ಸಿಗ್ನಲ್ ಗಳಲ್ಲಿ ಹಣಕ್ಕಾಗಿ ಕೈಚಾಚಿದರೂ, 200 ಮರಗಳನ್ನು ದತ್ತು ಪಡೆದಿರುವ ಮುಂಬೈನ ತೃತೀಯ ಲಿಂಗಿಗಳ ಪರಿಸರ ಕಾಳಜಿ ಸ್ಫೂರ್ತಿದಾಯಕ!

(ಸಾಂದರ್ಭಿಕ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ತೃತೀಯ ಲಿಂಗಿಗಳು… ನಮ್ಮ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಅವಕಾಶ ವಂಚಿತ ಒಂದು ವರ್ಗ. ಈಗಲೂ ಇವರನ್ನು ನೋಡಿದರೇ ನಮ್ಮ ಸಮಾಜದಲ್ಲಿ ಏನೋ ಒಂದು ಭಯ, ಅನುಮಾನ, ತಾತ್ಸಾರ. ಆದರೆ ಇದೇ ತೃತೀಯ ಲಿಂಗಿಗಳು ಅನೇಕ ಬಾರಿ ಇತರರಿಗೆ ಮಾದರಿಯಾಗಿ ನಿಂತಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಈಗ ಈ ಸಾಲಿಗೆ ಮತ್ತೊಂದು ಸೇರ್ಪಡೆ ಮುಂಬೈನ ತೃತೀಯ ಲಿಂಗಿಗಳ ಗುಂಪು.

ತೃತೀಯ ಲಿಂಗಿಗಳು ಎಂದರೆ ನಮ್ಮ ಮುಂದೆ ಬರುವುದು ಸಿಗ್ನಲ್ ಗಳಲ್ಲಿ ಹಣಕ್ಕಾಗಿ ಬೇರೆಯವರ ಮುಂದೆ ಕೈ ಚಾಚುವ ದೃಶ್ಯ. ಹೀಗೆ ತಮ್ಮ ಹೊಟ್ಟೆ ಪಾಡಿಗೆ ಬೇರೆ ಉದ್ಯೋಗ ಸಿಗದೇ ಸಿಗ್ನಲ್ ಗಳಲ್ಲಿ ಬಿಕ್ಷೆ ಬೇಡುವ ತೃತೀಯ ಲಿಂಗಿಗಳು ತಮಗೆ ಸಿಗುವ ಮೂರು ಮತ್ತೊಂದು ಕಾಸಿನಲ್ಲೂ ಇತರರಿಗೆ ಸ್ಫೂರ್ತಿಯಾಗುವ ಕೆಲಸ ಮಾಡಿದ್ದಾರೆ. ಅದೇನೆಂದರೆ, ಇವರು ಮುಂಬೈನಲ್ಲಿ ಸುಮಾರು 200 ಮರಗಳನ್ನು ದತ್ತು ಪಡೆದು, ಕೊಡಲಿ ಏಟಿಗೆ ಅವು ಬಲಿಯಾಗುವುದನ್ನು ತಪ್ಪಿಸಿದ್ದಾರೆ. ಈ ಮರಗಳಿಗೆ ಎದುರಾಗಿದ್ದ ಅಪಾಯ ಏನು? ಇವರು ಈ ಮರಗಳನ್ನು ದತ್ತು ಪಡೆದು ರಕ್ಷಿಸಿದ್ದು ಹೇಗೆ ಎಂಬ ಕಥೆ ಇಲ್ಲಿದೆ ನೋಡಿ…

ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ನಗರಿ ಮುಂಬೈನಲ್ಲಿ ಮೂರನೇ ಹಂತದ ಮೆಟ್ರೋ ಕಾರಿಡಾರ್ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಯುತ್ತಿತ್ತು. ದಹಿಸಾರ್ ಪ್ರದೇಶದಿಂದ ಅಂಧೇರಿ ವರೆಗಿನ ಈ ಮಾರ್ಗದ ಕಾರಿಡಾರ್ ನಿರ್ಮಾಣಕ್ಕೆ ಸಾವಿರಾರು ಮರಗಳಿಗೆ ಕೊಡಲಿ ಏಟು ಬಿಳುವ ಆತಂಕ ಎದುರಾಗಿತ್ತು. ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ಮಾರಣಹೋಮ ನಡೆಸಿ ಪರಿಸರ ಹಾಳಾಗುವುದನ್ನು ತಪ್ಪಿಸಲು ಇಲ್ಲಿನ ನಾಗರೀಕರು ಮುಂದೆ ಬಂದರು. ಆಗ ಈ ಮರಗಳನ್ನು ಜನರು ದತ್ತು ಪಡೆಯುವ ಅಭಿಯಾನ ಆರಂಭಿಸಿದರು. ಈ ಒಂದು ಅಭಿಯಾನಕ್ಕೆ ಜನರಿಂದ ದೊಡ್ಡ ಮಟ್ಟದ ಪ್ರತಿಕ್ರಿಯೆ ಬಂದಿದ್ದು, ದೊಂಬಿವ್ಲಿ, ಘಟ್ಕೊಪರ್ ಮತ್ತು ವಾದಲಾ ಪ್ರದೇಶಗಳ ಜನರು ಮರಗಳನ್ನು ದತ್ತು ಪಡೆಯಲು ಮುಂದಾದರು. ಅದೇ ರೀತಿ ಈ ತೃತೀಯ ಲಿಂಗಿಗಳು ಈ ಮರಗಳನ್ನು ದತ್ತು ಪಡೆದರು. ದಾದರ್ ಮತ್ತು ಚೆಂಬೂರ್ ಪ್ರದೇಶದ 10-15 ತೃತೀಯ ಲಿಂಗಿಗಳ ಗುಂಪು ಕಂಡಿವ್ಲಿಯಿಂದ ಮಲಾಡ್ ಪ್ರದೇಶದವರೆಗಿನ 200 ಮರಗಳನ್ನು ದತ್ತು ಪಡೆದಿದ್ದಾರೆ. ಕಳೆದ 15 ದಿನಗಳಲ್ಲಿ ಸುಮಾರು 1000 ನಾಗರೀಕರು ಸುಮಾರು 5000 ಮರಗಳನ್ನು ದತ್ತುಪಡೆದು ದೊಡ್ಡ ಹೋರಾಟವನ್ನೇ ಮಾಡಿದ್ದಾರೆ.

ಈ ಹೋರಾಟದಲ್ಲಿ ನಮಗೆ ಎರಡು ಅಂಶಗಳು ಸ್ಫೂರ್ತಿಯಾಗಿವೆ. ಮೊದಲನೆಯದು ನಗರಗಳಲ್ಲಿ ವಾಸಿಸುವ ನಾಗರೀಕರು ತಮ್ಮ ಸುತ್ತಮುತ್ತಲ ಪರಿಸರವನ್ನು ಕಾಪಾಡಿಕೊಳ್ಳವ ನಿಟ್ಟಿನಲ್ಲಿ ಸಂಘಟಿತವಾಗಿ ತಮ್ಮ ಜವಾಬ್ದಾರಿ ನಿಭಾಯಿಸಿದ್ದು, ಎರಡನೇಯದು ತಾವೇ ಬೇರೊಬ್ಬರ ಮುಂದೆ ಕೈಚಾಚಿ ಹಣ ಪಡೆದು ಜೀವನ ನಡೆಸುತ್ತಿದ್ದರೂ, ಮರಗಳನ್ನು ದತ್ತು ಪಡೆದು ಅವುಗಳನ್ನು ಕಾಪಾಡುವ ಜವಾಬ್ದಾರಿ ಪಡೆದು ಸಮಾಜಕ್ಕೆ ತಮ್ಮ ಕಾಣಿಕೆಯನ್ನು ನೀಡುತ್ತಿರುವುದು.

Leave a Reply