ಕೆಪಿಸಿಸಿ ಅಧ್ಯಕ್ಷ ಸ್ಥಾನ- ಮುಂದಿನ ಚುನಾವಣೆ ನಾಯಕತ್ವ- ಜೆಡಿಎಸ್ ಬಂಡಾಯ ಶಾಸಕರ ಕುರಿತಾಗಿ ದಿಗ್ವಿಜಯ್ ಸಿಂಗ್ ನಿರ್ಧಾರ ಏನು?

ಡಿಜಿಟಲ್ ಕನ್ನಡ ಟೀಮ್:

‘ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ… ಮುಂದಿನ ಚುನಾವಣೆಯನ್ನು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಎದುರಿಸಲಾಗುವುದು…’ ಇದು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ಅವರ ಸ್ಪಷ್ಟ ಮಾತುಗಳು.

ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಪರಮೇಶ್ವರ್ ಅವರ ಎರಡನೇ ಅವಧಿ ಮುಕ್ತಾಯವಾಗುವ ಹಂತದಲ್ಲಿ ಈ ಸ್ಥಾನವನ್ನು ಯಾರು ಅಲಂಕರಿಸಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿತ್ತು. ಈ ಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದ್ದು, ಮುಂದಿನ ವರ್ಷವೇ ವಿಧಾನಸಭೆ ಚುನಾವಣೆ ಇರುವುದರಿಂದ ಈ ಹಂತದಲ್ಲಿ ಪಕ್ಷದ ಪ್ರಮುಖ ಜವಾಬ್ದಾರಿಗಳಲ್ಲಿ ಯಾವುದೇ ಬದಲಾವಣೆ ಮಾಡದಿರುವ ಬಗ್ಗೆ ಹೈಕಮಾಂಡ್ ನಿರ್ಧರಿಸಿರುವುದು ದಿಗ್ವಜಯ್ ಸಿಂಗ್ ಅವರ ಮಾತುಗಳಲ್ಲಿ ಸ್ಪಷ್ಟವಾಗುತ್ತಿವೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ದಿಗ್ವಿಜಯ್ ಸಿಂಗ್ ಅವರು ಈ ಬಗ್ಗೆ ಹೇಳಿರುವುದಿಷ್ಟು…

‘ಅಧ್ಯಕ್ಷ ಸ್ಥಾನದ ವಿಷಯವಾಗಿ ಯಾರೂ ಪರ ಮತ್ತು ವಿರೋಧ ಚರ್ಚೆ ನಡೆಸಬಾರದು. ಯಾವುದೇ ತೀರ್ಮಾನವಿದ್ದರೂ ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಇನ್ನು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಯಾರು ಎಂಬ ವಿಷಯವನ್ನು ಚುನಾವಣೆ ನಂತರವೇ ಸಭೆ ಸೇರಿ ಆಯ್ಕೆ ಮಾಡಲಾಗುವುದು. ಮುಂಬರುವ ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲೇ ಎದುರಿಸಲಿದ್ದು, ಪ್ರದೇಶ ಕಾಂಗ್ರೆಸ್ ಈಗಿನಿಂದಲೇ ಸಜ್ಜುಗೊಳ್ಳುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ರಾಜ್ಯದ ಇತರೆ ನಾಯಕರನ್ನು ವಿಶ್ವಾಸಕ್ಕೆ ಪಡೆದು ಪಕ್ಷದ ಸಂಘಟನೆ ಮಾಡಲಾಗುವುದು.’

ಇದೇ ವೇಳೆ ಜೆಡಿಎಸ ಬಂಡಾಯ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ದಿಗ್ವಿಜಯ್ ಸಿಂಗ್ ಇದಕ್ಕೆ ಹಸಿರು ನಿಶಾನೆ ತೋರಿದ್ದಾರೆ ಎಂದು ಮೂಲಗಳು ಮಾಹಿತಿ ಕೊಟ್ಟಿವೆ. ಶಾಸಕರಾದ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಇತರೆ ಶಾಸಕರಾದ ಚೆಲುವರಾಯಸ್ವಿಮಿ, ಅಖಂಡ ಶ್ರೀನಿವಾಸಮೂರ್ತಿ, ಭೀಮಾನಾಯಕ್ ಸೇರಿದಂತೆ ಇತರರು ದಿಗ್ವಿಜಯ್ ಅವರೊಂದಿಗೆ ಅಂತಿಮ ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Leave a Reply