ಸತತ ಸೋಲಿನ ನಡುವೆಯೂ ಬೆಂಬಲಿಸುತ್ತಿರೋ ಅಭಿಮಾನಿಗಳಿಗೆ ನಿರಾಸೆ ಮಾಡುತ್ತಿರೋದಕ್ಕೆ ಹೀಗಿತ್ತು ಕೊಹ್ಲಿ ಬೇಸರ…

ಡಿಜಿಟಲ್ ಕನ್ನಡ ಟೀಮ್:

ಆರ್ ಸಿಬಿ ಅಭಿಮಾನಿಗಳೇ ಹಾಗೇ, ತಮ್ಮ ತಂಡ ಎಷ್ಟೇ ಸೋತರು ಎಂದಿಗೂ ತಮ್ಮ ಪ್ರೀತಿ ಹಾಗೂ ಅಭಿಮಾನದಲ್ಲಿ ಕಿಂಚಿತ್ತು ಕಡಿಮೆ ಮಾಡಿಲ್ಲ. ಕಳೆದ 10 ವರ್ಷಗಳಿಂದ ಆರ್ ಸಿಬಿ ತಂಡದ ಮೇಲೆ ಭರವಸೆ ಇಟ್ಟು ಬೆಂಬಲಿಸುತ್ತಲೇ ಬಂದಿದ್ದಾರೆ. ತಂಡ ಯಾವುದೇ ಪ್ರದರ್ಶನ ನೀಡಲಿ ಪ್ರತಿ ಬಾರಿಯೂ ಆರ್ ಸಿಬಿ ಆಟಗಾರರ ಬೆನ್ನಿಗೆ ನಿಲ್ಲುತ್ತಿದ್ದಾರೆ. ಈ ಬಾರಿಯೂ ಅಷ್ಟೇ ಸತತ ಮೂರು ಪಂದ್ಯಗಳನ್ನು ಸೋತರೂ ಆರ್ ಸಿಬಿ ಅಭಿಮಾನಿಗಳ ಮನದಲ್ಲಿ ‘ಈ ಬಾರಿ ಕಪ್ ಗೆಲ್ಲುವುದು ಆರ್ ಸಿಬಿಯೇ’ ಎಂಬ ಆಸೆ ಸಂಪೂರ್ಣವಾಗಿ ಕಳೆದುಹೋಗಿಲ್ಲ ತಂಡ ಮತ್ತೆ ಪುಟಿದು ಟೂರ್ನಿಯಲ್ಲಿ ಮರಳಲಿದೆ ಎಂಬ ನಂಬಿಕೆಯಿಂದ ಬೆಂಬಲಿಸುತ್ತಿದ್ದಾರೆ.

ಆದರೆ, ಬಲಿಷ್ಠ ಆಟಗಾರರನ್ನು ಹೊಂದಿದ್ದರು ಸಂಘಟಿತ ಪ್ರದರ್ಶನ ನೀಡುವಲ್ಲಿ ತಂಡ ಎಡವಿ ಪದೇ ಪದೇ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸುತ್ತಲೇ ಇದೆ. ತಮ್ಮನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಪ್ರೀತಿಸಿ ಬೆಂಬಲಿಸುತ್ತಿರುವ ಅಭಿಮಾನಿಗಳಿಗೆ ಖುಷಿ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಆಟಗಾರರನ್ನು ಕಾಡುತ್ತಿದೆ. ಅದರಲ್ಲೂ ತಂಡದ ನಾಯಕ ವಿರಾಟ್ ಕೊಹ್ಲಿಗೆ ಸತತ 10ನೇ ವರ್ಷ ತನ್ನ ಬೆನ್ನಿಗೆ ನಿಂತಿರುವ ಪ್ರೇಕ್ಷಕರಿಗೆ ನಿರಾಸೆ ಮಾಡಿರುವ ಬಗ್ಗೆ ನೋವಿದೆ. ನಿನ್ನೆಯ ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ಮಾತುಗಳಲ್ಲಿ ಈ ನೋವು ಕಾಣಿಸಿತ್ತು. ತಮ್ಮ ಅಭಿಮಾನಿಗಳ ಬಗ್ಗೆ ಕೊಹ್ಲಿ ಮಾತುಗಳು ಹೀಗಿತ್ತು…

‘ಐಪಿಎಲ್ ನ ಈವರೆಗಿನ ಹಾದಿಯಲ್ಲಿ ಅಭಿಮಾನಿಗಳು ನಮ್ಮನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಕಳೆದ ಆವೃತ್ತಿಯಲ್ಲಿ ನಮಗೆ ಅಗತ್ಯ ಸಂದರ್ಭ ಎದುರಾದಾಗ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿಯೇ ಆಗಮಿಸಿ ನಮ್ಮನ್ನು ಪ್ರೋತ್ಸಾಹಿಸಿದ್ದರು. ಈ ವರ್ಷವೂ ನಾವು ಒತ್ತಡದಲ್ಲಿದ್ದರೂ ಅಭಿಮಾನಿಗಳು ನಮ್ಮನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಆಟಗಾರರಾಗಿ ನಾವು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಂಡು ನಮ್ಮನ್ನು ಬೆಂಬಲಿಸುತ್ತಿರುವ ಅಭಿಮಾನಿಗಳಿಗೆ ಖುಷಿ ಪಡಿಸಬೇಕಿದೆ. ಮುಂದಿನ ಎರಡು ಪಂದ್ಯಗಳನ್ನು ಹೊರಗಿನ ಅಂಗಳದಲ್ಲಿ ಆಡಲಿದ್ದು, ಈ ಪಂದ್ಯಗಳಲ್ಲಿ ಗೆಲುವಿನ ಲಯಕ್ಕೆ ಮರಳಿ ನಂತರ ತವರಿಗೆ ಆಗಮಿಸಿ ಅವರನ್ನು ಸಂತೋಷಪಡಿಸಬೇಕಿದೆ.’

ಕೊಹ್ಲಿ ಅವರ ಈ ಮಾತುಗಳಲ್ಲಿ ತಂಡದ ಆಟಗಾರರು ತಮಗಾಗಿಯಲ್ಲದಿದ್ದರೂ ತಮ್ಮನ್ನು ಪ್ರತಿ ಹಂತದಲ್ಲೂ ಬೆಂಬಲಿಸುತ್ತಿರುವ ಅಭಿಮಾನಿಗಳಿಗಾದರೂ ಪಂದ್ಯಗಳನ್ನು ಗೆಲ್ಲಲೇಬೇಕು ಎಂಬ ಮನೋಭಾವ ಮೂಡಿರುವುದು ಸ್ಪಷ್ಟವಾಗಿದೆ. ಆರ್ ಸಿಬಿ ತಂಡ ಮುಂದಿನ ಎರಡು ಪಂದ್ಯಗಳನ್ನು ಗುಜರಾತ್ ವಿರುದ್ಧ ರಾಜ್ಕೋಟ್ ನಲ್ಲಿ (ಏ.18) ಹಾಗೂ ಕೆಕೆಆರ್ ವಿರುದ್ಧ ಕೋಲ್ಕತಾದಲ್ಲಿ (ಏ.23) ರಂದು ಆಡಲಿದೆ. ಏಪ್ರಿಲ್ 25 ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚಿನ್ನಸ್ವಾಮಿ ಅಂಗಳದಲ್ಲಿ ಆಡಲಿದೆ. ಈ ಗಾಗಲೇ ತವರಿನ ಪಿಚ್ ನಲ್ಲೇ ಎರಡು ಪಂದ್ಯಗಳನ್ನು ಸೋತಿರುವ ಪಂದ್ಯ ಮುಂದಿನ ಎರಡು ಹೊರಗಿನ ಪಂದ್ಯಗಳನ್ನು ಗೆದ್ದರೆ ಮಾತ್ರ ತಂಡದ ಮೇಲಿರುವ ಒತ್ತಡ ಕಡಿಮೆಯಾಗಲಿದೆ.

Leave a Reply