ಕೆರೆಯೋ- ಕೈಗಾರಿಕೆಯೋ? ಬೆಳ್ಳಂದೂರು ಬಿಳಿ ನೊರೆ ಮುಕ್ತಗೊಳಿಸಲು ಎನ್ಜಿಟಿ ನೀಡಿರುವ ಆದೇಶ ಹುಟ್ಟಿಸಿರುವ ಕಂಪನ

ಡಿಜಿಟಲ್ ಕನ್ನಡ ಟೀಮ್:

ಬೆಳ್ಳಂದೂರು ಕೆರೆ ಎಂಬುದು ಮಾಲಿನ್ಯಕ್ಕೊಂದು ರೂಪಕದಂತಾಗಿ ವರ್ಷಗಳೇ ಆಗಿವೆ. ಬೆಂಗಳೂರಿನ ಜಲಮಾಲಿನ್ಯ ವಿವರಿಸುವಾಗಲೆಲ್ಲ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬೆಳ್ಳಂದೂರು ಕೆರೆಯ ಬಿಳಿ ನೊರೆ, ರಸ್ತೆಗೆಲ್ಲ ಚಿಮ್ಮಿ ಬರುತ್ತಿರುವ ಅದರ ಗಲೀಜು, ಸ್ಥಳೀಯರು ಹಾಗೂ ಸಂಚಾರಿಗಳೆಲ್ಲ ಮೂಗುಮುಚ್ಚಿ ಮುಖ ಕಿವುಚಿಕೊಂಡಿರುವುದರ ಬವಣೆ, ರಾಸಾಯನಿಕದ ಜೋರು ಅತಿಯಾಗಿ ಕೆರೆಗೇ ಬೆಂಕಿ ಬಿದ್ದಿದ್ದು…. ಇವೆಲ್ಲವನ್ನೂ ದೇಶವೇ ನೋಡಿದೆ.

ಇದೀಗ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಬುಧವಾರ ಈ ಬಗ್ಗೆ ನಿರ್ದೇಶನ ನೀಡಿ, ಬೆಳ್ಳಂದೂರು ಕೆರೆ ಬಳಿಯ 97 ಕೈಗಾರಿಕೆಗಳನ್ನು ಮುಚ್ಚುವಂತೆ ಸೂಚಿಸಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ನೊಟೀಸ್ ಹೋಗಿದೆ.

ಆದರೆ ಪರಿಣತರು ಹೇಳುತ್ತಿರುವ ಪ್ರಕಾರ ಎನ್ಜಿಟಿ ಆದೇಶ 97 ಕೈಗಾರಿಕೆಗಳಿಗೆ ಸೀಮಿತವಲ್ಲ. ಈ ಆದೇಶವನ್ನಿನ್ನೂ ಸರಿಯಾಗಿ ಅಭ್ಯಸಿಸಬೇಕಿದ್ದು, ಕೆರೆಯ ನೀರು ಹಿಡಿದಿಡುವ ಪ್ರದೇಶದಲ್ಲಿರುವ ಎಲ್ಲ ಕೈಗಾರಿಕೆಗಳನ್ನು ಬಂದ್ ಮಾಡಬೇಕು ಎಂಬುದೇ ಆಶಯವಾಗಿದ್ದರೆ ಸುಮಾರು 498 ಕೈಗಾರಿಕೆಗಳನ್ನು ಮುಚ್ಚಬೇಕಾಗುತ್ತದೆ.

ಇಲ್ಲಿ ಕೈಗಾರಿಕೆಗಳೆಂದರೆ ಸಣ್ಣ-ಮಧ್ಯಮ ಎಲ್ಲ ಬಗೆಯವೂ ಆಗಿವೆ. ಡೈಯಿಂಗ್, ದೋಭಿ, ಚರ್ಮ ಸಂಸ್ಕರಣೆ, ವಾಹನ ಸ್ವಚ್ಛಗೊಳಿಸುವಿಕೆ ಹೀಗೆ ಹಲವು ಬಗೆಯ ಉದ್ಯಮಗಳಿವೆ. ಈಗ ಗುರುತಿಸಲಾಗಿರುವ 97 ುದ್ದಿಮೆಗಳು ನೇರವಾಗಿ ನೀರು ವರ್ಜಿಸುತ್ತಿರುವಂಥವು. ಅಂದರೆ, ನಾಲ್ಕು ತಂಡಗಳ ವರದಿ ಆಧಾರದಲ್ಲಿ ಸಿದ್ಧಗೊಂಡ ಪ್ರಾಥಮಿಕ ವರದಿ ಆಧಾರದಲ್ಲಿ ಈ ಕೈಗಾರಿಕೆಗಳಿಗೆ ಮುಚ್ಚುವ ನೊಟೀಸ್ ಹೋಗಿದೆ. ರಾಜ್ಯ ಸರ್ಕಾರವು ಅಂತಿಮ ಹಂತದ ವರದಿಯನ್ನು ಇನ್ನಷ್ಟೇ ನೀಡಬೇಕಿದ್ದು ಅದು 400ಕ್ಕೂ ಹೆಚ್ಚು ಕೈಗಾರಿಕೆಗಳನ್ನು ಒಳಗೊಂಡಿರುತ್ತದೆ. ಇವೆಲ್ಲವನ್ನೂ ಮುಚ್ಚುವ ಆದೇಶ ಎನ್ಜಿಟಿಯಿಂದ ಬಂದರೆ ಅದು ಏನೆಲ್ಲ ಕಂಪನ ಸೃಷ್ಟಿಸಲಿದೆ ಎಂಬುದು ಗಮನಿಸಬೇಕಾದ ಸಂಗತಿ.

ಅಕ್ಕಿ ಮೇಲೂ ಆಸೆ, ನೆಂಟರ ಮೇಲೆ ಪ್ರೀತಿ ಅನ್ನುವ ಹಾಗಿಲ್ಲ. ಬೆಳ್ಳಂದೂರು ಕೆರೆಯು ಕೆರೆಯಾಗಿಯೇ ಉಳಿಯಬೇಕಿದ್ದರೆ ಈ ಕ್ರಮ ಅಗತ್ಯ. ಆದರೆ ಈ ಹಿಂದೆ ಕೋರ್ಟ್ ಆದೇಶದ ಪ್ರಕಾರವೇ ಸರ್ಕಾರ ಮಾಡಿದ ಕೆರೆ ಒತ್ತುವರಿ ತೆರವಿನ ಚಿತ್ರಣಗಳನ್ನು ನೆನಪಿಸಿಕೊಳ್ಳಿ. ಘಟಾನುಘಟಿಗಳೆಲ್ಲ ತಡೆಯಾಜ್ಞೆಯನ್ನೋ ಪ್ರಭಾವವನ್ನೋ ತಂದರು. ಇವ್ಯಾವವೂ ಇಲ್ಲದವರು ಅಗತ್ಯ ದಾಖಲೆಗಳನ್ನು ಪಡೆದೇ ಮನೆಕಟ್ಟಿಕೊಂಡಿದ್ದರೂ ಬೀದಿಗೆ ಬಿದ್ದರು. ಅವರಿಗೆ ದಾಖಲೆ ಸೃಷ್ಟಿಸಿಕೊಟ್ಟ ಅಧಿಕಾರಿಗೆ ಏನೂ ಆಗಲಿಲ್ಲ. ಹೋಗಲಿ, ಈ ಕ್ರಮದಿಂದ ಮುಂದಿನ ಮಳೆಗಾಲಕ್ಕೆ ಕಾಲುವೆಗಳೆಲ್ಲ ಕಣ್ಬಿಟ್ಟು ಬೆಂಗಳೂರಿನ ಕೆರೆಗಳೆಲ್ಲ ತುಂಬುತ್ತವೆಯಾ ಅಂತ ಕೇಳಿದರೆ ಅದಕ್ಕೂ ಆಶಾದಾಯಕ ಉತ್ತರವೇನಿಲ್ಲ.

ಭವಿಷ್ಯದಲ್ಲಿ ಇಲ್ಲೂ ಅಂಥದೇ ಅಧ್ಯಾಯ ಮರುಕಳಿಸಬಹುದು. ಕೈಗಾರಿಕೆಗಳನ್ನು ಮುಚ್ಚಿಸುವ ಹಂತದಲ್ಲಿ ಅಲ್ಲೂ ಪ್ರಭಾವ ಇದ್ದವರು- ಇಲ್ಲದಿದ್ದವರು ಬೇರೆ ಬೇರೆ ಅನುಭವ ಪಡೆದುಕೊಳ್ಳುತ್ತಾರೆ. ಕೊನೆಗಾದರೂ ಬೆಳ್ಳಂದೂರು ಕೆರೆ ರಾಸಾಯನಿಕ ಮುಕ್ತವಾಗುವುದೇ…. ನಿರಾಸೆಗಳ ನಡುವೆಯೇ ಕಾದು ನೋಡಬೇಕಾದ ಉತ್ತರ.

Leave a Reply