ಕಾಶ್ಮೀರಿ ಕಲ್ಲುತೂರಾಟಗಾರರಿಗೆ ಕಲ್ಲಿನಲ್ಲೇ ಉತ್ತರಿಸುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದೆ ಈ ಬುಡಕಟ್ಟು ಸಮುದಾಯ!

(ಚಿತ್ರಕೃಪೆ- ಹಿಂದುಸ್ತಾನ್ ಟೈಮ್ಸ್)

ಡಿಜಿಟಲ್ ಕನ್ನಡ ಟೀಮ್:

ಮೊನ್ನೆ ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯನಿರತ ಸಿಆರ್ಪಿಎಫ್ ಯೋಧನ ಮೇಲೆ ಕಾಶ್ಮೀರಿ ಯುವಕರು ಹಲ್ಲೆ ಮಾಡಿದ ದೃಶ್ಯಾವಳಿ ನೋಡುತ್ತ ದೇಶವೇ ಕುದಿದು ಹೋಗಿದೆ. ಟ್ವಿಟ್ಟರ್, ಫೇಸ್ಬುಕ್ ಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಾಕ್ಷರ/ ಆರ್ಥಿಕ ಎತ್ತರದ ವರ್ಗದ ಮಾತು ಹಾಗಿರಲಿ. ದೇಶದ ಬಡ ಪ್ರದೇಶಗಳಲ್ಲೊಂದೆಂದು ಕರೆಸಿಕೊಳ್ಳುವ ಜಬುವಾ ಎಂಬ ಮಧ್ಯಪ್ರದೇಶದ ಗ್ರಾಮವೊಂದರ ಬುಡಕಟ್ಟು ಸಮುದಾಯವೂ ಜಮ್ಮು-ಕಾಶ್ಮೀರದಲ್ಲಿ ಆಗುತ್ತಿರುವ ವಿದ್ಯಮಾನಗಳಿಗೆ ಆಕ್ರೋಶ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಕಾಶ್ಮೀರದ ಕಲ್ಲುತೂರಾಟಗಾರರಿಗೆ ಕಲ್ಲಿನ ಮೂಲಕವೇ ಉತ್ತರ ಕೊಡುವುದಕ್ಕೆ ತಮಗೆ ಅವಕಾಶ ನೀಡಿ, ಆ ಮೂಲಕ ದೇಶಸೇವೆ ಮಾಡುವುದಕ್ಕೆ ಅನುವು ಮಾಡಿಕೊಡಿ ಅಂತ ಈ ಸಮುದಾಯದ ಯುವಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಆ ಮನವಿ ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಬರೆದಿದ್ದಾಗಿದ್ದು, ಅದನ್ನು ಅವರಿಗೆ ತಲುಪಿಸಬೇಕೆಂಬ ವಿನಂತಿ ಇವರೆಲ್ಲರದ್ದು.

ಇಲ್ಲಿನ ಭಿಲ್ ಜನಾಂಗವು ಬುಡಕಟ್ಟು ಮೂಲದ್ದು. ಈಗ ಹೆಚ್ಚಿನದಾಗಿ ಕೃಷಿ ಕೂಲಿಯಲ್ಲೇ ತೊಡಗಿಸಿಕೊಂಡಿದೆ. ಇವರಲ್ಲಿ ಉಳಿದುಕೊಂಡಿರುವ ಬುಡಕಟ್ಟು ಮೂಲದ ಕೌಶಲದಲ್ಲಿ ಮುಖ್ಯವಾಗಿರುವಂಥದ್ದು ಹಗ್ಗಕ್ಕೆ ಕಲ್ಲು ಕಟ್ಟಿ ಅದನ್ನು ತಿರು ತಿರುಗಿಸಿ ಗುರಿಯ ಮೇಲೆ ದಾಳಿ ಮಾಡುವುದು. ಬೇಟೆ ಸಂದರ್ಭದಲ್ಲಿ ಪರಿಪಾಲಿಸುತ್ತಿದ್ದ ರೂಢಿ ಇದು. ಈಗಲೂ ಇವರು ಹಗ್ಗದ ಕವಣೆಯಲ್ಲಿಟ್ಟು ಕಲ್ಲು ಬೀಸಿದರೆಂದರೆ 50 ಮೀಟರ್ ದೂರದ ಗುರಿಗಂತೂ ನಿಖರವಾಗಿ ಅಷ್ಟೇ ಬಿರುಸಾಗಿ ಹೋಗಿ ತಾಗುತ್ತದೆ.

ಸಾಕ್ಷರತೆಯಲ್ಲಿ ಎರಡನೆ ಅತಿ ಕೆಳಮಟ್ಟದಲ್ಲಿರುವ ಪ್ರದೇಶವಿದು. ಅದೇನೇ ಇದ್ದರೂ ಹಲವರ ಕೈಗೆ ಮೊಬೈಲ್ ಫೋನು ಬಂದಿದೆ. ಟಿವಿ ಲಭ್ಯವಿದೆ. ಈ ಮಾಧ್ಯಮದಲ್ಲೆಲ್ಲ ಕಾಶ್ಮೀರಿ ಯುವಕರು ಕಲ್ಲು ತೂರಾಡುತ್ತ ನಮ್ಮ ಸೇನಾಪಡೆ ವಿರುದ್ಧ ಆಕ್ರಮಣ ಮಾಡುವ ದೃಶ್ಯಾವಳಿಗಳನ್ನು ಇವರೆಲ್ಲ ನೋಡಿದ್ದಾರೆ. ಮೊನ್ನೆಯ ಪ್ರಕರಣವಂತೂ ಇವರ ಆಕ್ರೇಶವನ್ನು ಹಿಡಿದಿಟ್ಟುಕೊಳ್ಳಲಾಗದ ಸ್ಥಿತಿಗೆ ತಲುಪಿಸಿದೆ.

‘ನಾವು ತಂತಿಯಾ ಭಿಲ್ ಎಂಬ ಬುಡಕಟ್ಟು ನಾಯಕನ ನೇತೃತ್ವದಲ್ಲಿ ಈ ಹಿಂದೆ ಬ್ರಿಟಿಷರ ವಿರುದ್ಧ ಹೋರಾಡಿರುವ ಇತಿಹಾಸ ಹೊಂದಿದ್ದೇವೆ. ಈಗ ನಮಗೆ ಇನ್ನೊಮ್ಮೆ ದೇಶಸೇವೆಗೆ ಅವಕಾಶ ಮಾಡಿಕೊಡಿ. ನಾವು ಕಾಶ್ಮೀರಿಗಳ ಕಲ್ಲಿನೇಟಿಗೆ ಕಲ್ಲಿನಲ್ಲೇ ಉತ್ತರ ಕೊಡುತ್ತೇವೆ. ನಾವು ದೇಶಭಕ್ತರು. ಸೈನಿಕರ ಪಾಡು ನೋಡಿ ನಮ್ಮ ರಕ್ತ ಕುದಿಯುತ್ತಿದೆ’ ಎಂದಿದ್ದಾರೆ ಸಮುದಾಯ ಪ್ರಮುಖರು. ಇದನ್ನು ಪಿಟಿಐ ಸುದ್ದಿಸಂಸ್ಥೆ ಹಾಗೂ ಹಿಂದುಸ್ತಾನ್ ಟೈಮ್ಸ್ ಪತ್ರಿಕೆಗಳು ವರದಿ ಮಾಡಿವೆ.

ನಮ್ಮಲ್ಲಿ ಚಾಟರ್ ಬಿಲ್ಲು, ಚಿಟಿಬಿಲ್ಲು ಎಂದು ಕರೆಯಲ್ಪಡುವ ಸಾಧನಕ್ಕಿಂತ ಇವರದ್ದು ತುಸು ಭಿನ್ನ. ಅದನ್ನು ಗೋಫನ್ ಎನ್ನುತ್ತಾರೆ. ಜಬುವಾದ ಹತಿಪಾವೊ ಗುಡ್ಡದಲ್ಲಿ ತಮ್ಮ ಕಲ್ಲು ತೂರುವ ಕೌಶಲವನ್ನು ಮತ್ತಷ್ಟು ಚುರುಕುಗೊಳಿಸಿಕೊಳ್ಳುತ್ತಿರುವ ಸಮುದಾಯದ ನೂರಾರು ಯುವಕರು, ‘ಗೋಫನ್ ಬಟಾಲಿಯನ್’ ಅಂತಲೇ ಪಡೆಯೊಂದನ್ನು ಕಟ್ಟಿ ಅಂತ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಸ್ಥಳೀಯ ಬಿಜೆಪಿ ಮತ್ತು ಕಾಂಗ್ರೆಸ್ ರಾಜಕಾರಣಿಗಳೆಲ್ಲ ಈ ಸಮುದಾಯಕ್ಕೆ ಬೆಂಬಲವಾಗಿ ಧ್ವನಿಗೂಡಿಸುತ್ತಿರುವುದು ವಿಶೇಷ.

1 COMMENT

Leave a Reply