ಒಡಿಶಾದಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ಬಿತ್ತರಿಸುತ್ತಿರುವ ರಾಷ್ಟ್ರವಾದದ ಸಂಕೇತಗಳ್ಯಾವವು?

ಡಿಜಿಟಲ್ ಕನ್ನಡ ವಿಶೇಷ:

ಒಡಿಶಾದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ‘ರಾಜಕೀಯವಾಗಿ ಈಗ ಸಾಧಿಸಿರುವ ಗೆಲುವುಗಳೇ ಉತ್ತುಂಗವಲ್ಲ. ಪಂಚಾಯತಿಯಿಂದ ಹಿಡಿದು ಪಾರ್ಲಿಮೆಂಟಿನವರೆಗೆ ಬಿಜೆಪಿ ಅಧಿಕಾರದಲ್ಲಿರಬೇಕು’ ಎಂದು ನಾಯಕತ್ವದ ಹಸಿವನ್ನು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯ ಈ ದಿಗ್ವಿಜಯಕ್ಕೆ ದಕ್ಷಿಣ ಭಾರತವೇ ದೊಡ್ಡ ಸವಾಲು. ಹಾಗಂತ ಈಗ ಸಮ್ಮೇಳನ ಸೇರಿರುವ ಒಡಿಶಾ ನೆಲವೂ ಸಂಪೂರ್ಣ ಕೇಸರಿಮಯವಾಗಿಲ್ಲ. ಆಡಳಿತದಲ್ಲಿರುವ ಬಿಜೆಡಿಯನ್ನು ಮಿತ್ರನೆಂದೇ ಪರಿಗಣಿಸಬಹುದಾದರೂ ತಾನೇ ಅಲ್ಲಿ ಅಧಿಕಾರ ಸ್ಥಾನದಲ್ಲಿರುವ ಆಕಾಂಕ್ಷೆ ಬಿಜೆಪಿಗಿದೆ ಹಾಗೂ ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸಿರುವ ವಿದ್ಯಮಾನವೂ ಅದಕ್ಕೆ ಪೂರಕವಾಗಿದೆ.

ಈ ನಿಟ್ಟಿನಲ್ಲಿ ಕಾರ್ಯಕಾರಣಿಯ ಕೇಂದ್ರಬಿಂದು ಪ್ರಧಾನಿ ನರೇಂದ್ರ ಮೋದಿ, ಹಿಂದುತ್ವ ಮತ್ತು ರಾಷ್ಟ್ರವಾದಗಳ ಹಿತಮಿಶ್ರಣದ ಸಂಕೇತವನ್ನು ಅಲ್ಲಿಂದ ರವಾನಿಸಿರುವುದು ಸ್ಪಷ್ಟ. ಬಿಜೆಪಿಯ ಬ್ರಾಂಡ್ ನಿರ್ಮಿತಿಯಲ್ಲಿ ಉಳಿದೆಲ್ಲ ಬಲಗಳ ಜತೆ ಅದಕ್ಕಿರುವ ಅನನ್ಯ ಶಕ್ತಿ ಎಂದರೆ ಜನಪ್ರಿಯ ಕತೆಯೊಂದನ್ನು ಅರಳಿಸುವುದು ಹಾಗೂ ಜನರಿಗೆಲ್ಲ ಹೊಸತೇನೋ ಉತ್ಸಾಹ-ನೋಟಗಳು ಸಿಕ್ಕಂತಾಗುವ ಅಂಥ ಬೆರಗಿಗೆ ಒಳಗೊಳ್ಳುವಂತೆ ಮಾಡುವುದು.

ಒಡಿಶಾದ ಲಿಂಗರಾಜ ದೇವಾಲಯಕ್ಕೆ ಭೇಟಿ ಇತ್ತು ಮೋದಿ ನಮನ ಸಲ್ಲಿಸುತ್ತಲೇ ಅಲ್ಲೊಂದು ಸುಕೋಮಲ ಸನಾತನ ಭಾವ ಜಾಗೃತವಾದಂತಾಯಿತು. 11ನೇ ಶತಮಾನಕ್ಕೆ ಸೇರಿದ ಪುರಾತನ ಮಂದಿರವದು.

ಭಾನುವಾರದ ವಿಶೇಷ ಕಾರ್ಯಕ್ರಮ ಎಂದರೆ ಒಡಿಶಾದ ಪೈಕಾ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರನ್ನು ಸನ್ಮಾನಿಸುವ ಮೂಲಕ ರಾಷ್ಟ್ರವಾದವನ್ನು ಜಳಪಳಿಸಿದ್ದು.

ಆ ಮೂಲಕ, ಮುಖ್ಯವಾಹಿನಿಯಲ್ಲಿ ಅಷ್ಟಾಗಿ ಪ್ರಸ್ತಾಪಿತವಾಗದಿದ್ದ ಇತಿಹಾಸದ ಹೋರಾಟದ ರೋಮಾಂಚನವೊಂದನ್ನು ದೇಶದೆದುರು ಬಿಚ್ಚಿಟ್ಟಂತಾಯಿತು. ಈ ಭಾವಕಂಪನ ಕೇವಲ ಒಡಿಶಾದಲ್ಲಿ ಮಾತ್ರವಲ್ಲದೇ ಎಲ್ಲರನ್ನೂ ತಾಗುವ ಶಕ್ತಿ ಹೊಂದಿದೆ.

ಬ್ರಿಟಿಷರು ಸಿಪಾಯಿ ದಂಗೆ ಎಂದು ಕರೆದ 1857ರ ಹೋರಾಟವನ್ನು ನಾವು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂಬುದಾಗಿ ಗೌರವಿಸುತ್ತೇವೆ. ಆಗಿನ ಕತೆಗಳಲ್ಲಿ ಉತ್ಕರ್ಷವನ್ನು ಕಂಡುಕೊಳ್ಳುತ್ತೇವೆ. ಆದರೆ ಇದಕ್ಕಿಂತ ಮೊದಲೇ 1817ರಲ್ಲಿ ಒಡಿಶಾದ ಬುಡಕಟ್ಟು ಮಂದಿ ಬ್ರಿಟಿಷರ ವಿರುದ್ಧ ದಂಗೆ ಎದ್ದಿದ್ದರು ಎನ್ನುತ್ತದೆ ಇತಿಹಾಸ. ಅದನ್ನು ಪೈಕಾ ಹೋರಾಟ ಎಂದು ಗುರುತಿಸಲಾಗುತ್ತದೆ. ಅಂದು ಬ್ರಿಟಿಷರ ವಿರುದ್ಧ ಸಶಸ್ತ್ರ ದಂಗೆ ಎದ್ದು ಬಲಿದಾನಗೈದವರ ವಂಶಕ್ಕೆ ಸಂಬಂಧಿಸಿದ 16 ಕುಟುಂಬಗಳನ್ನು ಭಾನುವಾರ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಜಾರಿಯಲ್ಲಿರುವಾಗಲೇ ಸನ್ಮಾನಿಸಿದ್ದಾರೆ ಪ್ರಧಾನಿ ಮೋದಿ. ಪೈಕಾ ಹೋರಾಟಕ್ಕೆ ಈಗ 200 ವರ್ಷಗಳು ತುಂಬಿವೆ ಎಂಬುದೂ ಒಂದು ವಿಶೇಷ.

ಆಗಿನ ಕುರ್ದಾ ಸಾಮ್ರಾಜ್ಯಕ್ಕೆ ಮಿಲಿಟರಿ ಸೇವೆ ಒದಗಿಸುತ್ತಿದ್ದವರು ಪೈಕಾ ಸಮುದಾಯದವರು. ಇವರ ಸೇವೆಗೆ ಪ್ರತಿಯಾಗಿ ರಾಜರಿಂದ ಇವರಿಗೆಲ್ಲ ಒಂದಿಷ್ಟು ಕೃಷಿ ಭೂಮಿಯನ್ನು ನೀಡಲಾಗಿತ್ತು. ಅದಕ್ಕೆ ಯಾವುದೇ ಕಂದಾಯವಿರಲಿಲ್ಲ. ಯಾವಾಗ ಇಲ್ಲಿ ಈಸ್ಟ್ ಇಂಡಿಯಾ ಕಂಪನಿ ತನ್ನ ಪಾರಮ್ಯ ಸ್ಥಾಪಿಸಿತೋ ಆಗ ಈ ಸೌಕರ್ಯವನ್ನು ಕಿತ್ತುಕೊಂಡಿತು. ಇದರ ವಿರುದ್ಧ ಶಸ್ತ್ರ ಸಹಿತ ಹೋರಾಟ ನಡೆಸಿದರು ಪೈಕಾಗಳು.

ಈ ಬಗ್ಗೆ ಬಜೆಟ್ ಭಾಷಣದಲ್ಲೇ ಪ್ರಸ್ತಾಪಿಸಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲಿನ ಒಡಿಶಾ ಹೋರಾಟಕ್ಕೆ ಇನ್ನೂರು ವರ್ಷಗಳು ತುಂಬಲಿದ್ದು, ಇದನ್ನು ಸರ್ಕಾರ ಸೂಕ್ತವಾಗಿ ಆಚರಿಸಲಿದೆ’ ಎಂದಿದ್ದರು.

ಬೇರುಮಟ್ಟದಲ್ಲಿ ಭಾರತವನ್ನು ರಾಜಕೀಯವಾಗಿ ಗೆಲ್ಲಲು ಹೊರಟಿರುವ ಬಿಜೆಪಿ, ಗತ ವೈಭವದ ಕತೆಗಳನ್ನೆಲ್ಲ ಮೊಗೆದು ರಾಷ್ಟ್ರವಾದವನ್ನು ಚಿಮ್ಮಿಸುತ್ತಿದೆ.

Leave a Reply