ಸಿದ್ದರಾಮಯ್ಯ ನಾಯಕತ್ವ ಬಲವಾಯ್ತು ಎನ್ನುತ್ತಿರುವಾಗಲೇ ಪರಮೇಶ್ವರ್ ಹಾಡುತ್ತಿರುವ ಸಾಮೂಹಿಕ ನಾಯಕತ್ವದ ರಾಗ!

ಡಿಜಿಟಲ್ ಕನ್ನಡ ಟೀಮ್:

ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಅಖಾಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರ ವಿರುದ್ಧ ಪ್ರತಿಷ್ಠೆಯ ಕಾಳಗಕ್ಕೆ ಬಿದ್ದಿದ್ದ ಸಿದ್ದರಾಮಯ್ಯ, ಈ ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸಿದ ನಂತರ ಬೀಗಿದ್ದರು. ಎಲ್ಲರೂ ಸಿದ್ದರಾಮಯ್ಯನವರ ನಾಯಕತ್ವವನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಮಾತುಗಳು ಮಾತ್ರ ಮಾರ್ಮಿಕವಾಗಿದೆ. ಇದು ಪರಮೇಶ್ವರರ ಒಳ ಆತಂಕವನ್ನು ಬಿಂಬಿಸಿದೆ ಎಂದುಕೊಳ್ಳುವುದಕ್ಕೂ ಅವಕಾಶವಿದೆ. ಹಾಗಾದರೆ ಪರಮೇಶ್ವರ್ ಅವರು ಏನು ಹೇಳಿದ್ದಾರೆ ಓದಿ…

‘ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಗೆದ್ದ ಮಾತ್ರಕ್ಕೆ ಪಕ್ಷದ ನಾಯಕರು ಬೀಗುವ ಅಗತ್ಯವಿಲ್ಲ. ಪಕ್ಷ ಮುಂದಿನ ದಿನಗಳಲ್ಲಿ ಎದುರಾಗಲಿರುವ ವಿಧಾನಸಭೆ ಚುನಾವಣೆಗೆ ಸಾಮೂಹಿಕ ನಾಯಕತ್ವಕ್ಕೆ ಮುಂದಾಗಿ ಮತ್ತಷ್ಟು ಬಲಪಡಿಸುವ ಅಗತ್ಯ ಇದೆ. ಪಕ್ಷವನ್ನು ಸಾಮೂಹಿಕ ನಾಯಕತ್ವದಲ್ಲಿ ಸಂಘಟಿಸಬೇಕು. ಕಾಂಗ್ರೆಸ್ ಹೈಕಮಾಂಡ್ ಕೂಡ ಹೆಚ್ಚಿನ ಜವಾಬ್ದಾರಿ ಹೊರಲು ಸಜ್ಜಾಗುವಂತೆ ಸೂಚನೆ ನೀಡಿದೆ. ವ್ಯಕ್ತಿ ಪ್ರತಿಷ್ಠೆಗಿಂತ ಪಕ್ಷದ ಪ್ರತಿಷ್ಠೆ ಮುಖ್ಯ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವುದು ಮುಖ್ಯ. ಈ ದಿಸೆಯಲ್ಲಿ ಪಕ್ಷವನ್ನು ಸಂಘಟಿಸಬೇಕಿದೆ. ರಾಜ್ಯದಲ್ಲಿ ಪಕ್ಷ ಸದೃಢವಾಗಿರುವ ಬಗ್ಗೆ ಹೈಕಮಾಂಡ್ ಗೆ ಸ್ಪಷ್ಟವಾಗಿ ಮನವರಿಕೆ ಮಾಡಿದ್ದೇವೆ. ಉಪಚುನಾವಣೆ ಫಲಿತಾಂಶದ ನಂತರ ನಾವು ಮತ್ತಷ್ಟು ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದ್ದು, ಮೈಮರೆಯುವಂತಿಲ್ಲ.’

ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಕೆ ಹಾಗೂ ಆ ಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಅವರ ಪ್ರಯತ್ನಕ್ಕೆ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ‘ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ತಮ್ಮನ್ನು ಮುಂದುವರಿಸುವುದು ಹೈಕಮಾಂಡಿಗೆ ಬಿಟ್ಟ ವಿಚಾರ. ಯಾವುದೇ ಜವಾಬ್ದಾರಿ ಹೊರಲು ನಾವು ಸಿದ್ಧ. ದೇಶ ಕಟ್ಟಲು ಕಾಂಗ್ರೆಸ್ ನಲ್ಲಿ ಸಮರ್ಥ ನಾಯಕರಿದ್ದಾರೆ’ ಎಂದಷ್ಟೇ ಉತ್ತರಿಸಿದರು.

Leave a Reply