ದಿನಕರನ್ ಹೊರಗಿಟ್ಟು ಒಂದುಗೂಡುವವೇ ಎಐಎಡಿಎಂಕೆ ಬಣಗಳು? ಚಿನ್ನಮ್ಮ ನೇಪಥ್ಯದಾಟಕ್ಕೆ ತೆರೆ?

ಡಿಜಿಟಲ್ ಕನ್ನಡ ಟೀಮ್:

ಜೈಲಿನಲ್ಲಿದ್ದರೂ ತಮ್ಮ ಸಹೋದರ ಸಂಬಂಧಿ ಟಿಟಿವಿ ದಿನಕರನ್ ಅವರಿಗೆ ಪಕ್ಷದ ಚುಕ್ಕಾಣಿ ಕೊಟ್ಟು ತಮಿಳುನಾಡಿನ ರಾಜಕೀಯದ ಮೇಲೆ ನಿಯಂತ್ರಣ ಸಾಧಿಸುವ ಶಶಿಕಲಾ ಅವರ ಆಟಕ್ಕೆ ತಾರ್ಕಿಕ ತೆರೆ ಬೀಳುವ ಸೂಚನೆಗಳು ಗೋಚರವಾಗುತ್ತಿವೆ. ಕಾರಣ, ಉಪಚುನಾವಣೆಯಲ್ಲಿ ಹಣದ ಬಳಕೆ, ಪಕ್ಷದ ಚಿಹ್ನೆ ಪಡೆಯಲು ಅಧಿಕಾರಿಗಳಿಗೆ ಲಂಚದ ಪ್ರಕರಣದಲ್ಲಿ ಸಿಲುಕಿರುವ ಟಿಟಿವಿ ದಿನಕರನ್ ಬಂಧನವಾಗುವ ಸಾಧ್ಯತೆ ದಟ್ಟವಾಗಿದೆ.

ಚುನಾವಣೆ ವೇಳೆ ಐಟಿ ಅಧಿಕಾರಿಗಳ ದಾಳಿಯ ನಂತರ ಪಕ್ಷದ ಕೆಲವು ಹಿರಿಯ ನಾಯಕರು ದಿನಕರನ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರು. ಇದರ ಬೆನ್ನಲ್ಲೇ ನಿನ್ನೆ ನವದೆಹಲಿ ಪೊಲೀಸರು ಲಂಚ ಪ್ರಕರಣದ ಮಧ್ಯವರ್ತಿ ಸುಕೇಶ್ ಚಂದ್ರಶೇಖರನ್ ಎಂಬಾತನನ್ನು ಬಂಧಿಸಿ, ದಿನಕರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಎಲ್ಲ ಬೆಳವಣಿಗೆಯಿಂದ ಎಐಎಡಿಎಂಕೆ ಪಕ್ಷದಲ್ಲಿನ ರಾಜಕೀಯ ಬೆಳವಣಿಗೆ ಮತ್ತೆ ಗರಿಗೆದರಿದೆ. ಲಂಚದ ಪ್ರಕರಣದಲ್ಲಿ ಸಿಲುಕಿರುವ ದಿನಕರನ್ ಬಂಧನವಾಗುವ ಸಾಧ್ಯತೆ ಹೆಚ್ಚಾಗುತ್ತಿದ್ದಂತೆ ಪಕ್ಷ ಹಾಗೂ ಸರ್ಕಾರದ ಅಸ್ಥಿತ್ವದ ಬಗ್ಗೆ ಆತಂಕಗೊಂಡಿರುವ ಎಐಎಡಿಎಂಕೆ ನಾಯಕರು ಎರಡು ಬಣಗಳನ್ನು ಮತ್ತೆ ಒಂದುಗೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಸರ್ಕಾರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದೆ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಓ ಪನ್ನೀರ್ ಸೆಲ್ವಂ ಅವರ ಬಂಡಾಯ ಬಣದ ಜತೆ ಶಶಿಕಲಾ ಅವರ ಬಣ ರಾಜಿ ಮಾಡಿಕೊಳ್ಳುವ ಬಗ್ಗೆ ಗಂಭೀರ ಚರ್ಚೆಯಾಗುತ್ತಿದ್ದು, ಎಲ್ಲರ ಅಭಿಪ್ರಾಯವೂ ದಿನಕರನ್ ಅವರಿಗೆ ಗೇಟ್ ಪಾಸ್ ನೀಡುವುದಾಗಿದೆ ಎಂದು ಎಐಎಡಿಎಂಕೆ ಪಕ್ಷದ ಶಶಿಕಲಾ ಬಣದ ಮೂಲಗಳು ಮಾಹಿತಿಕೊಟ್ಟಿವೆ.

ಮತ್ತೊಂದೆಡೆ, ಮಂಗಳವಾರ ದಿನಕರನ್ ಬೆಂಗಳೂರಿನ ಜೈಲಿನಲ್ಲಿರುವ ಶಶಿಕಲಾ ಅವರನ್ನು ಭೇಟಿ ಮಾಡಿದ ನಂತರ ತಮ್ಮ ಪಕ್ಷದ ಉಪ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ. ದೆಹಲಿ ಪೊಲೀಸರು ಚೆನ್ನೈನಲ್ಲಿ ದಿನಕರನ್ ಅವರನ್ನು ಭೇಟಿ ಮಾಡಿ ಸಮನ್ಸ್ ನೀಡಲಿದ್ದಾರೆ. ಈ ವೇಳೆ ದಿನಕರನ್ ಅವರನ್ನು ಬಂಧಿಸುವ ಸಾಧ್ಯತೆ ಇದ್ದು, ಒಂದು ವೇಳೆ ಬಂಧನವಾದರೆ, ಎಐಎಡಿಎಂಕೆ ಪಕ್ಷದ ಎರಡೂ ಬಣಗಳು ಒಂದಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಎಐಎಡಿಎಂಕೆ ಸಚಿವರೊಬ್ಬರು ಮಾಹಿತಿ ನೀಡಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಈ ಎಲ್ಲ ಬೆಳವಣಿಗೆಗಳ ಕುರಿತು ಚರ್ಚೆ ನಡೆಸುವ ಸಲುವಾಗಿ ಮಂಗಳವಾರ ಸಂಜೆ ಚೆನ್ನೈನಲ್ಲಿ ಸಭೆ ನಡೆಸಲು ಮುಖ್ಯಮಂತ್ರಿ ಇ.ಪಳನಿಸಾಮಿ ಪಕ್ಷದ ಎಲ್ಲಾ ಶಾಸಕರಿಗೂ ಸೂಚನೆ ಕೊಟ್ಟಿದ್ದಾರೆ. ಇತ್ತ ಪನ್ನೀರ್ ಸೆಲ್ವಂ ಅವರು ತಾವು ಸಂಧಾನಕ್ಕೆ ತಾವು ಸಿದ್ಧ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಸಂಧಾನದಲ್ಲಿ ಪನ್ನೀರ್ ಸೆಲ್ವಂ ಅವರಿಗೆ ವಿತ್ತ ಖಾತೆಯ ಜತೆಗೆ ಇತರೆ ಪ್ರಮುಖ ಜವಾಬ್ದಾರಿಯನ್ನು ಕೊಟ್ಟು, ಎರಡೂ ಬಣಗಳನ್ನು ವಿಲೀನ ಮಾಡುವ ಲೆಕ್ಕಾಚಾರಗಳು ನಡೆಯುತ್ತಿವೆ.

ಈ ಎಲ್ಲ ಬೆಳವಣಿಗೆಗಳಿಂದ ಜೈಲಿನಿಂದಲೇ ಪಕ್ಷವನ್ನು ನಿಯಂತ್ರಿಸಲು ಸಕಲ ಪ್ರಯತ್ನ ಮಾಡಿದ್ದ ಶಶಿಕಲಾ ಅವರಿಗೆಗೆ ತೀವ್ರ ಹಿನ್ನಡೆಯಾಗುತ್ತಿರುವುದು ಸ್ಪಷ್ಟವಾಗಿದೆ.

Leave a Reply