ಅರುಣಾಚಲ ಪ್ರದೇಶದಲ್ಲೇನಿದು ಚೀನಿಯರ ನಾಮಕರಣ? ಬುದ್ಧ ಭಾರತವನ್ನು ಹಣಿಯುವ ಸಾಂಸ್ಕೃತಿಕ ಆಕ್ರಮಣ!

 

ಚೈತನ್ಯ ಹೆಗಡೆ

ಅರುಣಾಚಲ ಪ್ರದೇಶವು ತನ್ನದೆಂದು ವಾದಿಸುತ್ತಿದ್ದ ಚೀನಾದ ಪಟ್ಟು ಬಿಗಿಯಾಗಿದೆ. ಕೆಲದಿನಗಳ ಹಿಂದೆ ದಲೈ ಲಾಮಾ ಅವರ ತವಾಂಗ್ ಭೇಟಿಯನ್ನು ಚೀನಾ ವಿರೋಧಿಸಿತ್ತು. ಆದರೆ ಭಾರತ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಇದೀಗ ತಾನು ದಕ್ಷಿಣ ಟಿಬೇಟ್ ಎಂದು ಗುರುತಿಸುತ್ತಿರುವ ಅರುಣಾಚಲ ಪ್ರದೇಶದ ಹಲವು ಪ್ರಾಂತ್ಯಗಳಿಗೆ ಚೀನಿ ಹೆಸರುಗಳನ್ನು ಘೋಷಿಸುವ ಮೂಲಕ ಭಾರತದ ವಿರುದ್ಧ ಗುಟುರು ಹಾಕಿದೆ ಚೀನಾ.

ಈ ಘೋಷಣೆಯನ್ನು ತನ್ನ ವಿದೇಶ ಸಚಿವಾಲಯದ ಮೂಲಕ ಮಾಡದೇ, ನಾಗರಿಕ ವ್ಯವಹಾರಗಳ ಸಚಿವಾಲಯದ ಮೂಲಕ ಮಾಡಿದೆ ಚೀನಾ.

ಅರುಣಾಚಲವು ತನ್ನದೆನ್ನುತ್ತಿದ್ದ ಚೀನಾ ವಾದವೇನೂ ಹೊಸತಲ್ಲ. ಆದರೆ ಹೀಗೆ ಪ್ರದೇಶ ನಾಮಕರಣದ ಮಟ್ಟಿಗೆ ವಿಷಯ ಬೆಳೆದಿರಲಿಲ್ಲ. ಈ ಹಿಂದೆಯೂ ದಲೈ ಲಾಮಾ ತವಾಂಗಿಗೆ ಭೇಟಿ ಕೊಟ್ಟಿದ್ದರು. ಆಗ ಪ್ರತಿರೋಧ ಎದುರಾದಾಗ ಅಂದಿನ ಸರ್ಕಾರಗಳು ಭೇಟಿಯನ್ನೇನೂ ರದ್ದುಪಡಿಸದೇ ಕೆಲವು ರಾಜಿಗಳನ್ನು ಮಾಡಿಕೊಂಡಿದ್ದರು. ಉದಾಹರಣೆಗೆ ಮನಮೋಹನ್ ಸಿಂಗ್ ಸರ್ಕಾರವು ದಲೈ ಲಾಮಾರ ತವಾಂಗ್ ಭೇಟಿಗೆ ಅವಕಾಶ ಕೊಟ್ಟಿತ್ತಾದರೂ ಚೀನಾದ ಒತ್ತಡದ ಪ್ರಕಾರವಾಗಿ ಆ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ನಿಷೇಧ ಹೇರಿ ಕಾರ್ಯಕ್ರಮವು ಕಡಿಮೆ ಪ್ರಚಾರ ಹೊಂದುವಂತೆ ನೋಡಿಕೊಂಡಿತ್ತು. ಆಗೆಲ್ಲ ಭೇಟಿ ವೇಳೆಗಷ್ಟೇ ಗುರ್ರೆಂದು ನಂತರ ಸುಮ್ಮನಿದ್ದ ಚೀನಾ ಈ ಬಾರಿ ಅತಿ ಹೆಚ್ಚಿನ ಆಕ್ರಮಣಶೀಲತೆ ತೋರಿಸುತ್ತಿರುವುದೇಕೆ?

ಬಿಜೆಪಿಯ ರಾಮ್ ಮಾಧವ್ ಅವರ ಇತ್ತೀಚಿನ ಅಭಿಪ್ರಾಯ ಬರಹವೊಂದರಲ್ಲಿ ಇದರ ಒಳಸುಳಿ ವಿಶ್ಲೇಷಣೆಗೆ ಒಳಪಟ್ಟಿದೆ.

ದಲೈ ಲಾಮಾ ಎಂಬುದು ಒಂದು ಧಾರ್ಮಿಕ ಪಟ್ಟ. ಈಗಿನ 14ನೇ ದಲೈ ಲಾಮಾರಿಗೆ ವಯಸ್ಸಾಗುತ್ತ ಬಂದಿದೆ. ಅವರು ಅರುಣಾಚಲ ಪ್ರದೇಶದಿಂದಲೇ ಉತ್ತರಾಧಿಕಾರಿ ನೇಮಿಸಿ ಟಿಬೆಟ್ ಹೋರಾಟ ಜೀವಂತವಾಗಿಡಬಹುದೆಂಬುದು ಚೀನಾ ಅನುಮಾನ. ಇದಕ್ಕೆ ಎಲ್ಲ ಪ್ರೋತ್ಸಾಹಗಳನ್ನು ಭಾರತ ಕೊಡುತ್ತಿದೆ ಅಂತಲೂ ಅದು ನಂಬಿದೆ. ಅದಾಗಲೇ ತನ್ನ ಪರವಾಗಿ ಮುಂದಿನ ದಲೈ ಲಾಮಾ ಹೆಸರನ್ನು ಘೋಷಿಸಿಕೊಂಡಿದೆ ಚೀನಾ.

ಇದು ರಾಮ್ ಮಾಧವ್ ವಿಶ್ಲೇಷಣೆ ಸಾರ.

ಇದೇ ಜಾಡಿನಲ್ಲೇ ಚೀನಾದ ಅರುಣಾಚಲ ನಾಮಕರಣವೂ ಆದಂತಿದೆ. ಮೊದಲ ಹೆಸರು ವೊಗಾಯಿನ್ಲಿನ್. ಬಹುಶಃ ಇದು ತವಾಂಗ್ ಬಳಿಯ ಈಗಿನ ಉರ್ಗೆಯಿಂಗ್ಲಿಂಗ್ ಬೌದ್ಧ ಕೇಂದ್ರವನ್ನು ಉದ್ದೇಶಿಸಿರುವಂಥದ್ದು.

ಇತ್ತೀಚೆಗೆ ಭಾರತೀಯ ವಾಯುಸೇನೆಯು ಅಭಿವೃದ್ಧಿಪಡಿಸಿರುವ ವಿಮಾನನೆಲೆ ಮೆಚುಕಾ. ಇದನ್ನು ಮೈಂಕುಕಾ ಅಂತ ಚೀನಾ ಕರೆದಿದೆ.

ಭಾರತ ಕರೆಯುತ್ತಿರುವ ಹೆಸರುಗಳು ಹಿಂದಿ ಮತ್ತು ಸಂಸ್ಕೃತ ಮಿಶ್ರಣದ ಅರ್ಥಗಳನ್ನು ಕೊಡುವಂಥವಾದರೆ, ಚೀನಾದ ಹೊಸ ಹೆಸರುಗಳು ಟಿಬೆಟಿಯನ್ ಆಗಿವೆ. ಒಟ್ಟು ಆರು ಹೆಸರುಗಳಲ್ಲಿ ಹೆಚ್ಚಿನವು ಟಿಬೆಟಿಯನ್ ಭಾಷೆಯ ನುಡಿಗಟ್ಟು ಇಲ್ಲವೇ ಸಂತರ ಹೆಸರಿನ ಸಾಮಿಪ್ಯ ಹೊಂದಿವೆ.

ಈ ಮೂಲಕ ಚೀನಾ ಸಾರುತ್ತಿರೋದೇನೆಂದರೆ ಟಿಬೆಟ್ ತನ್ನದು, ಟಿಬೆಟಿನ ಸಂಸ್ಕೃತಿಯ ವಾರಸುದಾರಿಕೆ ಸಹ ತನ್ನದು ಅಂತ. ಈಗಿರುವ 14ನೇ ದಲೈ ಲಾಮಾ ಆಗಲೀ, ಅವರ ಮೂಲಕ ಭಾರತವಾಗಲೀ ಟಿಬೆಟಿನ ವಾರಸುದಾರಿಕೆಯನ್ನು ತನ್ನದೆಂಬಂತೆ ಬಿಂಬಿಸಿಕೊಳ್ಳುವಂತಿಲ್ಲ, ಆ ಕೆಲಸವೇನಿದ್ದರೂ ತನ್ನದು ಎಂಬುದನ್ನು ಸಾರುವುದಕ್ಕೆ ಹೊರಟಿದೆ ಚೀನಾ.

ವಾಸ್ತವದಲ್ಲಿ ಭಾರತಕ್ಕೆ ಹೋಲಿಸಿದರೆ ಅಪರಿಮಿತ ಮಿಲಿಟರಿ ಶಕ್ತಿ ಹೊಂದಿರುವ ಚೀನಾ, ನಮ್ಮ ಆರ್ಥಿಕ ಇಲ್ಲವೇ ಸೈನಿಕ ಬಲಕ್ಕೆ ಅಷ್ಟಾಗಿ ಹೆದರುತ್ತಿಲ್ಲ. ಆದರೆ ನೀನೋ-ನಾನೋ ಎಂಬ ನಿರ್ಣಾಯಕ ಹಂತ ಬಂದಾಗ ಭಾರತವು ಸಾಂಸ್ಕೃತಿಕ ಬಲದಲ್ಲಿ ಗೆದ್ದುಬಿಡಬಹುದೆಂಬ ಹೆದರಿಕೆ ಚೀನಾಕ್ಕಿದೆ.

ಯುದ್ಧದಲ್ಲಿ ಇದೆಂಥ ಸಾಂಸ್ಕೃತಿಕ ಬಲ ಎಂದಿರಾ? ಅದುವೇ ಬೌದ್ಧ ಶ್ರದ್ಧೆಯ ಶಕ್ತಿ. ಚೀನಾದಲ್ಲಿ ಧರ್ಮಾಚರಣೆಗೆ ನಿಷೇಧವಿದ್ದರೂ ಅಲ್ಲಿನ ಜನ ಬೌದ್ಧ ಧರ್ಮದೆಡೆ ಆಸಕ್ತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಬುದ್ಧನ ನೆಲವೆಂದು ಜಗತ್ತು ಗೌರವಿಸುವುದು, ಮುಖ್ಯವಾಗಿ ಏಷ್ಯದ ಬೌದ್ಧ ರಾಷ್ಟ್ರಗಳು ಗೌರವಿಸುವುದು ಭಾರತವನ್ನು. ಆಗ್ನೇಯ ಏಷ್ಯದ ಹಲವು ರಾಷ್ಟ್ರಗಳು ಚೀನಾದೊಂದಿಗೆ ಮಿಲಿಟರಿ ಸಾಂಗತ್ಯ ಹೊಂದಿದ್ದರೂ ಬುದ್ಧನ ಹೆಸರು ಹೇಳಿದೊಡನೆ ಭಾರತಕ್ಕೆ ತಲೆಬಾಗುತ್ತವೆ. ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರವು ಜಾಗತಿಕ ಬೌದ್ಧ ಸಮಾವೇಶಗಳನ್ನು ಏರ್ಪಡಿಸುತ್ತ ‘ಬೌದ್ಧ ರಾಜತಾಂತ್ರಿಕತೆ’ಯೊಂದನ್ನು ಹೊಸೆಯುತ್ತಿದೆ.

ಇವೆಲ್ಲವೂ ಚೀನಾಕ್ಕೆ ಸಹಿಸಿಕೊಳ್ಳಲಾಗದ ವಿಷಯಗಳು. ಹಾಗೆಂದೇ ಅರುಣಾಚಲ ಪ್ರದೇಶದಲ್ಲಿ ಚೀನಾ ಘೋಷಿಸಿರುವ ನಾಮಕರಣ ಯುದ್ಧವು ಸಾಂಸ್ಕೃತಿಕ ಸಮರದ ಒಂದು ಭಾಗ. ಈ ಸಾಂಸ್ಕೃತಿಕ ಯುದ್ಧವನ್ನು ಬೇರೆ ಬೇರೆ ಆಯಾಮಗಳಲ್ಲಿ ಬಿಹಾರದ ಬೌದ್ಧಗಯಾವರೆಗೂ ತಂದು ನಿಲ್ಲಿಸುವುದಕ್ಕೆ ಚೀನಾ ಹಲವು ಬೌದ್ಧಿಕ ಹೊಡೆದಾಟಗಳನ್ನು ನಡೆಸುತ್ತದೆ ಎಂಬುದು ನಮ್ಮ ನಿರೀಕ್ಷೆಯಲ್ಲಿರಬೇಕಾಗುತ್ತದೆ!

Leave a Reply