ಲಂಡನ್ನಿನಲ್ಲಿ ವಿಜಯ್ ಮಲ್ಯ ಬಂಧನ- ಬಿಡುಗಡೆ, ಅರುಣ್ ಜೇಟ್ಲಿಯ ಹಸ್ತಾಂತರ ಮಾತುಕತೆ ಫಲಿಸುತ್ತಿದೆಯೇ?

ಡಿಜಿಟಲ್ ಕನ್ನಡ ಟೀಮ್:

ಬ್ಯಾಂಕುಗಳಿಂದ ಪಡೆದ ಸಾವಿರಾರು ಕೋಟಿ ಸಾಲವನ್ನು ಪಾವತಿಸದೇ ಉದ್ದೇಶಿತ ಸುತ್ಥಿದಾರನಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯ, ಕಳೆದ ವರ್ಷ ದೇಶ ಬಿಟ್ಟು ಲಂಡನ್ ನಲ್ಲಿ ತಲೆಮರೆಸಿಕೊಂಡಿದ್ದರು. ಈಗ ಮಲ್ಯರನ್ನು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ನಂತರ ಕೋರ್ಟಿಗೆ ಹಾಜರು ಮಾಡಿದಾಗ ಮಲ್ಯ ಅವರಿಗೆ ಜಾಮೀನು ಸಿಕ್ಕಿದೆ. ಆದರೆ ಮಲ್ಯ ಪ್ರಕರಣವನ್ನು ಇಂಗ್ಲೆಂಡ್ ಗಂಭೀರವಾಗಿ ತೆಗೆದುಕೊಂಡಿರುವುದು ಸಾಬೀತಾಗಿದೆ.

ಹಣದ ಅವ್ಯವಹಾರದ ಆರೋಪದ ಮೇರೆಗೆ ಮಂಗಳವಾರ ಬೆಳಗ್ಗೆ 9.30ರ ಸುಮಾರಿಗೆ ವಿಜಯ್ ಮಲ್ಯ ಅವರನ್ನು ಸ್ಕಾಟ್ಲೆಂಡ್ ಪೊಲೀಸರು ಬಂಧಿಸಿದ್ದಾರೆ. ಮಲ್ಯ ಅವರನ್ನು ಲಂಡನಿನ್ನ ಕೋರ್ಟಿಗೆ ಹಾಜರು ಪಡಿಸಲಾಗುವುದು ಎಂಬ ವರದಿಗಳು ಬಂದಿವೆ. ಮಲ್ಯ ಅವರ ಬಂಧನದ ಬಗ್ಗೆ ಪೊಲೀಸರು ಸಿಬಿಐಗೆ ಮಾಹಿತಿ ನೀಡಿದ್ದು, ಇದರ ಬೆನ್ನಲ್ಲೇ ಭಾರತ ಮಲ್ಯ ಅವರನ್ನು ಹಸ್ತಾಂತರ ಮಾಡುವಂತೆ ಮನವಿ ಮಾಡಿದೆ. ಈ ಸಂಬಂಧ ಸಿಬಿಐ, ಜಾರಿ ನಿರ್ದೇಶನಾಲಯ ಲಂಡನಿಗೆ ಮನವಿಯನ್ನು ಕಳುಹಿಸಿದೆ.

ಇಂಗ್ಲೆಂಡ್ ಇಂಥ ಕ್ರಮ ಕೈಗೊಂಡಿರುವುದಕ್ಕೆ ಜಿಜ್ಞಾಸೆಯೂ ವ್ಯಕ್ತವಾಗುತ್ತಿದೆ. ಏಕೆಂದರೆ ವರ್ಷಗಳಿಂದ ಮಲ್ಯ ಅಲ್ಲಿದ್ದರೂ ಅವರ ನಿರಾಳ ಬದುಕಿಗೇನೂ ಅಡ್ಡಿಯಾಗಿರಲಿಲ್ಲ. ಅವರು ಭಾರತದಲ್ಲಿ ಹಣದ ವಂಚನೆ ಮಾಡಿ ಹೋಗಿದ್ದಾರೆಂಬುದು ಅವತ್ತಿಗೂ ಇದ್ದ ಸತ್ಯವೇ ಆಗಿದ್ದರೂ ಇಂಗ್ಲೆಂಡ್ ಕಾನೂನು ಮಲ್ಯರನ್ನು ಮುಟ್ಟಿರಲಿಲ್ಲ. ತೀರ ಇತ್ತೀಚೆಗೆ ಬ್ರಿಟನ್ ವಿತ್ತ ಸಚಿವ ಫಿಲಿಪ್ ಹಾಮಂಡ್ ನವದೆಹಲಿಗೆ ಭೇಟಿ ಇತ್ತಾಗ, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸುದೀರ್ಘ ಮಾತುಕತೆ ಮಾಡಿದ್ದರು. ಇಂಧನ ಕ್ಷೇತ್ರದ ಹೂಡಿಕೆಗೆ ಸಂಬಂಧಿಸಿದ ಹಲವು ಒಡಂಬಡಿಕೆಗಳನ್ನು ಮಾಡಿಕೊಳ್ಳುವಾಗಲೇ ವಿಜಯ್ ಮಲ್ಯ ಪ್ರಶ್ನೆಯೂ ಪ್ರಸ್ತಾಪಿತವಾಗಿತ್ತು. ಆ ಬಗ್ಗೆ ಇಂಗ್ಲೆಂಡ್ ಸಚಿವರು ಹೆಚ್ಚೇನೂ ಪ್ರತಿಕ್ರಿಯಿಸದೇ ಅದು ಕಾಯ್ದೆಗೆ ಸಂಬಂಧಿಸಿದ ವಿಷಯ ಎಂದಿದ್ದರು. ಅದಕ್ಕೂ ಮೊದಲು ಬ್ರಿಟನ್ ಪ್ರಧಾನಿ ಥೆರೇಸಾ ಮೇ ಬಳಿಯೂ ಭಾರತವು ಮಲ್ಯ ಹಸ್ತಾಂತರಕ್ಕೆ ಸಂಬಂಧಿಸಿ ವಿಶೇಷ ಮನವಿ ಸಲ್ಲಿಸಿತ್ತು. ಕಳೆದ ಫೆಬ್ರವರಿಯಲ್ಲಿ ಅರುಣ್ ಜೇಟ್ಲಿ ಇಂಗ್ಲೆಂಡ್ ಭೇಟಿ ಸಹ ಮಾಡಿದ್ದರು. ಇವೆಲ್ಲವೂ ಈಗ ಕೆಲಸ ಮಾಡಿರುವಂತೆ ತೋರುತ್ತದೆ.

ಕಳೆದ ವರ್ಷ ಬ್ಯಾಂಕುಗಳು ತಾವು ನೀಡಿದ್ದ ಸಾಲವನ್ನು ಮರುಪಾವತಿಸುವಂತೆ ಒತ್ತಡ ಹೆಚ್ಚಿಸಿದ ಬೆನ್ನಲ್ಲೇ ಮಲ್ಯ ದೇಶವನ್ನು ಬಿಟ್ಟು ಲಂಡನ್ನಿಗೆ ತೆರಳಿದ್ದರು. ನಂತರ ಭಾರತಕ್ಕೆ ಮರಳದೇ ತಲೆಮರೆಸಿಕೊಂಡಿದ್ದರು. ಇಷ್ಟು ದಿನಗಳ ಕಾಲ ಮಲ್ಯ ವಿರುದ್ಧ ರೆಡ್ ಅಲರ್ಟ್ ಘೋಷಿಸಲು ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಲಂಡನ್ ಸರ್ಕಾರ ಹೇಳುತ್ತಲೇ ಬಂದಿತ್ತು. ಈಗ ಏಕಾಏಕಿ ಮಲ್ಯ ಅವರನ್ನು ಬಂಧಿಸಿರುವ ಸ್ಕಾಟ್ಲೆಂಡ್ ಪೊಲೀಸರು ಹಣದ ಅವ್ಯವಹಾರ ಆರೋಪ ಹೊರಿಸಿದ್ದಾರೆಂಬ ಮಾಹಿತಿ ಇದೆ.

ವಿಜಯ್ ಮಲ್ಯಗೆ ಸಾಲ ಸಿಕ್ಕಿದ್ದೆಲ್ಲ ಈ ಹಿಂದಿನ ಯುಪಿಎ ಆಡಳಿತದಲ್ಲೇ ಆದರೂ ಈ ಬಗ್ಗೆ ಈಗಿನ ಬಿಜೆಪಿ ಸರ್ಕಾರವನ್ನು ಆಗಾಗ ಪ್ರಶ್ನೆಗಳ ಕಟಕಟೆಯಲ್ಲಿ ನಿಲ್ಲಿಸಲಾಗುತ್ತಿತ್ತು. ಕಪ್ಪುಹಣದ ಪ್ರಶ್ನೆ ಬಂದಾಗಲೆಲ್ಲ, ವಿಜಯ್ ಮಲ್ಯರನ್ನು ತಪ್ಪಿಸಿಕೊಳ್ಳುವುದಕ್ಕೆ ಬಿಟ್ಟು ಹೇಗೆ ಕಾಳಧನ ನಿಯಂತ್ರಣದ ಬಗ್ಗೆ ಮಾತಾಡುತ್ತೀರಿ ಎಂಬ ಕಟಕಿಗಳು ಬರುತ್ತಿದ್ದವು. ರೈತರ ಸಾಲ ಮನ್ನಾ ಮಾಡುವುದಕ್ಕೆ ಹಣವಿಲ್ಲ ಎನ್ನುವುದಾದರೆ ಮಲ್ಯ ಅಂಥವರು ಹಾಕಿದ ಪಂಗನಾಮಕ್ಕೇನು ಉತ್ತರ ಎಂಬ ಪ್ರಶ್ನೆಗಳು ಈಗಿನ ಸರ್ಕಾರವನ್ನು ಚುಚ್ಚುತ್ತಲೇ ಇದ್ದವು. ಯಾವ ಆರ್ಥಿಕ ಸುಧಾರಣೆಗಳನ್ನು ತೆಗೆದುಕೊಂಡರೂ, ಒಂದು ಮಲ್ಯ ಪ್ರಕರಣ ಮುಂದಿಟ್ಟು, ಇವೆಲ್ಲವೂ ಕೊನೆಗೆ ಉದ್ಯಮಿಗಳ ಲಾಭಕ್ಕೇನೆ ಎಂಬ ವಾದಗಳನ್ನು ರಾಜಕೀಯ ಎದುರಾಳಿಗಳು ತೇಲಿ ಬಿಡುತ್ತಿದ್ದರು.

ಇವೆಲ್ಲದರ ಒತ್ತಡ ಸಾಕೆಂದು ಕೇಂದ್ರವು ಬ್ರಿಟನ್ ಮೇಲೆ ನಿರ್ಣಾಯಕ ಒತ್ತಡ ಹೇರಿತೇ? ಇನ್ನು ಭಾರತಕ್ಕೆ ಹಸ್ತಾಂತರ ನಡೆಯಲಿದೆಯೇ? ಇದು ಕೇಂದ್ರ ಸರ್ಕಾರಕ್ಕೆ ಒಂದಿಷ್ಟು ಹಿತಭಾವವನ್ನು ಜನರಿಂದ ಒದಗಿಸಲಿದೆಯೇ… ಎಂಬೆಲ್ಲ ಕೌತುಕದ ಪ್ರಶ್ನೆಗಳು ಈಗ ನಲಿದಾಡುತ್ತಿವೆ.

Leave a Reply