ಜಗತ್ತು ಬೆರಗಾಗುವಂತೆ ಮಹಾಭಾರತ ಸಿನಿಮಾ ಮಾಡುವುದಕ್ಕೆ ₹1000 ಕೋಟಿ ಎತ್ತಿಟ್ಟಿದ್ದಾರೆ ಉದ್ಯಮಿ ಬಿ ಆರ್ ಶೆಟ್ಟಿ!

ಡಿಜಿಟಲ್ ಕನ್ನಡ ಟೀಮ್:

ಲಾರ್ಡ್ ಆಫ್ ರಿಂಗ್ಸ್, ಹ್ಯಾರಿ ಪಾಟರ್ ಅಂತೆಲ್ಲ ಹಾಲಿವುಡ್ ಚಿತ್ರಗಳ ಬಗ್ಗೆ ಬೆರಗಿನಿಂದ ಮಾತನಾಡುತ್ತೇವೆ. ಬೇರೆಯದೇ ಲೋಕಗಳನ್ನು ಸೃಷ್ಟಿಸಬಲ್ಲ ಮಹಾಕತೆಗಳಿಗೆ ಭಾರತದಲ್ಲಿ ಬರವೇ? ರಾಮಾಯಣ, ಮಹಾಭಾರತ, ಅಸಂಖ್ಯ ಕದನಗಳು, ಸಾಮ್ರಾಜ್ಯ ವೈಭೋಗಗಳನ್ನು ಕಂಡ ಚರಿತ್ರೆ ನಮ್ಮದಲ್ಲವೇ? ಆದರೆ ಭಾರತೀಯ ಚಿತ್ರರಂಗವು ಪರದೆಯ ಮೇಲೆ ಇಂಥ ಕತೆಗಳನ್ನು ಅರಳಿಸುವಲ್ಲಿ ದೊಡ್ಡಮಟ್ಟದ ಯಶಸ್ಸನ್ನೇಕೆ ಕಾಣುತ್ತಿಲ್ಲ ಎಂಬುದು ಕೊರತೆಯಾಗಿರುವುದಂತೂ ಹೌದು.

ಇದೀಗ ಹಾಗೊಂದು ಮಹಾಪ್ರಯತ್ನದ ಸುದ್ದಿ ಬಂದಿದೆ. ಉಡುಪಿ ಮೂಲದ ಯುಎಇ ಉದ್ಯಮಿ ಬಿ. ಆರ್. ಶೆಟ್ಟಿ ಮಹಾಭಾರತವನ್ನು ದೊಡ್ಡ ಪರದೆಯಲ್ಲಿ ಚಂದಗಾಣಿಸುವುದಕ್ಕೆ ₹1000 ಕೋಟಿಗಳನ್ನು ಹೂಡಲಿದ್ದಾರೆ!

ತಂತ್ರಜ್ಞಾನ ಉಪಯೋಗಿಸಿ ಪರದೆಯ ಮೇಲೆ ನಮ್ಮದೇ ಕತೆಯ ಮಾಯಾಲೋಕ ಸೃಷ್ಟಿಸುವ ಶಕ್ತಿ ಭಾರತೀಯ ಸಿನಿಮಾಕ್ಕೂ ಇದೆ ಅಂತ ಯಾವ ದಕ್ಷಿಣ ಭಾರತವು ಬಾಹುಬಲಿ ಮೂಲಕ ಸಾಬೀತು ಮಾಡಿತ್ತೋ, ಇಲ್ಲಿಂದಲೇ ಮಹಾಭಾರತ ಪ್ರಯತ್ನವೂ ಆರಂಭಗೊಂಡಿದೆ. ಜಾಹಿರಾತು ಚಿತ್ರಗಳ ನಿರ್ದೇಶಕ ವಿ. ಎ. ಶ್ರೀಕಪಮಾರ್ ಮೆನನ್ ನಿರ್ದೇಶನವಿರಲಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಎಂ ಟಿ ವಾಸುದೇವನ್ ನಾಯರ್ ಅವರ ರಂದಾಮೂಜಂ (ಎರಡನೇ ಸರದಿ) ಆಧಾರವಾಗಿಟ್ಟುಕೊಂಡು ಸಿನಿಮಾ ರೂಪುಗೊಳ್ಳಲಿದೆ. ಪಾಂಡವರಲ್ಲಿ ಎರಡನೇಯವನಾದ ಭೀಮನ ನಿರೂಪಣೆಯಲ್ಲಿ ಕತೆ ಸಾಗುತ್ತದೆ.

ಸೆಪ್ಟೆಂಬರ್ 2018ರಿಂದ ಚಿತ್ರೀಕರಣ ಪ್ರಾರಂಭಿಸುವ ಗುರಿ ಇಟ್ಟುಕೊಳ್ಳಲಾಗಿದ್ದು, ಎರಡು ಭಾಗಗಳಲ್ಲಿ ಸಿನಿಮಾ ಮೂಡಿಬರಲಿದೆ. 2020ರ ವೇಳೆಗೆ ತೆರೆ ಕಾಣಿಸುವ ಗುರಿ ಇರಿಸಿಕೊಳ್ಳಲಾಗಿದೆ. ಮೇಕ್ ಇನ್ ಇಂಡಿಯಾ ಘೋಷವಾಕ್ಯದಲ್ಲಿ ಜಾಗತಿಕ ವೀಕ್ಷಕರೆಲ್ಲರನ್ನೂ ತಲುಪುವ ಪ್ರಯತ್ನ ಇದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ಬಿ ಆರ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಸಿನಿಮಾ ನಿರ್ಮಾಣದ ನೀಲನಕ್ಷೆ ಗಮನಿಸಿದರೆ ಇದರ ವ್ಯಾಪ್ತಿ ಅತಿ ಹಿರಿದಾಗಿರುವುದು ಗಮನಕ್ಕೆ ಬರುತ್ತದೆ. ಇಂಗ್ಲಿಷ್, ಹಿಂದಿ, ತಮಿಳು, ತೆಲಗು, ಕನ್ನಡಗಳಲ್ಲಿ ಸಿನಿಮಾ ನೀಡಿ ನಂತರ ಭಾರತದ ಪ್ರಮುಖ ಭಾಷೆಗಳಿಗೆ ಹಾಗೂ ಪ್ರಮುಖ ವಿದೇಶಿ ಭಾಷೆಗಳಿಗೆ ಡಬ್ ಮಾಡುವ ಗುರಿಯನ್ನೂ ಇರಿಸಿಕೊಳ್ಳಲಾಗಿದೆ.

ಭಾರತ ಮತ್ತು ವಿದೇಶದ ಶ್ರೇಷ್ಠ ಕಲಾವಿದರನ್ನು ಬಳಸಿಕೊಳ್ಳುವ ರೂಪುರೇಷೆ ಇದ್ದರೆ, ತಾಂತ್ರಿಕ ವಿಭಾಗದಲ್ಲಿ ಮಾತ್ರ ವಿದೇಶಿ ಪರಿಣತರು, ಅದರಲ್ಲೂ ವಿಶೇಷವಾಗಿ ಅಕಾಡೆಮಿ ಪ್ರಶಸ್ತಿ ವಿಜೇತರನ್ನೇ ಬಳಸಿಕೊಳ್ಳುವ ಕನಸಿದೆ. ಇದೊಂದು ಜಾಗತಿಕ ದರ್ಜೆಯ ಚಿತ್ರವಾಗಿ ಭಾರತದ ಕಥನ ಕಲೆಯ ಉತ್ಕೃಷ್ಟ ಉದಾಹರಣೆಯಾಗಬೇಕೆಂಬ ಕನಸು ಬಿ ಆರ್ ಶೆಟ್ಟಿ ಅವರದ್ದು.

Leave a Reply