲ್ಲಿಂಗ್ಸ್ (55 ರನ್, 40 ಎಸೆತ) ಅವರಿಂದ ಉತ್ತಮ ಇನಿಂಗ್ಸ್ ಹೊರಬಂದಿತು. ಉಳಿದಂತೆ ಕೋರೆ ಆ್ಯಂಡರ್ಸನ್ (ಅಜೇಯ 39), ಶ್ರೇಯಸ್ (22) ಅವರಿಂದ ತಕ್ಕ ಸಾಥ್ ದೊರಕಿತು. ಇನ್ನು ಬೌಲಿಂಗ್ ನಲ್ಲಿ ಸಂಘಟಿತ ದಾಳಿ ಮಾಡಿದ ಡೆವಿಲ್ಸ್ ಪಡೆಯಲ್ಲಿ ಮೋರಿಸ್ 3, ನದೀಂ ಹಾಗೂ ಕಮಿನ್ಸ್ ತಲಾ 2 ಮತ್ತು ಮಿಶ್ರಾ ಹಾಗೂ ಆ್ಯಂಡರ್ಸನ್ ತಲಾ 1 ವಿಕೆಟ್ ಪಡೆದರು.

ಆರಂಭಿಕ ಎರಡು ಪಂದ್ಯಗಳನ್ನು ತವರಿನಲ್ಲೇ ಆಡಿದ್ದ ಕಿಂಗ್ಸ್ ತನ್ನ ಬಲಿಷ್ಠ ಬ್ಯಾಟಿಂಗ್ ಪಡೆಯಿಂದ ಭರ್ಜರಿ ರನ್ ಪೇರಿಸಿತ್ತು. ಆದರೆ ಈ ಪಂದ್ಯ ಸೇರಿದಂತೆ ಕಳೆದ ಎರಡು ಪಂದ್ಯಗಳಲ್ಲಿ ಪಂಜಾಬ್ ಬ್ಯಾಟಿಂಗ್ ಪಡೆ ಸೋರಗಿರುವಂತೆ ಕಾಣುತ್ತಿದೆ. ಆರಂಭದಲ್ಲಿ ಆಘಾತ, ನಂತರ ಜತೆಯಾಟದ ಕೊರತೆ ತಂಡದ ಸೋಲಿಗೆ ಕಾರಣವಾಗಿದೆ. ಅಂತಿಮ ಹಂತದಲ್ಲಿ ಅಕ್ಷರ್ ಪಟೇಲ್ (44 ರನ್, 29 ಎಸೆತ) ಹೊರತುಪಡಿಸಿ ಉಳಿದ ಯಾವುದೇ ಆಟಗಾರರಿಂದ ಪ್ರತಿರೋಧ ಎದುರಾಗಲಿಲ್ಲ. ಹೀಗಾಗಿ ಡೆವಿಲ್ಸ್ ಪಡೆ ಪಂದ್ಯದ ಮೇಲೆ ಸುಲಭವಾಗಿ ನಿಯಂತ್ರಣ ಪಡೆದುಕೊಂಡಿತು.

ಆಕರ್ಷಕ ಅರ್ಧಶತಕ ದಾಖಲಿಸಿದ ಬಿಲ್ಲಿಂಗ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply