ಬಾಬ್ರಿ ಭೂತ: ತ್ವರಿತ ವಿಚಾರಣೆಯ ಕಟಕಟೆಯಲ್ಲಿ ಆಡ್ವಾಣಿ, ಉಮಾ ಭಾರತಿ, ಜೋಶಿ

ಡಿಜಿಟಲ್ ಕನ್ನಡ ಟೀಮ್:

ಬಾಬ್ರಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ನೇತಾರರಾದ ಎಲ್ ಕೆ ಆಡ್ವಾಣಿ, ಉಮಾ ಭಾರತಿ, ಮುರಳಿ ಮನೋಹರ ಜೋಶಿ ಇವರ ವಿರುದ್ಧ ಅಪರಾಧ ಸಂಚಿನ ಪ್ರಕರಣದ ತ್ವರಿತ ವಿಚಾರಣೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ. ಇದರೊಂದಿಗೆ ರಾಮ ಜನ್ಮಭೂಮಿ ಆಂದೋಲನದ ಬಿಸಿ ಮತ್ತೊಮ್ಮೆ ಮರುಕಳಿಸಿದಂತಾಗಿದೆ.

ಬಾಬ್ರಿ ಧ್ವಂಸ ಪ್ರಕರಣ ನಡೆದಾಗ ಮುಖ್ಯಮಂತ್ರಿ ಆಗಿದ್ದ ಕಲ್ಯಾಣ್ ಸಿಂಗ್ ವಿರುದ್ಧ ಸಧ್ಯಕ್ಕೆ ವಿಚಾರಣೆ ಆದೇಶಿಸಲಾಗಿಲ್ಲ, ಏಕೆಂದರೆ ರಾಜಸ್ಥಾನದ ರಾಜ್ಯಪಾಲರಾಗಿರುವ ಅವರಿಗೆ ಸಂವಿಧಾನಿಕ ರಕ್ಷಣೆ ಇದೆ. ಉಳಿದಂತೆ, ವಿನಯ್ ಕಟಿಯಾರ್, ಸಾಧ್ವಿ ರಿತಂಬರಾ, ಸತೀಶ್ ಪ್ರಧಾನ್, ಚಂಪತ್ ಲಾಲ್ ಬನ್ಸಾಲ್ ಇವರೆಲ್ಲರ ವಿರುದ್ಧ ಸಂಚಿನ ಪ್ರಕರಣದ ವಿಚಾರಣೆ ನಡೆಯುತ್ತದೆ.

ವಿಚಾರಣೆಯ ವಿಶೇಷವೇನು?

ನಾಲ್ಕು ವಾರಗಳ ಒಳಗೆ ರಾಯ್ಬರೇಲಿಯಿಂದ ಲಖ್ನೊ ಪೀಠಕ್ಕೆ ಈ ಪ್ರಕರಣಗಳು ವರ್ಗಾವಣೆಯಾಗಬೇಕು. ಅಲ್ಲಿ ಯಾವುದೇ ವಿಚಾರಣಾ ಮುಂದೂಡಿಕೆಗಳಿಗೆ ಅವಕಾಶವಿಲ್ಲದೇ, ಪ್ರತಿದಿನವೂ ಪ್ರಕರಣವನ್ನು ಆಲಿಸಲಾಗುತ್ತದೆ. ಅಲ್ಲದೇ ವಿಚಾರಣೆ ನಡೆಸುವ ನ್ಯಾಯಮೂರ್ತಿಯ ವರ್ಗಾವಣೆಗೆ ಅವಕಾಶವಿರುವುದಿಲ್ಲ. ಅದಾಗಲೇ ಈ ಪ್ರಕರಣದಲ್ಲಿ 25 ವರ್ಷಗಳನ್ನು ಸುಮ್ಮನೇ ವ್ಯಯಿಸಿಬಿಟ್ಟಿರುವುದನ್ನು ಗಮನಕ್ಕೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್, ಹೀಗೊಂದು ತ್ವರಿತ ವಿಚಾರಣಾ ಮಾದರಿ ನಿರ್ದೇಶಿಸಿದೆ. ಇದರಿಂದ ಪ್ರಕರಣವನ್ನು ಸುಮ್ಮನೇ ಎಳೆಯಗೊಡದೇ ಈ ಬಗ್ಗೆ ತೀರ್ಪೊಂದು ಬರಲಿರುವುದು ಖಚಿತ.

ಏನಿದರ ಹಿನ್ನೆಲೆ?

1992ರ ಡಿಸೆಂಬರ್6ರಂದು ಅಯೋಧ್ಯೆಯ ಬಾಬ್ರಿ ಸ್ಮಾರಕವನ್ನು ಸಾವಿರಾರು ಜನ ಸೇರಿ ಧರೆಗುರುಳಿಸಿದರು. ಆದರೆ ಇದು ಏಕಾಏಕಿ ಆಗಿದ್ದಲ್ಲ, ಇದನ್ನು ಉರುಳಿಸುವುದಕ್ಕೆ ಈಗ ಪ್ರಕರಣದಲ್ಲಿ ಹೆಸರಿಸಲಾಗಿರುವ ನೇತಾರರ ಸಂಚು ಕೆಲಸ ಮಾಡಿತ್ತು. ಬಾಬ್ರಿ ಸ್ಮಾರಕ ಧರೆಗುರುಳಿದ ದಿನ ಕೆಲವೇ ಮೀಟರುಗಳ ಅಂತರದಲ್ಲಿ ಈ ನಾಯಕರೆಲ್ಲ ಇದ್ದರು ಎಂಬುದು ಆರೋಪ. . 2010ರ ಮೇನಲ್ಲಿ ಅಲಹಾಬಾದಿನ ಹೈಕೋರ್ಟ್ ಈ ಪ್ರಕರಣಗಳನ್ನು ಕೈಬಿಟ್ಟಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯೇ ಇಂದಿನ ಈ ನಿರ್ದೇಶನಕ್ಕೆ ಕಾರಣ.

Leave a Reply