ಅಭಿವೃದ್ಧಿಯಲ್ಲ, ಅಯೋಧ್ಯೆಯ ರಾಮ: 2019ರ ಚುನಾವಣಾ ಕಾರ್ಯಸೂಚಿಯನ್ನು ನಿರ್ಧರಿಸಿದೆ ಸುಪ್ರೀಂ ತೀರ್ಪು!

 

ಚೈತನ್ಯ ಹೆಗಡೆ

ಬಾಬ್ರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡ್ವಾಣಿ, ಉಮಾ ಭಾರತಿ, ಮುರಳಿ ಮನೋಹರ ಜೋಶಿ ಇವರೆಲ್ಲ ಸಂಚುದಾರರು ಹೌದೋ ಅಲ್ಲವೋ? ಸುಪ್ರೀಂಕೋರ್ಟ್ ನಿರ್ಧರಿಸಿರುವ ಸಮಯಮಿತಿಯಂತೆ ವಿಚಾರಣೆ ನಡೆದರೆ 2 ವರ್ಷಗಳಲ್ಲಿ ಈ ಕುರಿತ ತೀರ್ಪು ಬರಬೇಕು. ಅಂದರೆ 2019ರ ಲೋಕಸಭಾ ಚುನಾವಣೆಯ ವರ್ಷದ ಹೊತ್ತಿಗೆ ಈ ಕುರಿತ ನಿಜ ಸಂಚಲನವಾಗುತ್ತದೆ.

ಅಲ್ಲಿಗೆ ಬಿಜೆಪಿ ಅಂತಲ್ಲ, ಯಾವುದೇ ರಾಜಕೀಯ ಪಕ್ಷದ ಚುನಾವಣಾ ಪ್ರಚಾರಗಳು ಅಯೋಧ್ಯೆಯ ಬಾಬ್ರಿ-ರಾಮಮಂದಿರಗಳ ಸುತ್ತ ಗಿರ್ಕಿ ಹೊಡೆಯಬೇಕಾದದ್ದು ಅನಿವಾರ್ಯವಾಗುತ್ತದೆ. ಈ ಕ್ಷಣದಲ್ಲಿ, ಸುಪ್ರೀಂಕೋರ್ಟ್ ನಿರ್ದೇಶನವನ್ನು ಬಿಜೆಪಿಗಾಗಿರುವ ಹಿನ್ನಡೆ ಅಂತ ಕೆಲವರು ವಿಶ್ಲೇಷಿಸುತ್ತಿದ್ದಾರೆ. ಆದರೆ ಲೋಕಸಭೆ ಚುನಾವಣೆಗೆ ಹೋಗುವ ಪೂರ್ವದಲ್ಲಿ ಬಿಜೆಪಿಯ ಈ ಆರೋಪಿತ ನೇತಾರರೇನಾದರೂ ದೋಷಿಗಳು ಎಂದು ತೀರ್ಪು ಬಂದಿದ್ದೇ ಆದರೆ… ತೀರ್ಪು ಬರುವುದು ಹಾಗಿರಲಿ, ಅಂಥ ಸೂಚನೆಗಳು ಸಿಕ್ಕಿದ್ದೇ ಆದರೂ ಬಿಜೆಪಿಗೆ ಅದು ಮಾರುವೇಷದಲ್ಲಿ ಬಂದ ವರವೇ ಆಗಲಿದೆ.

ಇವತ್ತಿನ ಕಾಲಮಾನದಲ್ಲಿ ಹಿಂದು ಯುವ ಜನರು ಬಿಜೆಪಿಯನ್ನು ನೆಚ್ಚಿಕೊಂಡಿರುವುದು ಉದ್ಯೋಗ, ಆರ್ಥಿಕ ಅಭಿವೃದ್ಧಿ, ಕಾಂಗ್ರೆಸ್ಸಿಗೆ ಹೋಲಿಸಿದರೆ ಭ್ರಷ್ಟಾಚಾರ ರಹಿತ ಆಡಳಿತ ಕೊಡುವ ಭರವಸೆ ಇವೆಲ್ಲವುಗಳಿಗಾಗಿಯೇ ಇರಬಹುದು. ರಾಮ ಮಂದಿರ ಕಟ್ಟುವ ಭರವಸೆಯಿಂದ ಬಿಜೆಪಿಗೆ ಇವತ್ತು ಮತ ಬರುವ ಭಾವನಾತ್ಮಕತೆ ಇಲ್ಲದೇ ಇದ್ದಿರಬಹುದು.

ಆದರೆ…

ಐಡೆಂಟಿಟಿ ಎಂಬುದು ಎಂಥ ಸಾಕ್ಷರ, ಮಹತ್ವಾಕಾಂಕ್ಷೆಯ ಹಿಂದುವಿನಲ್ಲೂ ಸುಪ್ತವಾಗಿರುವಂಥದ್ದು. ಪ್ರಗತಿಪರರ ಸಾಲಿನಲ್ಲಿ ಗುರುತಿಸಿಕೊಳ್ಳುವ ಸಣ್ಣಮಟ್ಟದ ಹಿಂದುಗಳ ಸಂಖ್ಯೆಯ ಹೊರತಾಗಿ ಉಳಿದವರೆಲ್ಲ ಐಡೆಂಟಿಟಿ ಪ್ರಶ್ನೆ ಬಂದಾಗ ಧ್ರುವೀಕರಣಕ್ಕೆ ಒಳಗಾಗಿಯೇ ಆಗುತ್ತಾರೆ. ಬಾಬ್ರಿ ಮಸೀದಿ ಎಂದು ಕರೆಯಲಾಗುತ್ತಿದ್ದರೂ ಪ್ರಾರ್ಥನೆಗೇನೂ ಬಳಕೆಯಾಗದೇ ಇದ್ದ ನಿರ್ಮಿತಿಯೊಂದನ್ನು ಕೆಡವಿದ್ದು ಕಾನೂನಿನ ಕಣ್ಣಿನಲ್ಲಿ ತಪ್ಪೇ ಹೌದು. ಆದರೆ ಮುಸ್ಲಿಂಮರಿಗೇನೂ ಧಾರ್ಮಿಕವಾಗಿ ಮುಖ್ಯವೆನಿಸದ, ಆದರೆ ರಾಮಜನ್ಮಭೂಮಿಯಾಗಿರುವುದರಿಂದ ಹಿಂದುಗಳಿಗೆ ಭಾವನಾತ್ಮಕವಾಗಿ ಮುಖ್ಯವಾದ ಆ ಸ್ಥಳದಲ್ಲಿ ತನ್ನ ಐಡೆಂಟಿಟಿ ಕಂಡುಕೊಳ್ಳುವ ಒಬ್ಬ ಸಾಮಾನ್ಯ ಹಿಂದುವಿನ ಪ್ರಜ್ಞೆಯನ್ನು ಅದ್ಯಾವ ಪ್ರಗತಿಪರ ವಾದಗಳೂ ತಡೆಯಲಾಗುವುದಿಲ್ಲ. ಅಲ್ಲದೇ ಈ ಐಡೆಂಟಿಟಿ ಹಿಂದುಗಳ ಯಾವುದೋ ಒಂದಿಷ್ಟು ಮೇಲ್ವರ್ಗಗಳಿಗೆ ಸೀಮಿತವಾಗಿದ್ದರೆ ಪ್ರಗತಿಪರರು ಖುಷಿಪಡಬಹುದಿತ್ತು. ಆದರೆ ಎಲ್ಲ ವರ್ಗಗಳಲ್ಲಿ ನಮ್ಮದೆಂಬ ಭಾವವನ್ನು ಬಡಿದೆಬ್ಬಿಸುವ ತಾಕತ್ತು ಇದಕ್ಕಿದೆ ಎಂಬುದು ಅದಾಗಲೇ ಸಾಬೀತಾಗಿದೆ.

ಹೀಗಿರುವಾಗ ಆಡ್ವಾಣಿ ಮತ್ತಿತರರಿಗೆ ಕಾನೂನು ಪ್ರಕಾರವೇ ಶಿಕ್ಷೆಯಾಗಿಬಿಟ್ಟಿತು ಎಂದುಕೊಳ್ಳೋಣ. ಆಗ ಮೇಲ್ಮನವಿ ಹೋಗುವುದೇ ಇತ್ಯಾದಿಯಾದ ಕಾನೂನಾತ್ಮಕ ಆಯಾಮಗಳೇನೇ ಇದ್ದಿರಲಿ, ರಾಜಕೀಯವಾಗಿ ಆಡ್ವಾಣಿ ಮತ್ತೆ ಹೀರೋ ಆಗುತ್ತಾರೆ. ‘ಹಿಂದುಗಳೇ ಹೆಚ್ಚಿರುವ ದೇಶದಲ್ಲಿ ರಾಮನ ಜನ್ಮಸ್ಥಳಕ್ಕೆ ಹೋರಾಡಿದ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಶಿಕ್ಷೆ ಆಗುತ್ತದೆ ಎನ್ನುವುದಾದರೆ ನಮ್ಮ ಅಸ್ತಿತ್ವಕ್ಕೆ ಏನು ಬೆಲೆ ಸಿಕ್ಕಂತಾಯಿತು’ ಎಂಬ ಪ್ರಶ್ನೆಯೊಂದನ್ನು ಇದು ಸಹಜವಾಗಿ ಹಿಂದುವಿನ ಎದೆಯಲ್ಲಿ ಹುಟ್ಟುಹಾಕುತ್ತದೆ. ಅಷ್ಟೇ..

ಉಳಿದಂತೆ ಸರಿ-ತಪ್ಪುಗಳ ತಾತ್ವಿಕ ಚರ್ಚೆಯನ್ನು, ಸೆಕ್ಯುಲರ್ ವಾದದ ತರ್ಕಗಳನ್ನು ಅವೆಷ್ಟೇ ಅಡ್ಡಡ್ಡ ಉದ್ದುದ್ದ ಹರವಿಟ್ಟರೂ ಅದು ಹಿಂದುವಿನ ಐಡೆಂಟಿಟಿ ಆತಂಕಕ್ಕ ಸಮಾಧಾನ ಕೊಡಲಾರದು. ನೆನಪಿರಲಿ, ಅಮೆರಿಕ, ಫ್ರಾನ್ಸ್ ಸೇರಿದಂತೆ ಮುಂದುವರಿದ ರಾಷ್ಟ್ರಗಳೇ ಐಡೆಂಟಿಟಿ ರಾಜಕಾರಣಕ್ಕೆ ಗಾಢವಾಗಿ ತಿರುಗಿಕೊಳ್ಳುತ್ತಿರುವ ಕಾಲವಿದು. ವ್ಯಂಗ್ಯವೇನೆಂದರೆ, ಯಾವ ಆಡ್ವಾಣಿಯವರನ್ನು ಮಾರ್ಗದರ್ಶಕ ಮಂಡಲಕ್ಕೆ ಸರಿಸಿ ಮೋದಿ-ಶಾ ಜೋಡಿ ರಾಷ್ಟ್ರ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬಂತೋ, ತೀರ್ಪೇನಾದರೂ ಆಡ್ವಾಣಿ ಮತ್ತು ಸಹಚರರ ವಿರುದ್ಧ ಬಂದರೆ ಅದರಿಂದಾಗುವ ಧ್ರುವೀಕರಣದ ಲಾಭ ಸಿಗುವುದೂ ಇದೇ ಜೋಡಿಗೇ ಆಗಿದೆ.

ಅಕಸ್ಮಾತ್ ಹೀಗೆಲ್ಲ ಆಗಿದ್ದೇ ಆದರೆ ಆಗ 2019ರ ಚುನಾವಣಾ ಪ್ರಚಾರದಲ್ಲಿ ಉಳಿದೆಲ್ಲ ವಿಷಯಗಳು ನೇಪಥ್ಯಕ್ಕೆ ಹೋಗಿಬಿಡುತ್ತವೆ. ಜಿಎಸ್ಟಿ ಜಾರಿಯಿಂದ ಒಳ್ಳೆಯದಾಯಿತೇ, ಅಚ್ಛೇ ದಿನಗಳು ಬಂದವೇ, ಮೋದಿ ಸರ್ಕಾರ ಯುವಕರಿಗೆ ಎಷ್ಟರಮಟ್ಟಿಗೆ ಉದ್ಯೋಗ ನೀಡಿತು ಎಂಬೆಲ್ಲ ಪ್ರಶ್ನೆಗಳು ಅಸ್ತಿತ್ವ ಕಳೆದುಕೊಂಡು, ಇವತ್ತಿನ ಮಾರ್ಗದರ್ಶಕ ಮಂಡಳವು ಈ ಹಿಂದೆ ಹರಿಸಿದ್ದ ಬೆವರಿನ ಹನಿಗಳೇ ನದಿಯಾಗಿ ಬಿಜೆಪಿಯನ್ನು ದಡಮುಟ್ಟಿಸಲಿವೆ.

Leave a Reply