ಗುಜರಾತ್ ತಂಡದಿಂದ ಫಿಂಚ್ ಹೊರಗುಳಿಯಲು ಕಾರಣ ಏನು ಗೊತ್ತಾ? ಸುರೇಶ್ ರೈನಾ ಕೊಟ್ಟ ಕಾರಣ ಕೇಳಿದ್ರೆ ನೀವೂ ನಗ್ತೀರಿ!

ಡಿಜಿಟಲ್ ಕನ್ನಡ ಟೀಮ್:

ಒಬ್ಬ ಆಟಗಾರ ತಂಡದಿಂದ ಹೊರಗುಳಿಯುವುದು ಯಾವಾಗ? ಎಂದು ಕೇಳಿದರೆ, ಆಟಗಾರ ಕಳಪೆ ಫಾರ್ಮ್ ನಲ್ಲಿದ್ದರೆ, ತಂಡದ ಸಮತೋಲನ ಕಾಯ್ದುಕೊಳ್ಳಲು ಬೇರೆ ಆಟಗಾರನಿಗೆ ಅವಕಾಶ ನೀಡಲು, ಆ ಆಟಗಾರ ಗಾಯಗೊಂಡರೆ, ಫಿಟ್ನೆಸ್ ಇಲ್ಲದಿದ್ದರೆ ಅಥವಾ ಆರೋಗ್ಯದಲ್ಲಿ ಏರುಪೇರು ಆಗಿದ್ದರೆ ತಂಡದಿಂದ ಹೊರಗುಳಿಯುತ್ತಾನೆ ಎಂಬ ಉತ್ತರ ಬರುವುದು ಸಹಜ. ಆದರೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ, ಫಿಂಚ್ ತಂಡದಿಂದ ಹೊರಗುಳಿದಿರುವುದಕ್ಕೆ ಕೊಟ್ಟ ಕಾರಣ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಈ ಪಂದ್ಯದಲ್ಲಿ ಎರಾನ್ ಫಿಂಚ್ ಅವರನ್ನು ತಂಡದಿಂದ ಕೈ ಬಿಡಲಾಗಿದ್ದು, ಜೇಸನ್ ರಾಯ್ ಆ ಸ್ಥಾನದಲ್ಲಿ ಆಡಲಿದ್ದಾರೆ. ಟಾಸ್ ವೇಳೆ ಈ ನಿರ್ಧಾರ ಪ್ರಕಟಿಸಿದ ಗುಜರಾತ್ ತಂಡದ ನಾಯಕ ಸುರೇಶ್ ರೈನಾ ಇದಕ್ಕೆ ಕೊಟ್ಟ ಕಾರಣ ಹೀಗಿತ್ತು… ‘ಎರಾನ್ ಫಿಂಚ್ ಅವರ ಕಿಟ್ ಬ್ಯಾಗ್ ಕಳೆದು ಹೋಗಿದೆ… ಹೀಗಾಗಿ ಅವರು ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಬದಲಿಗೆ ಜೇಸನ್ ರಾಯ್ ಆಡುತ್ತಿದ್ದಾರೆ.’

ಕಿಟ್ ಬ್ಯಾಗ್ ಕಳೆದು ಹೋದ ಕಾರಣದಿಂದಾಗಿ ಫಿಂಚ್ ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಇದು ನಿಜಕ್ಕೂ ದುರಾದೃಷ್ಟ ಎನಿಸಿದರೂ, ಕಾರಣ ಕೇಳಿದರೆ ಆಶ್ಚರ್ಯವಾಗುವುದಂತೂ ಖಂಡಿತಾ. ಆ ಕಿಟ್ ಬ್ಯಾಗ್ ಎಲ್ಲಿ ಕಾಣೆಯಾಯಿತು ಎಂಬ ಬಗ್ಗೆ ಮಾಹಿತಿ ಇಲ್ಲ. ಇನ್ನು ಈ ಪಂದ್ಯದಲ್ಲಿ ಗುಜರಾತ್ ತಂಡದಲ್ಲಿ ಜಕಾಟಿ ಬದಲಿಗೆ ಮುನಫ್ ಪಟೇಲ್ ಕಣಕ್ಕಿಳಿಯಲಿದ್ದಾರೆ.

ಇನ್ನು ಈ ಪಂದ್ಯದ ಮತ್ತೊಂದು ವಿಶೇಷ ಎಂದರೆ ಈ ಪಂದ್ಯದಲ್ಲಿ ಗುಜರಾತ್ ತಂಡಕ್ಕಿಂತ ಮುಂಬೈ ಇಂಡಿಯನ್ಸ್ ತಂಡದಲ್ಲೇ ಹೆಚ್ಚಿನ ಗುಜರಾತಿ ಆಟಗಾರರಿದ್ದಾರೆ. ಮುಂಬೈ ತಂಡದಲ್ಲಿರುವ ಪಾಂಡ್ಯ ಸಹೋದರರು, ಜಸ್ಪ್ರೀತ್ ಬುಮ್ರಾ ಹಾಗೂ ಪಾರ್ಥೀವ್ ಪಟೇಲ್ ಗುಜರಾತಿನ ಆಟಗಾರರಾಗಿದ್ದು, ಪ್ರೇಕ್ಷಕರು ಯಾರನ್ನು ಬೆಂಬಲಿಸುತ್ತಾರೋ ಕಾದು ನೋಡಬೇಕು.

Leave a Reply