4 ವರ್ಷದ ಹುಡುಗಿಯನ್ನು ಭೇಟಿ ಮಾಡಲು ರಸ್ತೆಯಲ್ಲೇ ಕಾರು ನಿಲ್ಲಿಸಿದ ಮೋದಿ!

ಡಿಜಿಟಲ್ ಕನ್ನಡ ಟೀಮ್:

ಸೂರತ್ತಿನ ನಾಲ್ಕು ವರ್ಷದ ನ್ಯಾನ್ಸಿ ಎಂಬ ಹುಡುಗಿಗೆ ಜೀವನಪೂರ್ತಿ ಬೆರಗಿನಿಂದ ಇರಬಹುದಾದಂತ ಒಂದು ಕ್ಷಣ ಎದುರಾಗಿದೆ. ಮುಂದಿನ 20 ವರ್ಷ ಕಳೆದರೂ ಈಕೆ, ತಾನು ಈ ಹಿಂದೆ ರಸ್ತೆಯಲ್ಲೇ ಪ್ರಧಾನಿಯನ್ನು ಭೇಟೆ ಮಾಡಿ ಮಾತುಕತೆ ನಡೆಸಿದ್ದೆ ಎಂದು ಸಂತೋಷದಿಂದ ಹೇಳಿಕೊಳ್ಳುವ ಅವಕಾಶವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಹಾಗಾದರೆ ಆಗಿದ್ದು ಏನು? ಇಲ್ಲಿದೆ ನೋಡಿ…

ವಜ್ರದ ನಗರಿ ಎಂದೆ ಖ್ಯಾತಿಯಾಗಿರುವ ಸೂರತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಕಾರನ್ನು ನಿಲ್ಲಿಸಿ ವಿಶೇಷ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ. ಉನ್ನತ ಭದ್ರತೆಯ ನಡುವೆ ಕಾರಿನಲ್ಲಿ ತೆರಳುತ್ತಿದ್ದ ಮೋದಿ ಅವರನ್ನು ನೋಡಲು ಸಾವಿರಾರು ಜನ ಸೇರಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿಯ ನಡುವೆ 4 ವರ್ಷದ ನ್ಯಾನ್ಸಿ ಗೊಂಡಾಲಿಯಾ ಎಂಬ ಪುಟ್ಟ ಹುಡುಗಿ ಮೋದಿಯನ್ನು ನೋಡುವ ಪ್ರಯತ್ನದಲ್ಲಿದ್ದಳು. ಇದನ್ನು ಗಮನಿಸಿದ ಮೋದಿ ಕಾರನ್ನು ನಿಲ್ಲಿಸಿ ಭದ್ರತಾ ಸಿಬ್ಬಂದಿಗೆ ಆಕೆಯನ್ನು ಕರೆ ತರುವಂತೆ ಸೂಚಿಸಿದರು.

ಮುದ್ದಾದ ಹುಡುಗಿಯ ಕೆನ್ನೆ ಸವರುತ್ತಾ ಪ್ರೀತಿಯಿಂದ ಮಾತನಾಡಿಸಿದ ಮೋದಿ, ಆಕೆಯ ಜತೆ ಸ್ವಲ್ಪ ಹೊತ್ತು ಮಾತನಾಡಿದರು. ಈ ವೇಳೆ ಮೋದಿ ಅವರು ನಿನ್ನ ಕೈಯಲ್ಲಿರುವುದೇನು? ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ನ್ಯಾನ್ಸಿ ಕೈಗಡಿಯಾರ ಎಂದು ಉತ್ತರಿಸಿದಳು. ನಂತರ ಗಂಟೆ ಎಷ್ಟಾಯಿತು ಎಂದು ಆ ಹುಡುಗಿಯನ್ನು ಮಾತನಾಡಿಸಿದರು. ಇತ್ತ ಮೋದಿಯನ್ನು ನೋಡಲು ಸೇರಿದ್ದ ಜನರು ಮೋದಿ ಮೋದಿ ಎಂದು ಕೂಗಿದರು.

‘ಇಲ್ಲಿ ನೆರೆದಿದ್ದ ಸಾವಿರಾರು ಜನರಿಗೆ ಇದೊಂದು ಸ್ಮರಣೀಯ ಕ್ಷಣವಾಗಿತ್ತು. ಒಂದು ಚಿಕ್ಕ ಹುಡುಗಿಗಾಗಿ ಭದ್ರತೆಯನ್ನು ಲೆಕ್ಕಿಸದೇ ಕಾರನ್ನು ನಿಲ್ಲಿಸಿ ಪ್ರೀತಿಯಿಂದ ಮಾತನಾಡಿಸಿದ ಮೋದಿ ಅವರನ್ನು ಕಂಡು ಇಲ್ಲಿನ ಜನ ಸಂತೋಷ ಪಟ್ಟರು. ಒಂದು ಹುಡುಗಿಯನ್ನು ಭೇಟಿ ಮಾಡಲು ಮೋದಿ ರಸ್ತೆಯಲ್ಲಿ ಕಾರು ನಿಲ್ಲಿಸುತ್ತಾರೆ ಎಂದರೆ ನಂಬಲು ಅಸಾಧ್ಯ’ ಎಂದು ಆ ಹುಡುಗಿ ಹಾಗೂ ತಂದೆಯ ಜತೆಯಲ್ಲಿದ್ದ ಸೂರತ್ ನಗರ ಪಾಲಿಕೆ ಸದಸ್ಯ ಜಯಂತಿಲಾಲ್ ಭಂಡಾರಿ ತಿಳಿಸಿದರು.

ಇದು ಕೇವಲ ಮಗುವಿನ ಜತೆಗಿನ ಕತೆಯಾದರೂ ಕೂಡ ಪ್ರಧಾನಿ ಮೋದಿ ಜನರ ಜತೆ ಬೆರೆಯುತ್ತಾರೆ ಹಾಗೂ ಜನರ ಸಂವೇದನೆಗಳಿಗೆ ಸ್ಪಂದಿಸುತ್ತಾರೆ ಎಂಬುದನ್ನು ಇಂತಹ ಸಣ್ಣಪುಟ್ಟ ಘಟನೆಗಳೇ ಸಾರುತ್ತವೆ.

Leave a Reply