ಟ್ರಂಪ್ ನೇತೃತ್ವದಲ್ಲಿ ಕರೆನ್ಸಿ ವಾರ್! ಕುಸಿಯಲಿದೆಯೇ ಡಾಲರ್? 

  ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದು ನೂರು ದಿನ ಪೂರೈಸಿದ್ದು ವಿಶ್ವಕ್ಕೆ ತಿಳಿದ ವಿಷಯ. ಅಧಿಕಾರ ಹಿಡಿದ ದಿನದಿಂದ ಇಂದಿನವರೆಗೆ ಹಲವಾರು ವಿಷಯಗಳ ಬಗ್ಗೆ ಅತ್ಯಂತ ಸ್ಪಷ್ಟ ನುಡಿಗಳಲ್ಲಿ ಆತ ಹೇಳಿಕೆ ನೀಡುವುದು ಕೂಡ ಗೊತ್ತಿರುವ ವಿಷಯವೇ. ತಿಂಗಳು ಕಳೆಯುವುದರಲ್ಲಿ ತಾನು ಹೇಳಿದ್ದ ವಿಷಯದ ತದ್ವಿರುದ್ದ ಹೇಳಿ ವಿಶ್ವವನ್ನು ಅಚ್ಚರಿಯ ಕೂಪಕ್ಕೆ ದೂಡುವುದರಲ್ಲೂ ಈತ ನಿಸ್ಸಿಮ. ಜಗತ್ತಿನ ಪ್ರಖ್ಯಾತ ಆರ್ಥಿಕ ತಜ್ಞರು ಈತನ ಮಾತುಗಳ ಅಂತರಾರ್ಥ ನಿರೂಪಣೆ ಹೇಳಲು ಹೋಗಿ ಮುಗ್ಗುರಿಸಿ ಬಿದ್ದಿದ್ದಾರೆ. ಚುನಾವಣೆ ವೇಳೆ ಚೀನಾ ದೇಶವನ್ನು ತನ್ನ ಹಣವನ್ನು ಅಪಮೌಲ್ಯಗೊಳಿಸಿಕೊಂಡಿರುವುದರ ಬಗ್ಗೆ ದೂಷಿಸಿದ್ದ. ಚೀನಾ ದೇಶ ಕರೆನ್ಸಿ ಮ್ಯಾನಿಪುಲೇಟರ್, ಆ ದೇಶದ ಹಣ ಮತ್ತಷ್ಟು ಬಲಿಷ್ಠವಾಗಿರಬೇಕಿತ್ತು ಆದರೆ ಚೀನಾ ತನ್ನ ದೇಶದ ಎಕ್ಸ್ಪೋರ್ಟ್ ಉಳಿಸಿಕೊಳ್ಳಲು ತನ್ನ ಹಣವನ್ನು ಅಂತಾರಾರಾಷ್ಟ್ರೀಯ ಮಟ್ಟದಲ್ಲಿ ಕಡಿಮೆ ಮೌಲ್ಯ ತೊರಿಸಿ ಮೋಸದಾಟ ಶುರುಮಾಡಿದೆ. ಕರೆನ್ಸಿ ವಾರ್ ಇತರ ದೇಶಗಳು ಶುರು ಮಾಡುವುದಿಲ್ಲ ಎಂದು ಹೇಳಲು ಬರುವುದಿಲ್ಲ ಎಂದಿದ್ದ. ವಾರದ ಹಿಂದೆ ವಾಲ್ ಸ್ಟ್ರೀಟ್ ಜರ್ನಲ್ ಗೆ ನೀಡಿದ ಸಂದರ್ಶದಲ್ಲಿ ‘ಚೀನಾ ಕರೆನ್ಸಿ ಮ್ಯಾನಿಪುಲೇಟರ್ಸ್ ಅಲ್ಲ’ ಎನ್ನುವ ಹೇಳಿಕೆ ನೀಡಿ ತನ್ನ ಮೊದಲಿನ ಹೇಳಿಕೆಯಿಂದ ಯು ಟರ್ನ್ ಹೊಡೆದಿದ್ದಾರೆ. ಯೂರೋಪಿಯನ್ ಯೂನಿಯನ್ ಬಗ್ಗೆಯೂ ಸ್ಪಷ್ಟ ನಿಲುವು ನೀಡುವ ಹೇಳಿಕೆ ಬಂದಿಲ್ಲ. ಯುರೋ, ಅಮೆರಿಕನ್ ಡಾಲರ್ ಬಲ ಕುಂದಿಸಲು ಹುಟ್ಟಿಹಾಕಿದ ಹಣ ಹೀಗಾಗಿ ಯುರೋ ಒಕ್ಕೂಟ ಇದ್ದರೂ ಕುಸಿದರೂ ನಮಗೇನು? ಎಂದು ಜನವರಿ 2017 ರಲ್ಲಿ ಹೇಳಿಕೆ ನೀಡಿ, ಫೆಬ್ರವರಿ 2017ರಲ್ಲಿ ‘ನಾನು ಯೂರೋಪಿಯನ್ ಒಕ್ಕೂಟದ ಪರವಿದ್ದೇನೆ’ ಎನ್ನುವ ಮಾತನ್ನಾಡಿದ್ದಾರೆ. ಇರಾಕ್ ಬಗ್ಗೆ, ಮೆಕ್ಸಿಕೋ ಜೊತೆ ಬಾರ್ಡರ್ ಜಟಾಪಟಿ ಬಗ್ಗೆ, ರಷ್ಯಾ ದೇಶದ ಒಡನಾಟದ ಬಗ್ಗೆ ಹೀಗೆ ಹಲವು ಹತ್ತು ವಿಷಯಗಳ ಬಗ್ಗೆ ಇಂದು ಆಡಿದ ಮಾತು ನಾಳೆಗೆ ಬದಲಿಸುವ ಈತನ ಬಗ್ಗೆ ವಿಶ್ವದಲ್ಲಿ ಇಂದು ಜನರಿಗೆ ನಂಬಿಕೆ ಕಡಿಮೆಯಾಗುತ್ತಿದೆ.

  ಅತ್ತ  ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಚೀನಾ ಮ್ಯಾನಿಪುಲೇಟರ್ ಅಲ್ಲ ಎನ್ನುವ ಸಮಯಕ್ಕೆ  ಇತ್ತ   ಟ್ರಂಪ್ ಸರಕಾರದ ಹಣಕಾಸು ಇಲಾಖೆ (Treasury Department)  ಚೀನಾ, ಜರ್ಮನಿ, ಜಪಾನ್, ಕೊರಿಯಾ, ಸ್ವಿಟ್ಸರ್ಲ್ಯಾಂಡ್, ತೈವಾನ್ ಈ ಆರು ದೇಶಗಳ ಕರೆನ್ಸಿ ಏರುಪೇರಿನ ಮೇಲೆ ನಿಗಾ ಇಡುವಂತೆ ಆದೇಶ ಹೊರಡಿಸಿದೆ. ಈ ದೇಶಗಳ ಕರೆನ್ಸಿ ಅಮೆರಿಕಾದ ಆರ್ಥಿಕತೆಗೆ ತೊಂದರೆ ತಂದೊಡ್ಡಬಹುದು ಎನ್ನುವುದು ಕಾರಣ.

  ‘ತನ್ನ ದೇಶದ ಒಳಿತಿಗಾಗಿ ಅಲ್ಲೊಂದು ಇಲ್ಲೊಂದು ಅನುಮಾನ ಹುಟ್ಟಿಸುವ ಮಾತನಾಡುವುದು, ಪಾಲಿಸಿ ಗುಟ್ಟಾಗಿಡುವುದು ಓಕೆ. ಆದರೆ ಟ್ರಂಪ್ ರೀತಿಯಲ್ಲಿ ಜಗತ್ತನ್ನು ಕನ್ಫ್ಯೂಸ್ ಮಾಡುವುದು ಎಷ್ಟು ಸರಿ’ ಎನ್ನುವುದು ಜರ್ಮನ್ ವಿತ್ತ ಮಂತ್ರಿ Wolfgang Schaeuble ಪ್ರಶ್ನೆ.

  ಕಳೆದ ವಾರ ಆಕ್ಸ್ಫರ್ಡ್ ಎಕನಾಮಿಕ್ಸ್ ಪ್ರಕಟಿಸಿದ ಸರ್ವೆ ಪ್ರಕಾರ ಜಗತ್ತಿನ ಹೂಡಿಕೆದಾರರು ಟ್ರಂಪ್ ನನ್ನು ಜಗತ್ತಿನ ಆರ್ಥಿಕತೆಗೆ ಅಪಾಯಕಾರಿ ಎಂದು ಹೇಳಲಾಗಿದೆ. ಹೂಡಿಕೆದಾರರು ಮತ್ತು ಆರ್ಥಿಕ ತಜ್ಞರು ಇಬ್ಬರಿಗೂ ಜಗತ್ತಿನ ಆರ್ಥಿಕತೆ ಎತ್ತ ಸಾಗಬಹುದು ಎನ್ನುವ ಬಗ್ಗೆ ಮಾಹಿತಿ ಇಲ್ಲದೆ ಚಿಂತೆಗೀಡಾಗಿದ್ದಾರೆ.

  ಇಷ್ಟೇ ಆಗಿದ್ದರೆ ಟ್ರಂಪ್ ನನ್ನ ಬ್ರಾಂಡ್ ಮಾಡಿ ಬಿಡಬಹುದಿತ್ತು. ಆದರೆ ಆತ ಅನಿರೀಕ್ಷಿತ ಹೊಡೆತಗಳನ್ನು ಕೊಡುವುದರಲ್ಲಿ ಎತ್ತಿದ ಕೈ. ಕಳೆದ ಎಂಟು ವರ್ಷಗಳಲ್ಲಿ ಒಬಾಮ ಅಮೆರಿಕಾದ ಡಾಲರ್ ಬಗ್ಗೆ ಮಾತನಾಡಿದ್ದೆ ಕಡಿಮೆ. ಒಬಾಮ ಅಷ್ಟೇ ಅಲ್ಲ ಆತನಿಗಿಂತ ಮುಂಚಿನ ಪ್ರೆಸಿಡೆಂಟ್ ಗಳು ಅಷ್ಟೇ  ಡಾಲರ್ ಬಗ್ಗೆ ಮಾತನಾಡದಿದ್ದು ಕಡಿಮೆ ಆಕಸ್ಮಾತ್ ಮಾತಾಡಿದರೆ ಬಲಿಷ್ಠ ಅಮೆರಿಕನ್ ಡಾಲರ್ ಎಲ್ಲರಿಗೂ ಒಳ್ಳೆಯದು ಅನ್ನುವ ರೀತಿಯಲ್ಲಿ ಹೇಳಿ ಜಾರಿಕೊಂಡವರೇ. ಟ್ರಂಪ್ ಹಾಗಲ್ಲ ಹತ್ತಾರು ವರ್ಷದಲ್ಲಿ ತನ್ನ ಹಿಂದಿನ ಪ್ರೆಸಿಡೆಂಟ್ ಗಳು ಆಡದ ಮಾತನ್ನು ಈತ ನೂರು ದಿನಗಳ ಅವಧಿಯಲ್ಲಿ ಹಲವು ಬಾರಿ ಉಚ್ಛರಿಸಿದ್ದಾನೆ. ‘ ಅಮೇರಿಕನ್ ಡಾಲರ್ ಇಸ್ ಟೂ ಸ್ಟ್ರಾಂಗ್ ‘ ಎನ್ನುವುದು ಆ ಉಚ್ಚಾರ. ಮುಂಬರುವ ದಿನಗಳಲ್ಲಿ ಅಮೇರಿಕನ್ ಡಾಲರ್ ಅಪಮೌಲ್ಯ ಮಾಡುವುದು ಟ್ರಂಪ್ ನ ಮಾತಿನ ಇಂಗಿತ.

  ಬಲಿಷ್ಠ ಅಮೆರಿಕನ್ ಡಾಲರ್ ಟ್ರಂಪ್ ಅಪಮೌಲ್ಯಗೊಳಿಸಲು ಬಯಸಿರುವುದೇಕೆ?

  ಬಲಿಷ್ಠ ಡಾಲರ್ ಅಮೆರಿಕಾದ ಟ್ರೇಡ್ ಡೆಫಿಸಿಟ್ಗೆ ಕಾರಣ ಎನ್ನುವುದು ಟ್ರಂಪ್ ಗೆ ಚೆನ್ನಾಗಿ ಗೊತ್ತಿದೆ. ಡಾಲರ್ ಅಪಮೌಲ್ಯಗೊಂಡರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕದ ವಸ್ತುಗಳು ಅಗ್ಗವಾಗುತ್ತವೆ. ಹೀಗಾಗಿ ಅವುಗಳ ಬೇಡಿಕೆ ಹೆಚ್ಚುತ್ತದೆ. ಹೆಚ್ಚಿದ ಬೇಡಿಕೆಯಿಂದ ವ್ಯಾಪಾರ ಹೆಚ್ಚಾಗಿ ಅಮೆರಿಕದ ಟ್ರೇಡ್ ಡೆಫಿಸಿಟ್ ಕಡಿಮೆಯಾಗುತ್ತದೆ. ಇದು ಬಹು ಮುಖ್ಯ ಕಾರಣ. ಚೀನಾ ದೇಶ ಕಳೆದ ಒಂದು ದಶಕದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಹೇಗೆ ಕಾಪಾಡಿಕೊಂಡು ಬಂದಿತು ಎನ್ನುವುದು ಟ್ರಂಪ್ ನ ಆರ್ಥಿಕ ತಜ್ಞರು ಆತನಿಗೆ ಚೆನ್ನಾಗಿ ವಿವರಿಸಿದ್ದಾರೆ.

  ಅಕಸ್ಮಾತ್ ಟ್ರಂಪ್ ಡಾಲರ್ ಮೌಲ್ಯವನ್ನು ಹತ್ತು ಪ್ರತಿಶತ ಅಪಮೌಲ್ಯ ಗೊಳಿಸಿದರೆ ಜಗತ್ತಿನ ಅನೇಕ ದೇಶಗಳ ಲೆಕ್ಕಾಚಾರ ಉಲ್ಟಾ ಆಗಲಿದೆ. ಮುಖ್ಯವಾಗಿ ಯುರೋ ಒಕ್ಕೂಟ, ಜಪಾನ್, ಚೀನಾ ಹೆಚ್ಚು ಹೊಡೆತ ತಿನ್ನಲಿವೆ. ಈ ಹಿಂದೆ ಚೀನಾ, ತೈವಾನ್ ಗಳ ಜೊತೆ ಬುಷ್ ಹಾಗೂ ಒಬಾಮ ಸರಕಾರ ಮಾತುಕತೆಯಿಂದ ಹಣದ ಅಪಮೌಲ್ಯದ ವಿಷಯವನ್ನು ಬಗೆಹರಿಸಿಕೊಂಡಿದ್ದವು. ಚೀನಾ, ಜಪಾನ್, ತೈವಾನ್ ಮತ್ತು ಸ್ವಿಟ್ಜರ್ಲ್ಯಾಂಡ್ ಮತ್ತು ಯೂರೋಪಿಯನ್ ಒಕ್ಕೂಟ ತಮ್ಮ ಟ್ರೇಡ್ ಡೆಫಿಸಿಟ್ ಸರಿದೂಗಿಸಲು ಆಗಾಗ್ಗೆ ತಮ್ಮ ಹಣದ ಮೌಲ್ಯ ಹೆಚ್ಚು ಕಡಿಮೆ ಮಾಡಿಕೊಳ್ಳುತ್ತಿದ್ದವು. ಇವುಗಳ ನೇರ ಪ್ರಭಾವ ಅಮೆರಿಕದ ವ್ಯಾಪಾರ ವಹಿವಾಟಿನ ಮೇಲೆ ಆಗುತ್ತಿದ್ದದು ಸುಳ್ಳಲ್ಲ. ಹೀಗಾಗಿ ಹಿಂದಿನ ಅಮೆರಿಕ ಸರಕಾರ ಈ ದೇಶಗಳ ಜೊತೆ ಮಾತುಕತೆ ನೆಡೆಸಿ ಒಂದು ಒಪ್ಪಂದಕ್ಕೆ ಬಂದಿದ್ದವು. ಆದರೆ ಟ್ರಂಪ್ ಮಾತುಕತೆಯ ಮಾತನಾಡದೆ ಅಮೆರಿಕನ್ ಡಾಲರ್ ನನ್ನೇ ಅಪಮೌಲ್ಯಗೊಳಿಸುವ ಮಾತನ್ನಾಡಿರುವುದು ಚೀನಾ, ಜಪಾನ್, ಕೊರಿಯಾ ಮತ್ತು ಯುರೋ ಒಕ್ಕೂಟವಲ್ಲದೆ ಜಾಗತಿಕ ಹಣಕಾಸು ಸಂಸ್ಥೆಗಳ ಬೆನ್ನಲ್ಲಿ ಸಣ್ಣಗೆ ನಡುಕ ಹುಟ್ಟಿಸಿದೆ.

  ಟ್ರಂಪ್ ಮಾತನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ ಮುಂದಿನ ವಾರ ಆತ ಹೊಸ ಆಲೋಚನೆಯಲ್ಲಿ ಹೇಳಿಕೆ ನೀಡಬಹುದು ಎನ್ನುವ ಒಂದು ವರ್ಗ ಕೂಡ ಇದೆ. ಆದರೆ ನಾವಿಂದು ಇದು ಆಗುವುದಿಲ್ಲ, ಅಥವಾ ಹೀಗಾಗಲು ಸಾಧ್ಯವೇ ಇಲ್ಲ ಎಂದು ಯಾವುದೇ ವಿಷಯದ ಬಗ್ಗೆ ಹೇಳಲು ಆಗದ ದಿನಗಳಲ್ಲಿ ಬದುಕುತ್ತಿದ್ದೇವೆ. ಮುಂದಿನ ವಾರ ವಾಷಿಂಗ್ಟನ್ ಡಿ ಸಿ ಯಲ್ಲಿ ಸಭೆಯಿದೆ. ಡಾಲರ್ ಕುಸಿಯಬಹದು ಅಥವಾ ಕುಸಿಯದೆ ತನ್ನ ಮೌಲ್ಯ ಈಗಿರುವುದನ್ನೇ ಉಳಿಸಿಕೊಳ್ಳಬಹದು. ಆದರೆ ಟ್ರಂಪ್ ಸರಕಾರ ಡಾಲರ್ ಇನ್ನಷ್ಟು ಬಲಿಷ್ಠವಾಗಲು ಮಾತ್ರ ಬಿಡುವುದಿಲ್ಲ.

  ಚೀನಾ ಕರೆನ್ಸಿ ವಾರ್ ಎನ್ನುವ ಯಜ್ಞ ಶುರು ಮಾಡಿತು. ಅಮೆರಿಕ ಯಜ್ಞದ ಬೆಂಕಿ ನಂದಿಸುವ ಬದಲು ಅದಕ್ಕೆ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡಲು ಹೊರಟಂತಿದೆ. ಈ ಯುದ್ಧ ಎಲ್ಲಿಗೆ ಹೋಗಿ ನಿಲ್ಲುವುದೋ? ಕಾಲವೇ ಉತ್ತರಿಸಲಿದೆ.

  Leave a Reply