ದೆಹಲಿ ಪಾಲಿಕೆ ಚುನಾವಣೆ: ಕೇಜ್ರಿವಾಲರದ್ದು ಬೆದರಿಕೆ ತಂತ್ರ, ಮೋದಿ ಹೆಸರು ಬಿಟ್ಟರೆ ಮತ್ತೇನಿಲ್ಲ ಬಿಜೆಪಿಯ ಹತ್ತಿರ!

ಡಿಜಿಟಲ್ ಕನ್ನಡ ವಿಶೇಷ:

‘ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿಗೇನಾದರೂ ಮತ ಹಾಕಿದರೆ ಆ ನಂತರ ನಿಗೆ ಆರೋಗ್ಯ ವ್ಯತ್ಯಾಸವಾದರೆ, ಮಗುವಿಗೆ ಡೆಂಗ್ಯೂ ಬಂದರೆ ನೀವೇ ಜವಾಬ್ದಾರರಾಗುತ್ತೀರಿ’ ಇದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರಿಂದ ಉದುರಿರುವ ನುಡಿಮುತ್ತುಗಳು.

ಇದೊಂದು ಪರೋಕ್ಷ ಬೆದರಿಕೆ. ನೋಡಿ, ರಾಜ್ಯದಲ್ಲಿ ನಾವೇ ಅಧಿಕಾರದಲ್ಲಿರುವುದರಿಂದ ಸ್ಥಳೀಯ ಸಂಸ್ಥೆ ಚುನಾವಣೆಗಳ್ಲಲಿ ನಮ್ಮನ್ನೇ ಆರಿಸಿದರೆ ನಿಮಗೆ ಲಾಭವಾಗುತ್ತದೆ ಎಂಬರ್ಥದ ಪುಸಲಾಯಿಸುವಿಕೆಯನ್ನು ಒಪ್ಪಬಹುದು. ಅವಕಾಶವಿದ್ದಾಗ ಇಂಥದೊಂದು ಪುಸಲಾಯಿಸುವಿಕೆಯನ್ನು ಎಲ್ಲ ಪಕ್ಷಗಳೂ ಮಾಡುತ್ತವೆ. ಆದರೆ ಇಲ್ಲಿ ಅರವಿಂದ ಕೇಜ್ರಿವಾಲರು ಪರೋಕ್ಷವಾಗಿ ಹೇಳುತ್ತಿರುವುದು ಹೇಗಿದೆ ಎಂದರೆ- ದೆಹಲಿಗರು ಬಿಜೆಪಿಗೇನಾದರೂ ಮತ ಹಾಕಿದರೆ ಮುಖ್ಯಮಂತ್ರಿ ಅಧಿಕಾರ ಉಪಯೋಗಿಸಿಕೊಂಡು ನಿಮ್ಮನ್ನು ಶಿಕ್ಷಿಸುತ್ತೇನೆ ಹುಷಾರ್!

ನಿಜ. ಹತ್ತು ವರ್ಷಗಳಿಂದ ಮುನ್ಸಿಪಾಲಿಟಿಯಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಅಲ್ಲಿನ ಹಲವು ಸಮಸ್ಯೆಗಳಿಗೆ ಉತ್ತರದಾಯಿ ಆಗುತ್ತದೆ. ಹಾಗಂತ ಡೆಂಗ್ಯೂದಿಂದ ಮಗು ಮರಣಿಸಿದರೆ ಮುಖ್ಯಮಂತ್ರಿಯಾಗಿ ಅದು ತನಗೆ ಸಂಬಂಧವಿಲ್ಲ ಎಂಬಂತೆ ಮಾತನಾಡುವುದು ಅದೆಂಥ ಸಂವೇದನಾಶೂನ್ಯತೆ ಅಲ್ಲವೇ?

ಹಾಗೆ ನೋಡಿದರೆ ಮಹಾನಗರ ಪಾಲಿಕೆಯೊಂದರ ಚುನಾವಣೆ ರಾಷ್ಟ್ರೀಯ ಸುದ್ದಿ ಆಗಬೇಕಿಲ್ಲ. ಆದರೆ ಇದು ಕೇಜ್ರಿವಾಲ್ ವರ್ಸಸ್ ಮೋದಿ ಎಂಬ ಅಖಾಡವಾಗಿರುವುದರಿಂದ ಅಷ್ಟರಮಟ್ಟಿಗಿನ ಪ್ರಚಾರ. ಎಬಿಪಿ ಸುದ್ದಿವಾಹಿನಿ ಸಮೀಕ್ಷೆ ಪ್ರಕಾರ ಬಿಜೆಪಿಯೇ ಪಾರಮ್ಯ ಮೆರೆಯುವ ಸಾಧ್ಯತೆ ತೋರಿರುವುದು ಅರವಿಂದ ಕೇಜ್ರಿವಾಲರ ಅಸ್ವಸ್ಥ ಹೇಳಿಕೆಗೆ ಕಾರಣವಾಗಿದ್ದಿರಬಹುದು.

ಇನ್ನು, ಮುನ್ಸಿಪಾಲಿಟಿ ಚುನಾವಣೆಯಲ್ಲೂ ಮೋದಿಜಪ ಬಿಟ್ಟರೆ ಬಿಜೆಪಿಗೆ ಮತ್ಯಾವುದೂ ಬಂಡವಾಳವಿಲ್ಲ. ಕೇಜ್ರಿವಾಲರನ್ನು ಇಳಿಸಿ ದೆಹಲಿ ಗದ್ದುಗೆ ಏರುವುದಕ್ಕೆ ಈ ಚುನಾವಣೆ ಬಲ ಕೊಡಲಿ ಅಂತ ಬಯಸುತ್ತಿರುವ ಬಿಜೆಪಿಗೆ ದೆಹಲಿಯಲ್ಲಿ ಒಂದು ನಾಯಕತ್ವದ ಮುಖವನ್ನು ಕಂಡುಕೊಳ್ಳುವುದಕ್ಕೆ ಈವರೆಗೆ ಆಗಿಲ್ಲ. ಮತ್ತೇನೂ ಕೇಳಬೇಡಿ, ಮೋದಿ ಮುಖ ನೋಡಿ ಮತ ಕೊಡಿ ಎಂಬಂತಿದೆ ಇವರ ಚುನಾವಣಾ ಪ್ರಚಾರ. ಬಿಜೆಪಿಯಿಂದ ಬಿಡುಗಡೆಯಾಗಿರುವ ಕೆಲ ವಿಡಿಯೋ ಜಾಹೀರಾತುಗಳು ಮಾಡುತ್ತಿರುವುದು ಇದನ್ನೇ. ಉಚಿತ ವೈಫೈ, ಸಿಸಿಟಿವಿ ಎಂದೆಲ್ಲ ಈ ಮೊದಲು ನೀಡಿದ್ದ ಭರವಸೆಗಳನ್ನು ಈಡೇರಿಸದ ಆಪ್ ಮತ್ತೇಕೆ ಮತ ಕೇಳಲು ಬಂದಿದೆ ಎಂಬುದು ಈ ಎಲ್ಲ ಜಾಹೀರಾತುಗಳ ವಾದಸರಣಿ. ಅಷ್ಟಾದರೆ ಪರವಾಗಿಲ್ಲ. ಕೊನೆಗೆ, ಈ ಭರವಸೆಗಳನ್ನೆಲ್ಲ ಮೋದಿ ಈಡೇರಿಸುತ್ತಾರೆ ಎನ್ನುವುದರೊಂದಿಗೆ ಮುಕ್ತಾಯವಾಗುತ್ತದೆ ಸಂವಹನ.

ಪಾಕಿಸ್ತಾನದ ಜತೆ ವ್ಯವಹರಿಸುವುದಕ್ಕೂ ಮೋದಿ, ಮುನ್ಸಿಪಾಲಿಟಿ ಪಾಚಿ ಸ್ವಚ್ಛಗೊಳಿಸುವುದಕ್ಕೂ ಮೋದಿ ಎನ್ನುವುದು ಈ ಕ್ಷಣಕ್ಕೆ ಲಾಭ ತಂದುಕೊಡುವ ರೋಚಕ ಅಂಶವೇ ಆಗಿರಬಹುದಾದರೂ ಮೋದಿ ಹೊರತಾದ ಪಕ್ಷದ ಸತ್ವಹೀನತೆಯನ್ನೂ ಇದು ಬಿಂಬಿಸುತ್ತಿದೆ.

Leave a Reply