ಅನವಶ್ಯಕ ಕೆಂಪು ಬತ್ತಿಗಳನ್ನು ಕಿತ್ತೆಸೆದಿದೆ ಕೇಂದ್ರ ಸಂಪುಟ ನಿರ್ಣಯ, ಖುದ್ದು ಕೆಂಪು ಬತ್ತಿ ಮುಕ್ತ ಮೋದಿ

ಡಿಜಿಟಲ್ ಕನ್ನಡ ಟೀಮ್:

ಕಾರಿನ ಮೇಲೆ ಕೆಂಪು ಬತ್ತಿ ಹಾಕಿಕೊಂಡು ಹೋಗುವುದು ಸರ್ಕಾರದ ಅಧಿಕಾರ ವರ್ಗಕ್ಕೆ ಪ್ರತಿಷ್ಠೆಯ ವಿಷಯವಾಗಿಬಿಟ್ಟಿತ್ತು. ಆದರೆ ಕೇಂದ್ರ ಸಚಿವ ಸಂಪುಟವು ಬುಧವಾರ ಈ ಬಗ್ಗೆ ನಿರ್ಣಯ ಕೈಗೊಂಡಿದ್ದು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಲೋಕಸಭೆ ಸ್ಪೀಕರ್ ಮಾತ್ರ ಕೆಂಪುಬತ್ತಿ ಬಳಸಬಹುದೆಂದು ಸ್ಪಷ್ಟಪಡಿಸಿದೆ.

ಮೇ 1ರಿಂದ ಈ ನಿಯಮ ಜಾರಿಗೆ ಬರಲಿದೆ. ಈ ಹಿಂದೆ 2013ರ ಸುಪ್ರೀಂಕೋರ್ಟ್ ನಿರ್ದೇಶನವೂ ಕೆಂಪುಬತ್ತಿ ಬಳಕೆದಾರರ ಸಂಖ್ಯೆಗೆ ಕಡಿವಾಣ ಹಾಕಿತ್ತು. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳ ಮುಖ್ಯಸ್ಥರು, ಸಾಂವಿಧಾನಿಕ ಹುದ್ದೆ ಹೊಂದಿರುವವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಧರಿಸುವ ವಿಶೇಷ ಗಣ್ಯರು ಮಾತ್ರವೇ ಕಾರಿನ ಮೆಲೆ ಕೆಂಪು ಬತ್ತಿ ಹಾಕಿಕೊಳ್ಳಬಹುದೆಂದು ಹೇಳಿತ್ತು. ಸಂಪುಟದ ನಿರ್ಣಯವು ಈ ಅವಕಾಶವನ್ನು ಇನ್ನಷ್ಟು ಬಿಗಿಗೊಳಿಸಿ, ಗಣ್ಯರ ಸಂಖ್ಯೆಯನ್ನು ಯಾವುದೇ ಅಸ್ಪಷ್ಟತೆಗಳಿಗೆ ಎಡೆಯಿಲ್ಲದಂತೆ ನಿರ್ದಿಷ್ಟಗೊಳಿಸಿದೆ.

ಇತ್ತೀಚೆಗೆ ಅವಕಾಶವಿದ್ದರೂ ಸಹ ಪ್ರಧಾನಿ ಮೋದಿ ತಮ್ಮ ಕಾರಿನ ಮೇಲಿನ ಕೆಂಪು ಬತ್ತಿಯನ್ನು ತೆಗೆದುಹಾಕಿದ್ದರು. ಇದೀಗ ಸಂಪುಟ ನಿರ್ಣಯದೊಂದಿಗೆ ಸಚಿವರು, ಮುಖ್ಯಮಂತ್ರಿಗಳು, ಉನ್ನತ ಅಧಿಕಾರಿಗಳು, ನ್ಯಾಯಾಧೀಶರೆಲ್ಲ ಕೆಂಪು ಬತ್ತಿ ಬಳಸಿ ಪ್ರತಿಷ್ಟೆ ಮೆರೆಯುವುದಕ್ಕೆ ಕಡಿವಾಣ ಬಿದ್ದಿದೆ.

Leave a Reply