ವೀಸಾ ನಿಯಂತ್ರಣಕ್ಕೆ ಹೊರಟಿರುವ ಅಮೆರಿಕಕ್ಕೆ ಭಾರತದ ಅವಾಜು- ಭಾರತದಲ್ಲೂ ಅಮೆರಿಕನ್ ಕಂಪನಿಗಳಿವೆ ತಿಳಿದಿರಲಿ!

ಡಿಜಿಟಲ್ ಕನ್ನಡ ಟೀಮ್:

ಭಾರತೀಯರ ಆತಂಕಕ್ಕೆ ಕಾರಣವಾಗಿರುವ ಡೊನಾಲ್ಡ್ ಟ್ರಂಪ್ ಸರ್ಕಾರದ ಹೆಚ್-1ಬಿ ವೀಸಾ ನಿಯಂತ್ರಣ ಕ್ರಮಕ್ಕೆ ಭಾರತ ಈಗ ಅಮೆರಿಕಕ್ಕೆ ಎಚ್ಚರಿಕೆ ರವಾನಿಸುತ್ತಿದೆ. ಇಷ್ಟು ದಿನಗಳ ಕಾಲ ಅಮೆರಿಕದೊಂದಿಗೆ ಮಾತುಕತೆ ನಡೆಸಿ ಈ ಸಮಸ್ಯೆ ಬಗೆಹರಿಸುತ್ತಿದ್ದೇವೆ ಎಂದು ಶಾಂತವಾಗಿ ಹೇಳುತ್ತಿದ್ದ ಭಾರತ, ಈಗ ತನ್ನ ಧ್ವನಿಯನ್ನು ಕ್ರಮೇಣವಾಗಿ ಗಟ್ಟಿಗೊಳಿಸುತ್ತಿದೆ. ಈ ಕುರಿತಾಗಿ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅಮೆರಿಕಕ್ಕೆ ರವಾನಿಸಿರುವ ಎಚ್ಚರಿಕೆ ಹೀಗಿದೆ…

‘ಅಮೆರಿಕದಲ್ಲಿ ಕೇವಲ ಭಾರತದ ಕಂಪನಿಗಳು ಮಾತ್ರವಿಲ್ಲ… ಭಾರತದಲ್ಲೂ ಅಮೆರಿಕದ ಹಲವು ಕಂಪನಿಗಳಿವೆ. ಆ ಕಂಪನಿಗಳು ಸಾಕಷ್ಟು ಲಾಭವನ್ನೇ ಮಾಡುತ್ತಿವೆ. ಆ ಲಾಭ ಅಮೆರಿಕದ ಆರ್ಥಿಕತೆಗೆ ಸೇರುತ್ತಿವೆ. ಹೀಗಾಗಿ ಕೇವಲ ಅಮೆರಿಕದಲ್ಲಿ ಮಾತ್ರ ಭಾರತದ ಕಂಪನಿಗಳ ಮೇಲೆ ಒತ್ತಡ ಹೇರಿಬಿಡಬಹುದು ಎಂಬ ಪರಿಸ್ಥಿತಿ ಇಲ್ಲ. ಕಳೆದ ಹಲವು ವರ್ಷಗಳಿಂದ ಭಾರತದಲ್ಲಿರುವ ಅಮೆರಿಕ ಕಂಪನಿಗಳ ಮೇಲೂ ನಾವು ಒತ್ತಡ ಹೇರಬಹುದು. ಈ ವಿಚಾರವನ್ನು ಅಮೆರಿಕ ದೊಡ್ಡದು ಮಾಡಿದರೆ, ನಾವು ನಮ್ಮದೇ ಆದ ರೀತಿಯಲ್ಲಿ ಇಂತಹುದೇ ನಿಯಂತ್ರಣವನ್ನು ಹಾಕಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ನಾವು ಅಮೆರಿಕದ ಜತೆಗೆ ಮಾತುಕತೆ ಮೂಲಕ ಈ ವಿಚಾರವನ್ನು ಸರಿಪಡಿಸಿಕೊಳ್ಳಲು ನೋಡುತ್ತೇವೆ. ಜತೆಗೆ ಭಾರತವು ಅಮೆರಿಕದ ವಿರುದ್ಧ ಇಂತಹ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ.’

ವಿಶ್ವ ವ್ಯಾಪಾರ ಒಪ್ಪಂದದ ಭಾಗವಾಗಿ ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಕೆಲವು ಬದ್ಧತೆಯನ್ನು ವ್ಯಕ್ತಪಡಿಸಿವೆ. ಅವನ್ನು ಉಲ್ಲಂಘಿಸುವುದಾದಲ್ಲಿ ಭಾರತವು ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವ ಬಗ್ಗೆ ಯೋಚಿಸಬೇಕಾಗುತ್ತದೆ ಅಂತಲೂ ನಿರ್ಮಲಾ ಹೇಳಿದ್ದಾರೆ.

ನಿರ್ಮಾಲಾ ಸೀತಾರಾಮನ್ ಅವರ ಈ ಮಾತುಗಳು ಅಮೆರಿಕಕ್ಕೆ ಎಚ್ಚರಿಕೆಯ ಸಂದೇಶವಾಗಿದ್ದು, ಮುಂದಿನ ದಿನಗಳಲ್ಲಿ ಅಮೆರಿಕ ಹೆಚ್-1ಬಿ ವಿಸಾ ಕುರಿತಂತೆ ಯಾವ ಹೆಜ್ಜೆ ಇಡಲಿದೆ ಎಂಬ ಕೂತೂಹಲ ಮೂಡಿದೆ.

Leave a Reply