ಅಖಾಡಕ್ಕೆ ಇಳಿಯದೇ ಎದುರಾಳಿ ಚಿತ್ ಮಾಡಿದ ಗೌಡರು!

ತಂತ್ರ, ಪ್ರತಿತಂತ್ರ, ಒಳತಂತ್ರ ರಾಜಕಾರಣಕ್ಕೆ ಮತ್ತೊಂದು ಹೆಸರಾದ ದೇವೇಗೌಡರು ಮೊನ್ನೆ ನಂಜನಗೂಡು, ಗುಂಡ್ಲುಪೇಟೆ ಮರುಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆಯೇ ‘ರಾಜಕೀಯ ಗೆಲುವು’ ಸಾಧಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಮತ್ತಿತರ ಕಾಂಗ್ರೆಸ್ ಮುಖಂಡರ ಖುದ್ದು ಅಭಿನಂದನೆಗೆ ಪಾತ್ರರಾಗಿರುವ ಗೌಡರ ಈ ಒಳತಂತ್ರದಲ್ಲಿ ಒಂದೇ ಕಲ್ಲಿಗೆ ಹಲವು ಹಕ್ಕಿಗಳನ್ನು ಬಡಿದುರುಳಿಸುವ ಜಾಣ್ಮೆ ಮತ್ತೊಮ್ಮೆ ಮಿಂಚುಳ್ಳಿಯಾಗಿದೆ. ರಾಜಕೀಯ ವಿರೋಧಿಗಳನ್ನುಗುಳುಂ ಮಾಡಿದೆ.

ನಿಜ, ಊರೆಲ್ಲ ಬರ ಬಿದ್ದರೂ ಗೌಡರ ರಾಜಕೀಯ ಕೃಷಿ ಮಾತ್ರ ಆಬಾಧಿತ. ನೀರು, ಗೊಬ್ಬರ ಇಲ್ಲದೆಯೂ ಬೆಳೆ ತೆಗೆಯಬಲ್ಲರು. ಕಿತ್ತ ಕಳೆಯನ್ನೇ ಬೆಳೆ ಎಂದು ನಿರೂಪಿಸಬಲ್ಲರು. ಅವರ ರಾಜಕೀಯ ಆಟಕ್ಕೆ ಅಲ್ಪವಿರಾಮ, ಪೂರ್ಣವಿರಾಮ ಎಂಬುದಿಲ್ಲ. ದಿನದ ಇಪ್ಪತ್ನಾಲ್ಕು ತಾಸು ದುಡಿದರೂ ಎಂಬತ್ನಾಲ್ಕರ ಹರೆಯದಲ್ಲೂ ದಣಿಯದ, ತಣಿಯದ ರಾಜಕೀಯ ದಾಹ. ಅಂಥ ಗೌಡರು ಉಭಯ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರುವ ನಿರ್ಣಯ ಕೈಗೊಂಡಾಗ ಅದೊಂದು ಪಲಾಯನವಾದದ ಸಂಕೇತದಂತೆ ಕಂಡಿತ್ತು. ಆದರೆ ಫಲಿತಾಂಶ ಹೊರಬಿದ್ದಾಗಲಷ್ಟೇ ಗೊತ್ತಾಗಿದ್ದು ಅಖಾಡಕ್ಕಿಳಿಯದೆಯೇ ಎದುರಾಳಿಯನ್ನು ಚಿತ್ ಮಾಡುವ ಪರಿ ಇದೆಂದು.

ಉತ್ತರ ಪ್ರದೇಶ ಚುನಾವಣೆ ಭವಿಷ್ಯದ ಬಗ್ಗೆ ಗೌಡರು ಸಾಕಷ್ಟು ಮೊದಲೇ ಕಣಿ ಹೇಳಿದ್ದರು. ಸಮಾಜವಾದಿ ಪಕ್ಷ ಇಬ್ಭಾಗ ಆಗುತ್ತದೆ, ಮೋದಿ ಅಲೆಯೇರಿ ಬಿಜೆಪಿ ಅಧಿಕಾರದ ಸವಾರಿ ಮಾಡುತ್ತದೆ ಎಂದು. ತಮ್ಮ ಭವಿಷ್ಯ ನಿಜವಾದದ್ದು ಗೌಡರಿಗೆ ಖುಷಿ ಕೊಡಲಿಲ್ಲ. ಬದಲಿಗೆ ಕಾಡಲು ಶುರುಮಾಡಿತು. ಕಾರಣ ಬಿಜೆಪಿಯ ಮುಂದಿನ ಟಾರ್ಗೆಟ್ ಕರ್ನಾಟಕ, ಮೋದಿ ಅಲೆ ಇತ್ತಲೂ ದಾಂಗುಡಿ ಇಡುತ್ತದೆ ಎಂಬುದು. ಅದೇ ಕಾಲಕ್ಕೆ ಸರಿಯಾಗಿ ದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಮುಖಂಡರು ಸಭೆ ಸೇರಿ ಗುಜರಾತ್ ಮತ್ತು ಕರ್ನಾಟಕ ಮುಂದಿನ ಟಾರ್ಗೆಟ್ ಎಂದರು. ಯಡಿಯೂರಪ್ಪನವರು ಹೇಳಿಕೊಂಡು ತಿರುಗುತ್ತಿದ್ದ ಮಿಷನ್ 150 ಅನ್ನು ಮತ್ತಷ್ಟು ಹಿಗ್ಗಿಸಲು ನಿರ್ಣಯಿಸಿದರು. ಇದೇ ಕಾಲಕ್ಕೆ ಸರಿಯಾಗಿ ಬಂದದ್ದು ನಂಜನಗೂಡು ಮತ್ತು ಗುಂಡ್ಲುಪೇಟೆ ಮರುಚುನಾವಣೆ. ದೇಶದ ಉದ್ದಗಲಕ್ಕೂ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ಸನ್ನೇ ಇಂಚಿಂಚಾಗಿ ನುಂಗುತ್ತಾ ಬಂದಿರುವ ಮೋದಿ ಅಲೆ ಏನಾದರೂ ಈ ಚುನಾವಣೆಯಲ್ಲೂ ಕೆಲಸ ಮಾಡಲು ಬಿಟ್ಟರೆ ಜೆಡಿಎಸ್‌ನಂಥ ಪ್ರಾದೇಶಿಕ ಪಕ್ಷದ ಕತೆ ಮುಗಿದಂತೆಯೇ ಎಂದು ಭಾವಿಸಿದ ಗೌಡರು ಹೆಣೆದ ಒಳತಂತ್ರವೇ ತಟಸ್ಥ ನಿಲುವು ತಳೆಯುವುದು. ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಕಾಂಗ್ರೆಸ್ಸಿಗೆ ಪರೋಕ್ಷ ಬೆಂಬಲ ಕೊಟ್ಟು ಬಿಜೆಪಿ ಸೋಲಿಸುವ ಮೂಲಕ ಮೋದಿ ಅಲೆಯ ಅಶ್ವಮೇಧ ಕುದುರೆ ಕಟ್ಟಿ ಹಾಕುವುದು. ಸದ್ಯಕ್ಕೆ ಗೌಡರ ತಂತ್ರ ಫಲಕೊಟ್ಟಿದೆ.

ಹಾಗೇ ನೋಡಿದರೆ ನಂಜನಗೂಡಲ್ಲಾದರೂ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸಬೇಕು ಎನ್ನುವುದು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆಕಾಂಕ್ಷೆಯಾಗಿತ್ತು. ಕನಿಷ್ಟ ಇಪ್ಪತ್ತೈದು, ಮೂವತ್ತು ಸಾವಿರ ಮತಗಳಾದರೂ ಪಕ್ಷಕ್ಕೆ ಬರುತ್ತವೆ. ಪಕ್ಷದ ಅಸ್ತಿತ್ವ ಕಾಯ್ದುಕೊಳ್ಳಲಾದರೂ ಅಭ್ಯರ್ಥಿ ಹಾಕಬೇಕು ಎನ್ನುವುದು ಅವರ ವಾದವಾಗಿತ್ತು. ಆದರೆ ಈ ವಾದವನ್ನು ಸಾರಸಗಟಾಗಿ ತಳ್ಳಿಹಾಕಿದ ಗೌಡರು, ಅಲ್ಲಿ ನಿಂತು ಸೋಲಲು 25 ರಿಂದ 30 ಕೋಟಿ ರುಪಾಯಿ ಚುನಾವಣೆ ಖರ್ಚು ಮಾಡುವುದು ಬೇಕಿಲ್ಲ. ಇದರಿಂದ ಸಿಗೋದು ಬರೀ ಆಭಾಸ ಮಾತ್ರ. ಈಗ ಅನ್ಯಪಕ್ಷದವರು ಸಾಮೂಹಿಕ ಸನ್ನಿಗೆ ಒಳಗಾದವರಂತೆ ಬಿಜೆಪಿ ಸೇರುತ್ತಿದ್ದಾರೆ. ಇನ್ನೊಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ಬರುತ್ತಿದೆ. ಈಗೇನಾದರೂ ಬಿಜೆಪಿ ಗೆಲ್ಲಲು ಬಿಟ್ಟರೆ ಜೆಡಿಎಸ್ ಕತೆ ಮುಗಿದಂತೆಯೇ. ಅದನ್ನು ತಡೆಯಬೇಕಾದರೆ ಸದ್ಯಕ್ಕೆ ಪಕ್ಷದ ಹಿತ ಮರೆಯಬೇಕು ಎಂದು ಬುದ್ಧಿ ಹೇಳಿ ಕಳುಹಿಸಿದ್ದಾರೆ. ಗೌಡರು ಮತ್ತು ಕುಮಾರಸ್ವಾಮಿ ಚಿಂತನಾಲಹರಿ ನಡುವೆ ಇರುವ ವ್ಯತ್ಯಾಸ ಇಷ್ಟೇ. ಗೌಡರದು ಸಾಣೆ ಹಿಡಿದ ಅನುಭವ!

ಗೌಡರ ದೂರಾಲೋಚನೆ ಇಷ್ಟಕ್ಕೆ ಸೀಮಿತವಾಗಿರಲಿಲ್ಲ. ಅವರಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರಂಥ ಒಕ್ಕಲಿಗ ನಾಯಕ, ಶ್ರೀನಿವಾಸಪ್ರಸಾದ್‌ ರಂಥ ದಲಿತ ಮುಖಂಡ ಬಿಜೆಪಿಗೆ ಹೋದರೂ, ಜಾಫರ್ ಷರೀಫ್, ಎಂ.ವಿ. ರಾಜಶೇಖರನ್‌ನಂಥ ಹಿರಿಯ ಕಾಂಗ್ರೆಸ್ಸಿಗರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದರೂ ಆ ಪಕ್ಷಕ್ಕೇನೂ ಲಾಭವಿಲ್ಲ. ಅವರೆಲ್ಲ ನಿರುಪಯೋಗಿಗಳು ಎನ್ನುವುದರ ಜತೆಗೆ ರಾಜಕೀಯ ತಿರುವುಗಳಲ್ಲಿ ಜೆಡಿಎಸ್ ನಿರ್ಣಾಯಕ ಎನ್ನುವುದನ್ನು ಸಾಬೀತು ಮಾಡಬೇಕಿತ್ತು. ಹಿಂದೆ ಕಾಂಗ್ರೆಸ್ ತೊರೆದ ಶ್ರೀನಿವಾಸ ಪ್ರಸಾದ್‌ಗೆ ಜೆಡಿಎಸ್ ಮುಕ್ತ ಆಹ್ವಾನ ನೀಡಿತ್ತು. ಆದರೆ ಅವರು ಸದ್ದಿಲ್ಲದೆ ಬಿಜೆಪಿ ಸೇರಿದ್ದರು. ಆ ಜಿದ್ದು ಗೌಡರ ಮನದಲ್ಲಿ ಕೊತಕೊತ ಕುದಿಯುತ್ತಿತ್ತು. ಒಂದೊಮ್ಮೆ  ಕೃಷ್ಣ, ಶ್ರೀನಿವಾಸ ಪ್ರಸಾದ್ ಸೇರ್ಪಡೆಯಿಂದ ಬಿಜೆಪಿಗೆ ಲಾಭವಾಯಿತು ಎಂದಾದರೆ ಅದರಿಂದ ಹಳೇ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಜೆಡಿಎಸ್ ಮತಶಕ್ತಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಅದರಲ್ಲೂ ವಿಶೇಷವಾಗಿ ಹಳೇ ಮೈಸೂರು ಭಾಗದ ಕಾಂಗ್ರೆಸ್‌ನ ಕೃಷ್ಣ ಬೆಂಬಲಿಗ ಒಕ್ಕಲಿಗ ಮತಗಳು, ಪ್ರಸಾದ್ ಬೆಂಬಲಿತ ಪರಿಶಿಷ್ಟ ಮತಗಳು ಬಿಜೆಪಿಗೆ ವರ್ಗಾವಣೆ ಆಗುತ್ತವೆ. ಇದರಿಂದ ಜೆಡಿಎಸ್ಸಿಗೆ ನಷ್ಟ. ಇದನ್ನರಿತೇ ಗೌಡರು ನಂಜನಗೂಡಲ್ಲಿ ಹಿಂದೆ ತಮ್ಮ ಪಕ್ಷದಿಂದ ಸುಮಾರು 42 ಸಾವಿರ ಮತಗಳನ್ನು ಪಡೆದಿದ್ದ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಅಭ್ಯರ್ಥಿ ಆಗಲು ಬಿಟ್ಟರು. ಜತೆಗೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಪರೋಕ್ಷ ಬೆಂಬಲ ಕೊಟ್ಟು ಕೃಷ್ಣ ಮತ್ತು ಪ್ರಸಾದ್ ಬಿಜೆಪಿ ಸೇರ್ಪಡೆ ಅಪ್ರಸ್ತುತ ಎನ್ನಿಸಿಬಿಟ್ಟರು. ಎರಡು ಹಕ್ಕಿಗಳನ್ನು ಹೊಡೆದುರುಳಿಸಿದರು.

ಶ್ರೀನಿವಾಸ ಪ್ರಸಾದ್, ಎಸ್.ಎಂ. ಕೃಷ್ಣ, ಕುಮಾರ್ ಬಂಗಾರಪ್ಪ ಬಿಜೆಪಿ ಸೇರ್ಪಡೆ ಕರ್ನಾಟಕದಲ್ಲಿಯೂ ಒಂದು ರೀತಿ ಸಮೂಹ ಸನ್ನಿ ವಾತಾವರಣ ಸೃಷ್ಟಿಸಲು ಹೊರಟಿತ್ತು. ರಾಜ್ಯದ ನಾನಾ ಕಡೆ ಹಿಂಡು-ಹಿಂಡಾಗಿ ಬಿಜೆಪಿ ಸೇರಲು ಸಜ್ಜಾಗಿದ್ದರು. ಇದಕ್ಕೆ ಪ್ರೇರಣೆ ಉತ್ತರ ಪ್ರದೇಶ ಚುನಾವಣೆ ಫಲಿತಾಂಶ ನಿರ್ಧರಿಸಿದ ಮೋದಿ ಅಲೆ. ಇದಕ್ಕೆ ಕಡಿವಾಣ ಹಾಕಬೇಕು ಎಂದಾದರೆ ಕರ್ನಾಟಕದಲ್ಲಿ ಮೋದಿ ಅಲೆ ಕೆಲಸ ಮಾಡುವುದಿಲ್ಲ ಎಂಬುದನ್ನು ನಿರೂಪಿಸಬೇಕು. ಹಾಗೆ ನಿರೂಪಿಸಬೇಕಾದರೆ ಮರುಚುನಾವಣೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಬೇಕು. ಬಿಜೆಪಿ ಸೋತರೆ ಆ ಪಕ್ಷಕ್ಕೆ ಹೋಗಲು ತುದಿಗಾಲಲ್ಲಿ ನಿಂತಿರುವವರು ಎರಡೆರಡು ಬಾರಿ ಯೋಚಿಸುತ್ತಾರೆ. ಅವರು ಬಿಜೆಪಿಗೆ ಹೋಗುವುದನ್ನು ತಡೆಯಲು ಸಾಧ್ಯವಾಗುತ್ತದೋ, ಬಿಡುತ್ತದೋ ಅದು ಬೇರೆ ಪ್ರಶ್ನೆ. ಆದರೆ ಆ ಬಗ್ಗೆ ಒಂದು ಕ್ಷಣ ನಿಂತು ಯೋಚಿಸುವಂತೆ ಮಾಡಬೇಕಾದರೆ ಬಿಜೆಪಿ ಸೋಲಬೇಕು. ಇದರಿಂದ ಉತ್ತರ ಭಾರತದ ಮೋದಿ ಅಲೆ ಕರ್ನಾಟಕದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಸಾರಲು ಅನುವಾಗುತ್ತದೆ. ಹೀಗೆಲ್ಲ ಚಿಂತಿಸಿಯೇ ಗೌಡರು ಎರಡೂ ಕಡೆ ಅಭ್ಯರ್ಥಿಗಳನ್ನು ಹಾಕದೆ ಕಾಂಗ್ರೆಸ್ ಗೆಲುವಿಗೆ ಪರೋಕ್ಷ ಸಹಕಾರ ಕೊಟ್ಟರು. ಬಿಜೆಪಿ ಹಕ್ಕಿ ಹೊಡೆದುರುಳಿಸಿದರು.

ಇನ್ನು ಕಾಂಗ್ರೆಸ್ ವಿಚಾರ. ಚುನಾವಣೆಯಿಂದ ಚುನಾವಣೆಗೆ ರಾಜಕೀಯ ಪಕ್ಷಗಳ ಪರಿಸ್ಥಿತಿ, ಮತದಾರನ ಮನಸ್ಥಿತಿ ಬದಲಾಗುತ್ತಾ ಹೋಗುತ್ತದೆ. ಹೊರಗೆ ಎಷ್ಟೆಲ್ಲ ಕಿತ್ತಾಡಿದರೂ ಅಧಿಕಾರ ರಾಜಕೀಯ ಎಂದಾಗ ಶತ್ರುಗಳಾರು, ಮಿತ್ರರಾರು ಎಂಬುದು ಗೊತ್ತಾಗುವುದಿಲ್ಲ. ಹೀಗಾಗಿ ಕಾಂಗ್ರೆಸ್ ಜತೆ ಕಾಲಾನುಕೂಲ ಕೂಡಿಕೆ ಮಾಡಿಕೊಂಡಿರುವ ಗೌಡರು ಯಾವಾಗ, ಹೇಗೆ ವರ್ತಿಸುತ್ತಾರೆ ಎಂಬುದು ಅವರಿಗೇ ಗೊತ್ತಿರುವುದಿಲ್ಲ. ಯಡಿಯೂರಪ್ಪ ಜತೆ ಸೇರಿ ಜೆಡಿಎಸ್ ಸರಕಾರ ಮಾಡಿದ್ದೂ ಇದೆ. ಜೆಡಿಎಸ್‌ನಿಂದ ಹೊರಹಾಕಿದ ಸಿದ್ದರಾಮಯ್ಯನವರ ಜತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೈ ಜೋಡಿಸಿದ್ದೂ ಇದೆ. ಸದ್ಯಕ್ಕೆ ಅವರಿಗೆ ಹಳೇ ಮೈಸೂರು ಭಾಗದಲ್ಲಿ ಹಳೇ ಶತ್ರು ಕಾಂಗ್ರೆಸ್ ಜತೆಗಿನ ಸರಸ ಲೇಪಿತ ವಿರಸವೇ ಸಾಕು. ಹೊಸ ಶತ್ರು ಬಿಜೆಪಿ ಮತ್ತಷ್ಟು ಬಲಿಯುವುದು ಬೇಕಿಲ್ಲ. ಹೀಗಾಗಿ ಇಬ್ಬರೂ ಸೇರಿದ್ದಾರೆ. ಆದರೆ ಮುಂದಿನ ಚುನಾವಣೆಯಲ್ಲಿ ಇದೇ ತಾಳ-ತಂತಿ ಇರುತ್ತದೆಯೇ ಗೊತ್ತಿಲ್ಲ. ಪರಿಸ್ಥಿತಿ ಹೇಗೆ ಬೇಕಾದರೂ ಬರಬಹುದು. ಅದಕ್ಕೆ ತಕ್ಕಂತೆ ಪಾತ್ರವೂ ಬದಲಾಗಬಹುದು. ಜೆಡಿಎಸ್ ಜತೆ ಸ್ನೇಹ-ವೈರ ಎರಡೂ ಬೇಡ ಎಂದು ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಹೇಳಿರುವ ಕಿವಿಮಾತಿನಲ್ಲಿ ನಿಖಾಂತವೇನೂ ಇಲ್ಲ. ಈ ಮಾತಿನಲ್ಲಿರುವ ದ್ವಂದ್ವ ಮುಂದಿನ ಚುನಾವಣೆವರೆಗೂ ಮುಂದೂಡಿಕೆ ಸ್ಥಿತಿಯಲ್ಲಿರುತ್ತದೆ. ಹಾಗೆ ತನ್ನ ಜತೆಗಿನ ಸಂಬಂಧದ ವಿಚಾರದಲ್ಲಿ ಕಾಂಗ್ರೆಸ್ಸನ್ನು ಅನಿಶ್ಚಿತ ಸ್ಥಿತಿಯಲ್ಲಿಟ್ಟಿರುವುದೇ ದೇವೇಗೌಡರ ಹೆಗ್ಗಳಿಕೆ.

ಅವತ್ತಿನ ಬಗ್ಗೆ ಅವತ್ತು ಯೋಚಿಸುವವನು ರಾಜಕಾರಣಿ ಎನಿಸುವುದಿಲ್ಲ. ಮುಂದಾಲೋಚನೆ, ದೂರಾಲೋಚನೆ ಇದ್ದವ ಮಾತ್ರ ಇಲ್ಲಿ ಈಸುತ್ತಾನೆ, ಈಸಿ ಜೈಸುತ್ತಾನೆ. ಈ ವಿಚಾರದಲ್ಲಿ ಗೌಡರದು ಯಾವಾಗಲೂ ಒಂದು ಹೆಜ್ಜೆ ಮುಂದೆಯೇ. ಜೆಡಿಎಸ್ ಮೇಲಿನ ಹಿಡಿತ ಇವತ್ತಿಗೂ ಅವರ ಕೈ ದಾಟದಿರುವುದರ ಹಿಂದಿರುವುದು ಇದೇ ಶಕ್ತಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರಬಹುದು, ಏನೆಲ್ಲ ಅನುಭವ ಇರಬಹುದು, ಆದರೆ ರಾಜಕೀಯ ಮಂತ್ರಾಲೋಚನೆ ವಿಚಾರದಲ್ಲಿ ಗೌಡರ ಸನಿಹ ಸುಳಿಯಲೂ ಆಗುವುದಿಲ್ಲ. ರಾಜ್ಯಸಭೆ, ವಿಧಾನ ಪರಿಷತ್, ಮೂರು ವಿಧಾನಸಭೆ ಕ್ಷೇತ್ರಗಳ ಮರುಚುನಾವಣೆಯಲ್ಲಿ ಇನ್ನಿಲ್ಲದಂತೆ ಸೋತು ನಿತ್ರಾಣಗೊಂಡಿದ್ದ ಪಕ್ಷಕ್ಕೆ ಮತ್ತೇನಾದರೂ ಉಸಿರು ಬಂದಿದ್ದರೆ ಅದು ದೇವೇಗೌಡರ ರಾಜಕೀಯ ಜಾಣ್ಮೆಯಿಂದ. ಕಳೆದ ಫೆಬ್ರವರಿಯಲ್ಲಿ ನಡೆದ ಐದು ಜಿಲ್ಲೆಗಳ ಮೂವತ್ಮೂರು ವಿಧಾನಸಭೆ ಕ್ಷೇತ್ರಗಳ ಮತದಾರರನ್ನು ಒಳಗೊಂಡ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ರಮೇಶ್‌ಬಾಬು ಗೆಲುವಿನಿಂದ. ಈ ಕ್ಷೇತ್ರಕ್ಕೆ ಹರಿಹರ ಶಾಸಕ, ಲಿಂಗಾಯತ ಸಮುದಾಯದ ಶಿವಶಂಕರ್ ಸಹೋದರ ಅರವಿಂದ ಅವರನ್ನು ಅಭ್ಯರ್ಥಿ ಮಾಡಬೇಕೆನ್ನುವುದು ಕುಮಾರಸ್ವಾಮಿ ಇಂಗಿತವಾಗಿತ್ತು. ಆದರೆ ಗೌಡರ ಚಿಂತನೆಯೇ ಬೇರೆಯಾಗಿತ್ತು. ಹೇಗಿದ್ದರೂ ಲಿಂಗಾಯತ ಸಮುದಾಯದ ಶಿವಶಂಕರ್ ಶಾಸಕರಾಗಿದ್ದಾರೆ. ಅವರ ಸಹೋದರ ಅಭ್ಯರ್ಥಿ ಆಗುವುದರಿಂದ ಬೇರೆ ಸಮುದಾಯ ಸೆಳೆದಂತಾಗುವುದಿಲ್ಲ ಎಂದು ಕುಮಾರಸ್ವಾಮಿ ಮಾತು ಪಕ್ಕಕ್ಕೆ ಸರಿಸಿ ಹಿಂದುಳಿದ ವರ್ಗಗಳ ರಮೇಶ್‌ಬಾಬು ಅವರಿಗೇ ಟಿಕೆಟ್ ಕೊಟ್ಟರು. ಅವರು ಗೆದ್ದರು. ಈ ಗೆಲುವು ಕಾರ್ಯಕರ್ತರಲ್ಲಿ ಮರುವಿಶ್ವಾಸ ತಂತು. ಪಕ್ಷದತ್ತ ತಿರುಗಿ ನೋಡುವಂತಾಯಿತು. ಈಗ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ವಹಿಸಿದ ಪಾತ್ರ ಕೂಡ ಚರ್ಚೆಗೆ ಗ್ರಾಸವಾಗಿದೆ.

ಇನ್ನೊಂದು ವಿಚಾರ. ಹಗೆ ಸಾಧನೆಯಲ್ಲಿ ಗೌಡರಿಗೆ ಗೌಡರೇ ಸಾಟಿ. ವಾಸ್ತವವಾಗಿ ಶ್ರೀನಿವಾಸ ಪ್ರಸಾದ್ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದರೆ ಅತ್ತ ದೇವೇಗೌಡರು, ಇತ್ತ ಯಡಿಯೂರಪ್ಪನವರೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆ ಕಡಿಮೆ ಇತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದ ಅವರಿಗೆ ಇಬ್ಬರ ಬೆಂಬಲವೂ ಸಿಗುವ ಸಂಭವವಿತ್ತು. ಆದರೆ ಸಿದ್ದರಾಮಯ್ಯ ವಿರುದ್ಧದ ವ್ಯಕ್ತಿಗತ ದ್ವೇಷ ಅವರ ಚಿಂತನಾ ಶಕ್ತಿಯನ್ನೇ ಮಬ್ಬುಗೊಳಿಸಿತ್ತು. ಮೊದಲೇ ಕ್ಷೇತ್ರದ ಬಹುಸಂಖ್ಯಾತ ಲಿಂಗಾಯತರ ಕಡುವೈರ ಕಟ್ಟಿಕೊಂಡಿದ್ದ ಪ್ರಸಾದ್ ಅವರನ್ನು ಗೌಡರು ಕೊಟ್ಟ ಒಳೇಟು ಯಡಿಯೂರಪ್ಪನವರ ಬೆಂಬಲ ಮೀರಿಯೂ ಚುನಾವಣೆ ರಾಜಕೀಯದಿಂದಲೇ ಆಚೆಗೆಸೆದಿದೆ.

ತಮ್ಮ ವೈರಿಗಳನ್ನು ಸದೆಬಡಿಯುವಾಗ ಗೌಡರು ಪಕ್ಷದ ಹಿತವನ್ನೂ ಪಕ್ಕಕ್ಕೆ ಸರಿಸುತ್ತಾರೆ. ನೀರಿನ ಮೇಲಿರುವ ತಲೆಗೆ ಗೊತ್ತಾಗದಂತೆ ಒಳಗೇ ನಡು ಮುರಿಯುವಲ್ಲಿ ಎತ್ತಿದ ಕೈ. ಹಿಂದೆ ತಮ್ಮ ವೈಯಕ್ತಿಕ ನಿಂದೆಗಿಳಿದ ಎಚ್. ವಿಶ್ವನಾಥ್ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಲು ಪಕ್ಷದ ಪರಮಾಪ್ತ ಅಭ್ಯರ್ಥಿ ಚಂದ್ರಶೇಖರಯ್ಯ ಅವರನ್ನೇ ರಾಜಕೀಯ ಬಲಿ ಕೊಟ್ಟವರು. ರಾಜ್ಯಸಭೆ ಮತ್ತು ಮೇಲ್ಮನೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿ ಜೆಡಿಎಸ್‌ನಿಂದ ಅಮಾನತಾಗಿರುವ ಎಂಟು ಶಾಸಕರು ಗೌಡರ ಕತ್ತರಿ ಶಾಟ್‌ಗೆ ತಡಬಡಾಯಿಸಿ ಹೋಗಿದ್ದಾರೆ. ನಾಗಮಂಗಲದಲ್ಲಿ ಚಲುವರಾಯಸ್ವಾಮಿ ವಿರುದ್ಧ ಮಾಜಿ ಶಾಸಕರಾದ ಶಿವರಾಮೇಗೌಡ, ಸುರೇಶ್ ಗೌಡ ಅವರನ್ನು ಒಂದುಮಾಡಿ ಜೆಡಿಎಸ್‌ಗೆ ಕರೆತಂದಿದ್ದಾರೆ. ಈ ಹಿಂದೆ ಮೂವರು ಪರಸ್ಪರ ಕಡುವೈರಿಗಳಾಗಿದ್ದರು. ಈಗ ಶಿವರಾಮೇಗೌಡ, ಸುರೇಶ್‌ಗೌಡ ನಡುವೆ ಮರೆಯಾಗಿರುವ ವೈರ ಚಲುವರಾಯಸ್ವಾಮಿಗೆ ನಿಜ ಸವಾಲು. ಅವರು 15 ಸಾವಿರ ಜನ ಸೇರಿಸಿ ಇತ್ತೀಚೆಗೆ ನಾಗಮಂಗಲದಲ್ಲಿ ಸಮಾವೇಶ ಮಾಡಿದ್ದರು. ಅದಕ್ಕೆ ಪರ್ಯಾಯವಾಗಿ ಗೌಡರು ಈಗ ಲಕ್ಷ ಜನರ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಅದೇ ರೀತಿ ಮಾಗಡಿಯಲ್ಲಿ ಎಚ್.ಸಿ. ಬಾಲಕೃಷ್ಣ ವಿರುದ್ಧ ಕಾಂಗ್ರೆಸ್‌ನ ಎ. ಮಂಜು ಹಾಗೂ ಜೇಡರಹಳ್ಳಿ ಕೃಷ್ಣ, ಶ್ರೀರಂಗಪಟ್ಟಣದಲ್ಲಿ ರಮೇಶ್ ಬಂಡಿಸಿದ್ದೇಗೌಡ ವಿರುದ್ಧ ರವೀಂದ್ರ, ನಂಜುಂಡೇಗೌಡ – ಹೀಗೆ ಪ್ರತಿ ಭಿನ್ನರ ಕ್ಷೇತ್ರದಲ್ಲೂ ಅವರ ಬುರುಡೆಗೆ ಬಿಸಿನೀರು ಕಾಯಿಸಲು ಇಬ್ಬಿಬ್ಬರನ್ನು ರೆಡಿ ಮಾಡಿಟ್ಟಿದ್ದಾರೆ. ಚಾಮರಾಜಪೇಟೆಯಲ್ಲೂ ಜಮೀರ್ ಅಹಮದ್ ವಿರುದ್ಧ ಸಜ್ಜು ಮಾಡಿರುವ ಇಬ್ಬರ ಹೆಸರು ಗೌಪ್ಯವಾಗಿಟ್ಟಿದ್ದಾರೆ. ಬೆಳೆಸುವುದು, ಬೆಳೆದವರು ಒಂದು ಹಂತ ಮೀರಿ ಬಲಿಯದಂತೆ ನೋಡಿಕೊಳ್ಳುವುದು, ಅಪ್ಪಿತಪ್ಪಿ ಬಲಿತು ಮೆರೆದರೆ ಬಲಿ ಹಾಕುವುದು ಅವರ ರಾಜಕೀಯ ರಕ್ತಗುಣ. ಇದಕ್ಕೆ ಪಕ್ಷದ ಒಳಗಿನವರು ಮತ್ತು ಹೊರಗಿನವರು ಎಂಬ ಯಾವುದೇ ಬೇಧ ಇಲ್ಲ.

ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಧೃವೀಕರಣಕ್ಕೆ ಕರ್ನಾಟಕ ಸಜ್ಜಾಗಿ ನಿಂತಿದೆ. ಈ ಹೊತ್ತಿಗೆ ಕರ್ನಾಟಕದಲ್ಲಿ ಉತ್ತರ ಭಾರತದ ಅಲೆ ಕೆಲಸ ಮಾಡುತ್ತದೆಯೋ, ಆ ಅಲೆ ವಿರುದ್ಧ ಸಿದ್ದರಾಮಯ್ಯ ಜತೆಗೂಡಿ ಗೌಡರು ಈಗ ಎಣೆದ ತಂತ್ರಗಾರಿಕೆ ತಾಕತ್ತು ಉಳಿಸಿಕೊಳ್ಳುತ್ತದೆಯೋ ಅಥವಾ ಪಾತ್ರವನ್ನೇ ಬದಲಿಸುತ್ತದೆಯೋ ಎಂಬುದು ಕೌತುಕ ಕಾಯ್ದುಕೊಂಡಿರುವ ವಿಚಾರ.

ಲಗೋರಿ : ಬಲಿಕೊಟ್ಟು ಬಲಿಪಡೆವ ಕಲೆಯೇ ಪಾಲಿಟಿಕ್ಸ್!

(ವಿಶ್ವವಾಣಿಯಲ್ಲಿ ಪ್ರಕಟಿತ)

1 COMMENT

  1. ಉಪಚುನಾವಣೆಯಲ್ಲಿ ಸೋಲು ಭವಿಷ್ಯದಲ್ಲಿ ಬಿಜೆಪಿಗೆ ವರವಾಗಿ ಪರಿಣಮಿಸಲಿದೆ …

Leave a Reply