ತವರಿನಲ್ಲಿ ಗೆದ್ದು ಅಗ್ರಸ್ಥಾನ ಅಲಂಕರಿಸಿದ ಮುಂಬೈ, ಗುಜರಾತನ್ನು ಬೆಂಬಿಡದೇ ಕಾಡುತ್ತಿದೆ ಸೋಲು

ಡಿಜಿಟಲ್ ಕನ್ನಡ ಟೀಮ್:

ಆರಂಭಿಕ ಕುಸಿತದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ಗಳ ಅಂತರದಲ್ಲಿ ಜಯ ಸಾಧಿಸಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಚೇಸಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಲಯನ್ಸ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ದಾಖಲಿಸಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ರೋಹಿತ್ ಶರ್ಮಾ ಪಡೆ 19.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 177 ರನ್ ಗಳಿಸುವ ಮೂಲಕ ಜಯ ಸಾಧಿಸಿತು.

ಬೃಹತ್ ಮೊತ್ತ ಕಲೆಹಾಕುವ ಗುರಿಯೊಂದಿಗೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಲಯನ್ಸ್ ಮೊದಲ ಓವರ್ ನಲ್ಲಿ ಆರಂಭಿಕ ಡ್ವೈನ್ ಸ್ಮಿತ್ ವಿಕೆಟ್ ಪತನದೊಂದಿಗೆ ಆರಂಭಿಕ ಆಘಾತ ಅನುಭವಿಸಿತು. ಈ ಹಂತದಲ್ಲಿ ಬ್ರೆಂಡನ್ ಮೆಕಲಂ (64 ರನ್, 44 ಎಸೆತ) ಜತೆಗೂಡಿದ ಸುರೇಶ್ ರೈನಾ (28 ರನ್, 29 ಎಸೆತ) ತಂಡಕ್ಕೆ 80 ರನ್ ಗಳ ಜತೆಯಾಟ ನೀಡಿ ತಂಡ ಚೇತರಿಸಿಕೊಳ್ಳುವಂತೆ ಮಾಡಿದರು. ಇನಿಂಗ್ಸ್ ನ ಅಂತಿಮ ಹಂತದಲ್ಲಿ ಸ್ಫೋಟಕ ಆಟವಾಡಿದ ದಿನೇಶ್ ಕಾರ್ತಿಕ್ (ಅಜೇಯ 48 ರನ್, 26 ಎಸೆತ) ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸುವಂತೆ ನೋಡಿಕೊಂಡರು.

ಮುಂಬೈ ತಂಡ ಸಹ ಮೊದಲ ಓವರ್ ನಲ್ಲೇ ಪಾರ್ಥೀವ್ ಪಟೇಲ್ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು.ಮತ್ತೊಬ್ಬ ಆರಂಭಿಕ ಜೋಸ್ ಬಟ್ಲರ್ (26) ಹಾಗೂ ನಿತೀಶ್ ರಾಣ (53 ರನ್, 36 ಎಸೆತ) ತಂಡಕ್ಕೆ 85 ರನ್ ಗಳ ಜತೆಯಾಟವಾಡಿದರು. ಈ ಹಂತದಲ್ಲಿ ಈ ಇಬ್ಬರು ಆಟಗಾರರು ನಿಗದಿತ ಅಂತರದಲ್ಲಿ ಔಟಾದ ಪರಿಣಾಮ ತಂಡ ಮತ್ತೆ ಒತ್ತಡಕ್ಕೆ ಸಿಲುಕಿತು. ಆಗ ಜತೆಯಾದ ನಾಯಕ ರೋಹಿತ್ ಶರ್ಮಾ (ಅಜೇಯ 40, 29 ಎಸೆತ), ಪೊಲಾರ್ಡ್ (39 ರನ್, 23 ಎಸೆತ) 68 ರನ್ ಆಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

Leave a Reply