ತೆಲಂಗಾಣದಲ್ಲಿ ಮುಸ್ಲಿಂ- ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಳವಾಗುತ್ತಿರುವುದೇಕೆ? ಇಲ್ಲಿದೆ ನೀವು ತಿಳಿಯಬೇಕಿರುವ ಪ್ರಮುಖ ಮಾಹಿತಿ

ಡಿಜಿಟಲ್ ಕನ್ನಡ ಟೀಮ್:

ತೆಲಂಗಾಣ ರಾಜ್ಯದಲ್ಲಿ ಟಿಎಸ್ ಆರ್ ಸರ್ಕಾರವು ಮುಸ್ಲಿಂ ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯದವರಿಗೆ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರದಿಂದ ಸುಪ್ರೀಂ ಕೋರ್ಟಿನ ತೀರ್ಪು ಉಲ್ಲಂಘನೆಯಾಗಲಿದ್ದು, ಇದಕ್ಕಾಗಿ ತೆಲಂಗಾಣ ಸರ್ಕಾರ ವಿಶೇಷ ಮಸೂದೆಯನ್ನೇ ಜಾರಿಗೆ ತರಲು ಮುಂದಾಗಿದೆ.

ಚುನಾವಣೆ ಸಂದರ್ಭದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ ನೀಡಿದ್ದ ಭರವಸೆಗಳ ಪೈಕಿ ಮುಸ್ಲಿಂ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವುದು ಒಂದು. ಈಗ ಇದನ್ನು ಜಾರಿ ಮಾಡುತ್ತಿದೆ. ಸದ್ಯ ಶೇ.4 ರಷ್ಟಿರುವ ಮುಸ್ಲಲ್ಮಾನರ ಮೀಸಲಾತಿಯನ್ನು ಶೇ.12ಕ್ಕೆ ಹಾಗೂ ಶೇ.6 ರಷ್ಟು ಇರುವ ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇ.10 ಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಇದರಿಂದ ಮೀಸಲಾತಿ ಪ್ರಮಾಣ ಶೇ.50 ರಷ್ಟು ಮಾತ್ರ ಇರಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಲಿದೆ. ಈ ಕಾನೂನಿನ ತೊಡಕನ್ನು ಬಗೆಹರಿಸಿಕೊಳ್ಳಲು ತೆಲಂಗಾಣ ಸರ್ಕಾರ ತಮಿಳುನಾಡಿನ ಕ್ರಮಗಳನ್ನು ಪಾಲಿಸಲು ಮುಂದಾಗಿದೆ. ತಮಿಳುನಾಡಿನಲ್ಲಿ ಸದ್ಯ ಶೇ.69 ರಷ್ಟು ಮೀಸಲಾತಿ ಪ್ರಮಾಣ ಇದ್ದು, ಇದನ್ನು ತಮಿಳುನಾಡು ಸರ್ಕಾರ 9ನೇ ಶೆಡ್ಯೂಲ್ ಲ್ಲಿ ಸೇರಿಸುವ ಮೂಲಕ ಈ ಮೀಸಲಾತಿ ಪ್ರಮಾಣವನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಈ ವಿಷಯವಾಗಿ ಸುಪ್ರೀಂ ಕೋರ್ಟಿನ 9 ನ್ಯಾಯಧೀಶರ ಪೀಠ ವಿಚಾರಣೆ ನಡೆಸುತ್ತಿದೆ.

ಈ ಹಿಂದೆ ಆಂಧ್ರಪ್ರದೇಶದಲ್ಲಿದ್ದ ವೈ.ಎಸ್ ರಾಜಶೇಖರ ರೆಡ್ಡಿ ಅವರ ಸರ್ಕಾರ ಹಿಂದುಳಿದ ವರ್ಗಗಳಲ್ಲಿ ಮುಸಲ್ಮಾನರಿಗೆ ಶೇ.5 ರಷ್ಟು ಮೀಸಲಾತಿ ನೀಡಲು ನಿರ್ಧರಿಸಿತ್ತು. ಆದರೆ ಸುಪ್ರೀಂ ಕೋರ್ಟಿನ ತೀರ್ಪನ್ನು ಪಾಲಿಸುವ ಉದ್ದೇಶದಿಂದಾಗಿ ಇದರ ಪ್ರಮಾಣವನ್ನು ಶೇ.4ಕ್ಕೆ ಇಳಿಸಲಾಗಿತ್ತು.

ಟಿಎಸ್ ಆರ್ ಪಕ್ಷದ ಈ ನಿರ್ಧಾರಕ್ಕೆ ಬಿಜೆಪಿ ಹೊರತು ಪಡಿಸಿ ಉಳಿದ ಎಲ್ಲ ಪಕ್ಷಗಳು ಸಮ್ಮತಿ ಸೂಚಿಸಿವೆ. 119 ಸದಸ್ಯರ ಸಾಮರ್ಥ್ಯ ಹೊಂದಿರುವ ತೆಲಂಗಾಣ ವಿಧಾನಸಭೆಯಲ್ಲಿ 5 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಮಾತ್ರ ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿಲ್ಲ. ಉಳಿದಂತೆ ಇತರೆ ಪಕ್ಷಗಳು ಹಾಗೂ ಮುಸ್ಲಿಂ ನಾಯಕರು ಸಮ್ಮತಿ ಸೂಚಿಸಿರುವ ಹಿನ್ನೆಲೆಯಲ್ಲಿ ಮಸೂದೆ ಜಾರಿಗೆ ತರಲು ಸರ್ಕಾರಕ್ಕೆ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಮೀಸಲಾತಿ ಪ್ರಮಾಣ ಹೆಚ್ಚಳದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ‘ಆಂಧ್ರ ಪ್ರದೇಶ ವಿಭಜನೆ ನಂತರ ತೆಲಂಗಾಣದಲ್ಲಿ ಮುಸ್ಲಿಂ ಸಮುದಾಯದವರ ಸಂಖ್ಯೆ ಶೇ.9 ರಿಂದ ಶೇ.12 ಕ್ಕೆ ಹೆಚ್ಚಾಗಿದೆ. ಹೀಗಾಗಿ ನಮ್ಮ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಲು ನಿರ್ಧರಿಸಿದೆ. ಈ ಮೀಸಲಾತಿ ಮಸೂದೆಯನ್ನು ಆರ್ಥಿಕ ಸ್ಥಿತಿ ಪರಿಶೀಲನೆ ಆಧಾರದ ಮೇಲೆ ತರಲಾಗುತ್ತಿದೆಯೇ ಹೊರತು ಧರ್ಮ ಅಥವಾ ಜಾತಿಯ ಆಧಾರದ ಮೇಲೆ ಅಲ್ಲ’ ಎಂದಿದ್ದಾರೆ.

ಮುಸಲ್ಮಾನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಮೇಲೆ ಅಧ್ಯಯನ ನಡೆಸಿರುವ ಸುಧೀರ್ ಸಮಿತಿಯು ತನ್ನ ವರದಿ ಸಲ್ಲಿಸಿದ್ದು. ಈ ವರದಿ ಪ್ರಕಾರ ದೇಶದ ಇತರೆ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ತೆಲಂಗಾಣದಲ್ಲಿ ಮುಸ್ಲಿಂ ಉದ್ಯೋಗದಾರರ ಪ್ರಮಾಣದಲ್ಲಿ ಕುಸಿತ ಕಂಡಿದೆ. ರಾಜ್ಯದಲ್ಲಿ ಶೇ.7.36 ರಷ್ಟು ಮಾತ್ರ ಮುಸಲ್ಮಾನರು ಉದ್ಯೋಗದಲ್ಲಿದ್ದಾರೆ. ಇದಕ್ಕೆ ಮೀಸಲಾತಿಯೇ ಪರಿಹಾರ ಎಂದು ಅಭಿಪ್ರಾಯಪಟ್ಟಿದೆ. ಈ ಅಭಿಪ್ರಾಯವನ್ನು ಮುಂದಿಟ್ಟುಕೊಂಡು ತೆಲಂಗಾಣ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಮುಂದಾಗಿದೆ.

Leave a Reply