ಮುಸ್ಲಿಂ ಅಲ್ಲದವನನ್ನು ಹೊಡೆದೆಬ್ಬಿಸಬೇಕೇಕೆ ಮೈಕಿನೊಳಗಿನ ಪ್ರಾರ್ಥನೆ, ಸೋನು ನಿಗಮ್ ಹೇಳಿದ್ದರಲ್ಲಿ ಏನಿದೆ ಆಕ್ಷೇಪಣೆ?

ಡಿಜಿಟಲ್ ಕನ್ನಡ ಟೀಮ್:

ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಇಂದು ಬೆಳಗ್ಗೆಯೇ ಟ್ವಿಟರ್ ನಲ್ಲಿ ವಿವಾದಕ್ಕೆ ಸಿಲುಕಿದ್ದಾರೆ. ಅದು, ಮಸೀದಿಯಲ್ಲಿ ಪ್ರತಿನಿತ್ಯ ಬೆಳಗಿನ ಜಾವ ಪ್ರಾರ್ಥನೆಯನ್ನು ಜೋರಾಗಿ ಹಾಕುವ ಪದ್ಧತಿಯನ್ನು ಪ್ರಶ್ನಿಸಿ.

ಸೋನು ನಿಗಮ್ ಬೆಳ್ಳಂಬೆಳಗ್ಗೆ ಈ ಟ್ವೀಟ್ ಮಾಡಿದ್ದೇಕೆ ಎಂಬ ಪ್ರಶ್ನೆ ಮೂಡಿದರೆ ಅದಕ್ಕೆ ಉತ್ತರ ಹೀಗಿದೆ… ಸೋನು ನಿಗಮ್ ಅವರ ನಿವಾಸದ ಬಳಿ ಇರುವ ಮಸೀದಿಯು ಎಂದಿನಂತೆ ಇಂದು ಸಹ ಬೆಳಗಿನ ಜಾವ ಸ್ಪೀಕರ್ ಮೂಲಕ ಜೋರಾಗಿ ಪ್ರಾರ್ಥನೆ ಹಾಕಿದೆ. ಇದರಿಂದ ಎಚ್ಚರವಾದ ಸೋನು ನಿಗಮ್, ತಮ್ಮ ನಿದ್ರೆಗೆ ಅಡಚಣೆಯಾಗಿದ್ದರಿಂದ ಬೇಸರಗೊಂಡರು. ತಮ್ಮ ಈ ಬೇಸರವನ್ನು ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಗಳ ಮೂಲಕ ಹೊರ ಹಾಕಿದರು. ಸೋನು ನಿಗಮ್ ಅವರ ಈ ಟ್ವೀಟ್ ಗಳಿಗೆ ಸಾಕಷ್ಟು ಜನರಿಂದ ಟೀಕೆಗಳು ಎದುರಾಗಿವೆ. ಹಾಗಾದರೇ ಸೋನು ನಿಗಮ್ ಟ್ವೀಟ್ ಮಾಡಿದ್ದಾದರೂ ಏನು? ಇಲ್ಲಿದೆ ನೋಡಿ…

‘ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ, ನಾನು ಮುಸಲ್ಮಾನನಲ್ಲ ಆದರೂ ಅಜಾನ್ ಮೂಲಕ ಬೆಳಗಿನ ಜಾವ ಎದ್ದೇಳುವ ಪರಿಸ್ಥಿತಿ ಇದೆ. ಇಂತಹ ಬಲವಂತದ ಧಾರ್ಮಿಕ ಆಚರಣೆಗಳು ಭಾರತದಲ್ಲಿ ನಿಲ್ಲುವುದಾದರೂ ಯಾವಾಗ.’

‘ಪ್ರವಾದಿ ಮೊಹಮದ್ ಅವರು ಇಸ್ಲಾಂ ಧರ್ಮವನ್ನು ಪರಿಚಯಿಸಿದಾಗ ಯಾವುದೇ ವಿದ್ಯುತ್ ಇರಲಿಲ್ಲ. ಎಡಿಸನ್ ಅನ್ವೇಷಣೆ ನಂತರ ಈ ಗದ್ಧಲವನ್ನು ನಾನೇಕೆ ಕೇಳಬೇಕು?’

‘ದೇವಾಲಯಗಳಲ್ಲಿ ಗುರುದ್ವಾರಗಳಲ್ಲಿ ವಿದ್ಯುತ್ ಉಪಕರಣ ಬಳಸಿ ಧರ್ಮವನ್ನು ಪಾಲಿಸದವರನ್ನು ಎಚ್ಚರಿಸುವ ಪದ್ಧತಿಯ ಮೇಲೆ ನನಗೆ ನಂಬಿಕೆ ಇಲ್ಲ. ಹಾಗಾದರೆ ಈ ರೀತಿಯಾದ ಧಾರ್ಮಿಕವಾಗಿ ಒತ್ತಾಯ ಹೇರುವುದೇಕೆ?’

‘ಇದು ಕೇವಲ ಗೂಂಡಾಗಿರಿ ಅಷ್ಟೇ…’

ಸೋನು ನಿಗಮ್ ಅವರ ಈ ಟ್ವೀಟ್ ಗಳನ್ನು ಕೆಲವರು ಬೆಂಬಲಿಸಿದರೆ, ಮತ್ತೆ ಕೆಲವರು ಟೀಕೆ ಮಾಡಿ ಸಹಿಷ್ಣುತೆಯ ಪಾಠ ಹೇಳಿದ್ದಾರೆ. ಸೋನು ನಿಗಮ್ ಅವರ ಟ್ವೀಟ್ ಅನ್ನು ಟೀಕಿಸುವ ಎರಡು ಟ್ವೀಟ್ ಗಳು ಹೀಗಿವೆ…

ಸ್ಮೈಲ್ಸ್61446: ನಮ್ಮ ಧಾರ್ಮಿಕ ಭಿನ್ನತೆಯನ್ನು ಒಪ್ಪಿಕೊಳ್ಳುವುದು ಹಾಗೂ ಗೌರವಿಸುವುದನ್ನು ಕಲಿಯಿರಿ. ವಿವಿಧ ಧಾರ್ಮಿಕ ಸಮಾಜದಲ್ಲಿ ಬದುಕುವಾಗ ಸ್ವಲ್ಪ ಪ್ರಮಾಣದಲ್ಲಾದರು ಸಹಿಷ್ಣುತೆಯನ್ನು ರೂಢಿಸಿಕೊಳ್ಳಿ.

ಶೇರು: ಕೋಟ್ಯಾಂತರ ಮುಸಲ್ಮಾನರು ವಾಸಿಸುತ್ತಿರುವ ಭಾರತದಲ್ಲಿ, ದೇಶದ ಪ್ರೀತಿಯ ಗಾಯಕ ಸೋನು ನಿಗಮ್ ಅವರ ನಿದ್ದೆಗೆ ಅಡ್ಡಿಯಾಗುತ್ತಿರುವ ಅಜಾನ್ ಅನ್ನು ನಿಲ್ಲಿಸಲೇಬೇಕು. ಎಲ್ಲಿದೆ ಸಹಿಷ್ಣುತೆ?

ಇಷ್ಟಕ್ಕೂ ಸೋನು ನಿಗಮ್ ಹೇಳಿರುವುದರಲ್ಲಿ ಆಕ್ಷೇಪಣೆ ಮಾಡುವ ಅಂಶವಾದರೂ ಏನಿದೆ. ಇಲ್ಲಿ ಸೋನು ನಿಗಮ್ ಕೇವಲ ಮಸೀದಿ ಆಜಾನ್ ಪದ್ಧತಿಯನ್ನಷ್ಟೇ ಉದ್ದೇಶಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿಲ್ಲ. ದೇವಸ್ಥಾನ ಗುರುದ್ವಾರಗಳ ಇಂತಹ ಆಚರಣೆಯಿಂದ ಬೇರೆಯವರಿಗೆ ತೊಂದರೆಯಾಗುತ್ತಿರುವುದನ್ನು ಪ್ರಶ್ನಿಸಿದ್ದಾರೆ. ಇಲ್ಲಿ ಮುಸಲ್ಮಾನರ ಅಂಶ ಬಂದಿರುವುದರಿಂದ ಸಹಜವಾಗಿ ಉದಾರವಾದಿಗಳಿಗೆ ಉರಿ ಹತ್ತುಕೊಂಡಿದೆ. ಯಾವುದೇ ಧರ್ಮ ಆರಂಭವಾದಾಗಲೂ ಜೋರಾಗಿ ಪ್ರಾರ್ಥನೆ ಮಾಡುವ ಮೂಲಕ ಬೇರೆಯವರ ಶಾಂತಿಗೆ ಧಕ್ಕೆ ತರುವಂತೆ ಪ್ರಾರ್ಥನೆ ಮಾಡಬೇಕು ಎಂದು ಯಾವುದೇ ಪ್ರವಾದಿಯೂ ಹೇಳಿಲ್ಲ. ಕೇವಲ ಮಸೀದಿಗಳಲ್ಲಿ ಮಾತ್ರವಲ್ಲ, ಹಬ್ಬ ಹರಿದಿನಗಳ ಹೆಸರಿನಲ್ಲಿ ಸಿನಿಮಾ ಹಾಡುಗಳನ್ನು ಜೋರಾಗಿ ಹಾಕುವ ಬಗ್ಗೆ ಸಾಕಷ್ಟು ಜನರಲ್ಲಿ ಅತೃಪ್ತಿ ಇತ್ತು. ಈ ವಿಚಾರದ ಬಗ್ಗೆ ಮಾತನಾಡಿದರೆ ಈ ರೀತಿಯ ವಿವಾದ ಸೃಷ್ಟಿಯಾಗುತ್ತದೇ ಅಂತಲೇ ಬಹುತೇಕರು ತಮ್ಮ ಮನಸ್ಸಿನಲ್ಲೇ ಗೊಣಗಾಡುತ್ತಿದ್ದರು. ಈಗ ಸೋನು ನಿಗಮ್ ಅವರ ಈ ಹೇಳಿಕೆ ಒಂದು ಚರ್ಚೆಯನ್ನು ಹುಟ್ಟುಹಾಕಿದ್ದು, ಇದನ್ನು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಸದೇ ವಿಶಾಲ ವ್ಯಾಪ್ತಿಯಲ್ಲಿ ಪರಿಗಣಿಸಿ ಆರೋಗ್ಯಕರ ಚರ್ಚೆ ನಡೆಸುವ ಅಗತ್ಯ ಇದೆ.

Leave a Reply