ಹಣ ಬಲದಿಂದ ಪಕ್ಷದ ಚಿಹ್ನೆಯನ್ನೇ ಕೊಳ್ಳಲು ಮುಂದಾದ ದಿನಕರನ್, ದೆಹಲಿ ಪೊಲೀಸರಿಂದ ಎಫ್ಐಆರ್!

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಿನ ರಾಜಕೀಯದಲ್ಲಿ ತಮ್ಮ ಪಾರುಪತ್ಯ ಸಾಧಿಸಲು ಎಐಡಿಎಂಕೆ ಪಕ್ಷದ ಮೇಲೆ ನಿಯಂತ್ರಣಕ್ಕೆ ಮುಂದಾಗಿರುವ ಶಶಿಕಲಾ ಅವರ ಬಣಕ್ಕೆ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯಿಂದ ಪಕ್ಷದ ಮೇಲೆ ಹೇಗೆ ಬಂಡಾಯದ ಪೆಟ್ಟು ಬಿದ್ದೆದೆ ಎಂಬುದರ ಬಗ್ಗೆ ನಿನ್ನೆಯಷ್ಟೇ ವರದಿ ಓದಿದ್ದಿರಿ. ಈಗ ಶಶಿಕಲಾ ಅವರ ಸಹೋದರ ಸಂಬಂಧಿ ಟಿವಿವಿ ದಿನಕರನ್ ಚುನಾವಣೆ ವೇಳೆ ಪಕ್ಷದ ಚಿಹ್ನೆ ತಮಗೇ ಸಿಗಬೇಕು ಎಂಬ ಕಾರಣಕ್ಕೆ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆ ಮೂಲಕ ಶಶಿಕಲಾ ಅವರ ಪಾಳಯದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಸೋಮವಾರ ಬೆಳಗ್ಗೆ ನವದೆಹಲಿಯ ಹೊಟೇಲ್ ಮೇಲೆ ದಾಳಿ ನಡೆಸಿದ ಪೊಲೀಸರು ಸುಕೇಶ್ ಚಂದ್ರಶೇಖರ್ ಎಂಬಾತನನ್ನು ಬಂಧಿಸಿ, ಆತನಿಂದ ₹ 1.5 ಕೋಟಿ ನಗದು ಹಾಗೂ ಬಿಎಂಡಬ್ಲ್ಯೂ ಹಾಗೂ ಮರ್ಸಿಡೀಸ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈತನ ಮುಖಾಂತರವಾಗಿ ದಿನಕರನ್ ಎಐಎಡಿಎಂಕೆ ಪಕ್ಷದ ಚಿಹ್ನೆಯನ್ನು ಖರೀದೀಸಲು ಅಧಿಕಾರಿಗಳಿಗೆ ₹ 50 ಕೋಟಿ ಲಂಚದ ಆಮೀಷ ನೀಡಿದ್ದರು ಎಂಬ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಿನಕರನ್ ವಿರುದ್ಧ ಈಗ ಎಫ್ಐಆರ್ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.

ಈ ಆರೋಪವನ್ನು ತಳ್ಳಿಹಾಕಿರುವ ದಿನಕರನ್, ‘ನಾನು ಯಾರಿಗೂ ಲಂಚವನ್ನು ನೀಡಲು ಮುಂದಾಗಿಲ್ಲ. ನನಗೆ ಸಮನ್ಸ್ ಬಂದಿದ್ದರೆ ಅದನ್ನು ಕಾನೂನಿನ ಮೂಲಕವೇ ಎದುರಿಸುತ್ತೇನೆ. ಈ ಆರೋಪಗಳು ಸುಳ್ಳು, ನನಗೆ ಸುಕೇಶ್ ಎಂಬ ಹೆಸರಿನ ವ್ಯಕ್ತಿಯೇ ಗೊತ್ತಿಲ್ಲ’ ಎಂದಿದ್ದಾರೆ. ಅಷ್ಟೇ ಅಲ್ಲದೇ ಇಂದು ಜೈಲಿನಲ್ಲಿರುವ ಶಶಿಕಲಾ ಅವರನ್ನು ಭೇಟಿ ಮಾಡುತ್ತಿರುವುದಾಗಿಯೂ ತಿಳಿಸಿದ್ದು, ಇದು ಸಾಮಾನ್ಯ ಭೇಟಿ, ಯಾವುದೇ ಮಹತ್ವ ಇಲ್ಲ ಎಂದಿದ್ದಾರೆ.

ಪಕ್ಷದ ಚಿಹ್ನೆ ಪಡೆಯಲು ದಿನಕರನ್ ಅಧಿಕಾರಿಗಳಿಗೆ ಲಂಚ ನೀಡುವ ಧೈರ್ಯ ಮಾಡಿದ್ದಾದರು ಏಕೆ ಎಂಬ ಪ್ರಶ್ನೆಗೆ ಉತ್ತರ ಹೀಗಿದೆ… ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ನಂತರ ಕೇವಲ ಆರ್.ಕೆ ನಗರ ಕ್ಷೇತ್ರದ ವಿಧಾನಸಭೆ ಸ್ಥಾನವಷ್ಟೇ ತೆರವಾಗಿಲ್ಲ. ಎಐಡಿಎಂಕೆ ಪಕ್ಷದಲ್ಲಿ ಜಯಲಲಿತಾ ಅವರ ಉತ್ತರಾಧಿಕಾರಿ ಸ್ಥಾನವೂ ತೆರವಾಗಿತ್ತು. ಈ ಸ್ಥಾನಕ್ಕೆ ಜಯಲಲಿತಾ ಸ್ನೇಹಿತ ಶಶಿಕಲಾ ಕಣ್ಣಿಟ್ಟಿದ್ದು, ತಾನು ಜೈಲು ಶಿಕ್ಷೆ ಅನುಭವಿಸುತ್ತಿರುವ ನಿಟ್ಟಿನಲ್ಲಿ ತನ್ನ ಸಹೋದರ ಸಂಬಂಧಿ ಟಿವಿವಿ ದಿನಕರನ್ ಅವರನ್ನು ಈ ಜಾಗದಲ್ಲಿ ಕೂರಿಸಿ ಪರೋಕ್ಷವಾಗಿಯಾದರೂ ಪಕ್ಷವನ್ನು ತನ್ನ ಮುಷ್ಟಿಯಲ್ಲಿ ಇಟ್ಟುಕೊಳ್ಳಲು ನಿರ್ಧರಿಸಿದರು. ಆದರೆ ಇದಕ್ಕೆ ಜಯಲಲಿತಾ ಅವರ ಆಪ್ತ ನಾಯಕ ಓ.ಪನ್ನೀರ್ ಸೆಲ್ವಂ ಬಣ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಸೆಲ್ವಂ ಜಯಾ ಅವರ ಉತ್ತರಾಧಿಕಾರಿಯಾಗಲು ಪಣ ತೊಟ್ಟಿದ್ದಾರೆ. ಹೀಗಾಗಿ ಈ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಉಭ ಬಣಗಳಿಗೂ ಆರ್.ಕೆ ನಗರ ಉಪಚುನಾವಣೆಯನ್ನು ಹೋರಾಟದ ಕಣವನ್ನಾಗಿ ಪರಿಣಮಿಸಿತ್ತು. ಜಯಲಲಿತಾ ಅವರನ್ನು ಪ್ರತಿನಿಧಿಸುತ್ತಿದ್ದ ಪಕ್ಷದ ಚಿಹ್ನೆ ಸಿಕ್ಕರೆ ಚುನಾವಣೆಯಲ್ಲಿ ಹೆಚ್ಚು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಈ ಚಿಹ್ನೆಗೆ ಕುರಿತಾಗಿ ಈ ಎರಡೂ ಬಣ ತಿಕ್ಕಾಟ ನಡೆಸಿತು. ಈ ಕಿತ್ತಾಟದಲ್ಲಿ ಚುನಾವಣಾ ಆಯೋಗ ಪಕ್ಷದ ಚಿಹ್ನೆಯನ್ನು ಯಾರಿಗೂ ನೀಡದೇ ಇಬ್ಬರಿಗೂ ಬೇರೆ ಬೇರೆ ಚಿಹ್ನೆ ನೀಡಿತ್ತು. ಹೀಗಾಗಿ ಹಣ ಕೊಟ್ಟಾದರೂ ಸರಿಯೇ ಪಕ್ಷದ ಚಿಹ್ನೆ ತಾನೇ ಪಡೆಯಬೇಕು ಎಂದು ದಿನಕರನ್ ಅಧಿಕಾರಿಗೆ ಲಂಚ ನೀಡಲು ಮುಂದಾಗಿ ಮತ್ತೊಂದು ಸಮಸ್ಯೆ ಮೈಮೇಲೆ ಎಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Reply