ನೌಕೆಯಿಂದ ಭೂಭಾಗಕ್ಕೆ ಬಡಿಯುವ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ಡಿಜಿಟಲ್ ಕನ್ನಡ ಟೀಮ್:

ಭಾರತವು ಶುಕ್ರವಾರ ತನ್ನ ನೌಕಾಬಲ ಹೆಚ್ಚಿಸಿಕೊಳ್ಳುವಲ್ಲಿ ಮತ್ತೊಂದು ವಿಕ್ರಮ ಮೆರೆದಿದೆ.

ಯುದ್ಧ ನೌಕೆಯಿಂದ ಭೂಭಾಗದ ನಿರ್ದಿಷ್ಟ ಗುರಿಯನ್ನು ಧ್ವಂಸ ಮಾಡಬಲ್ಲ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದೆ. ಈವರೆಗೆ ಭಾರತದ ಬಳಿ ನೌಕೆಯಿಂದ ಇನ್ನೊಂದು ನೌಕೆಯನ್ನು ಘಾಸಿಗೊಳಿಸಬಲ್ಲ ಬ್ರಹ್ಮೋಸ್ ಕ್ಷಿಪಣಿಗಳು ಲಭ್ಯವಿದ್ದವು. ನೀರಲ್ಲಿದ್ದುಕೊಂಡು ಭೂಮಿಯನ್ನು ಮುಟ್ಟುವ ಬಲದ ಪರೀಕ್ಷೆ ಇದೇ ಮೊದಲ ಬಾರಿಗೆ ಆಗಿದೆ.

ಉಳಿದಂತೆ, ಭೂಭಾಗದಿಂದ ಭೂಭಾಗಕ್ಕೆ ಚಿಮ್ಮುವ ಬ್ರಹ್ಮೋಸ್ ಶಬ್ದಾತೀತ ವೇಗದ ಕ್ಷಿಪಣಿಗಳನ್ನು 2007ರಲ್ಲೇ ಭಾರತೀಯ ಸೇನೆ ಹೊಂದಿತ್ತು. 2005ರಲ್ಲಿ ನೌಕಾಸೇನೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಹೊಂದಿತು. ಭಾರತ ಮತ್ತು ರಷ್ಯದಿಂದ ಜಂಟಿಯಾಗಿ ಅಭಿವೃದ್ಧಿಗೊಳಿಸಲಾಗಿರುವ ಬ್ರಹ್ಮೋಸ್ ಕ್ಷಿಪಣಿಗಳು ಜಗತ್ತಿನ ಏಕೈಕ ಶಬ್ದಾತೀತ ಕ್ರೂಸ್ ಕ್ಷಿಪಣಿಗಳೆಂದು ಖ್ಯಾತಿ ಪಡೆದಿವೆ.

ಸು-30 ಜೆಟ್ ಗಳಿಂದಲೂ ಚಿಮ್ಮಿಸಬಹುದಾದ ಬ್ರಹ್ಮೋಸ್ ಕ್ಷಿಪಣಿಗಳ ಅಭಿವೃದ್ಧಿಯಲ್ಲಿ ಭಾರತ ತೊಡಗಿಕೊಂಡಿದ್ದು, ಅದಿನ್ನೂ ಪ್ರಾಥಮಿಕ ಹಂತದಲ್ಲಿದೆ. ಅಲ್ಲದೇ 400 ಕಿ.ಮೀ. ಚಿಮ್ಮಬಲ್ಲ ಕ್ಷಿಪಣಿಗಳ ಸಾಮರ್ಥ್ಯವನ್ನು 800 ಕಿ.ಮೀ.ಗೆ ಹೆಚ್ಚಿಸುವಲ್ಲೂ ಕೆಲಸಗಳಾಗುತ್ತಿವೆ.

Leave a Reply