ಸಮಾಜವಾದಿ ಧುರೀಣ ಮುಲಾಯಂ ಸಿಂಗ್ ಬಾಕಿ ಉಳಿಸಿಕೊಂಡಿರುವ ಕರೆಂಟ್ ಬಿಲ್ ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಇಷ್ಟು ದಿನಗಳ ಕಾಲ ಉತ್ತರ ಪ್ರದೇಶದಲ್ಲಿ ಮೆರೆಯುತ್ತಿದ್ದ ವಿಐಪಿ ಸಂಸ್ಕೃತಿಯನ್ನು ನೆಲಸಮ ಮಾಡಲು ಯೋಗಿ ಆದಿತ್ಯನಾಥ್ ಅವರ ಸರ್ಕಾರ ಒಂದೊಂದೇ ಹೆಜ್ಜೆ ಇಡುತ್ತಿದೆ. ಈಗ ಇದರ ಭಾಗವಾಗಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಅವರಿಗೆ ಒಂದು ವಾರ್ನಿಂಗ್ ಸಹ ಕೊಡಲಾಗಿದೆ. ಅದು ಯಾವ ವಿಷಯಕ್ಕೆ ಅಂದ್ರೆ, ಮುಲಾಯಂ ಸಿಂಗ್ ಅವರು ತಮ್ಮ ಮನೆಯ ಕರೆಂಟ್ ಬಿಲ್ ಬಾಕಿಯನ್ನು ಉಳಿಸಿಕೊಂಡಿರುವ ಸಲುವಾಗಿ.

ಹೌದು, ಜನಸಾಮಾನ್ಯರು ಒಂದು ತಿಂಗಳು ಕರೆಂಟ್ ಬಿಲ್ ಕಟ್ಟದಿದ್ದರೆ, ಒಂದು ಮಾತು ಕೇಳದೇ ವಿದ್ಯುತ್ ನಿಗಮದವರು ಬಂದು ಫ್ಯೂಸ್ ಕಟ್ ಮಾಡಿ ಹೋಗುತ್ತಾರೆ. ಆದರೆ, ಉತ್ತರ ಪ್ರದೇಶದಲ್ಲಿ ವಿಐಪಿಗಳಿಗೆ ಇಷ್ಟು ದಿನಗಳ ಕಾಲ ಬೇರೆಯದೇ ಪರಿಸ್ಥಿತಿ ಇತ್ತು. ಪರಿಣಾಮ ಹಲವು ತಿಂಗಳಿನಿಂದ ವಿದ್ಯುತ್ ಬಿಲ್ ಕಟ್ಟದೇ ಮುಲಾಯಂ ಸಿಂಗ್ ಅವರು ಉಳಿಸಿಕೊಂಡಿರುವ ಬಾಕಿ ಮೊತ್ತ ₹ 4 ಲಕ್ಷ ವರೆಗೂ ಹೆಚ್ಚಿದೆ. ಮುಲಾಯಂ ಸಿಂಗ್ ಅವರ ಮನೆಗೆ 5 ಕಿಲೋವ್ಯಾಟ್ ವಿದ್ಯುತ್ ಬಳಕೆಗೆ ಅವಕಾಶ ನೀಡಲಾಗಿತ್ತಾದರೂ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಕೆಯಾಗಿದೆ. ಹೀಗಾಗಿ ಈಗ ಅಧಿಕಾರಿಗಳು 40 ಕಿಲೋ ವ್ಯಾಟ್ ವರೆಗೂ ಅವಕಾಶ ನೀಡಿದ್ದು, ಅದಕ್ಕೆ ತಕ್ಕಂತೆ ಮೀಟರ್ ಗಳನ್ನು ಅಳವಡಿಸಿದ್ದಾರೆ.

ಈಗ ಇಂತಹ ವಿಐಪಿ ಸಂಸ್ಕೃತಿ ಮಟ್ಟಹಾಕುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ನಿಗಮದ ಅಧಿಕಾರಿಗಳು ಮುಂದಿನ ಒಂದು ತಿಂಗಳ ಅವಧಿಯಲ್ಲಿ ಈ ಬಿಲ್ ಪಾವತಿಸುವಂತೆ ಮುಲಾಯಂ ಸಿಂಗ್ ಅವರಿಗೆ ಗಡುವು ನೀಡಿದೆ. ಕೇವಲ ಮುಲಾಯಂ ಸಿಂಗ್ ಅವರು ಮಾತ್ರವಲ್ಲ, ಈ ರೀತಿಯಾಗಿ ಯಾರೆಲ್ಲಾ ವಿಐಪಿ ಎಂದು ವಿವಿಧ ಇಲಾಖೆಗಳಿಂದ ವಿಶೇಷ ಸೌಲಭ್ಯ ಪಡೆಯುತ್ತಿದ್ದಾರೋ ಅವರಿಗೆಲ್ಲವೂ ಇಂತಹ ಎಚ್ಚರಿಕೆಗಳು ರವಾನೆಯಾಗುತ್ತಿವೆ.

ಮುಲಾಯಂ ಸಿಂಗ್ ಅವರ ಬಾಕಿ ಹಾಗೂ ವಿದ್ಯುತ್ ಕಳ್ಳತನ ತಡೆಗಟ್ಟುವ ಬಗ್ಗೆ ಅಧಿಕಾರಿಯೊಬ್ಬರು ಹೇಳಿರುವ ಮಾತುಗಳು ಹೀಗಿವೆ… ‘ಈವರೆಗೂ 40 ಕಿ.ವ್ಯಾಟ್ ಪ್ರಮಾಣದ ವಿದ್ಯುತ್ ಬಳಕೆ ಅಳೆಯುವ ಮೀಟರ್ ಗಳು ಇರಲಿಲ್ಲ. ಹೀಗಾಗಿ ಹಲವರು ಸುಲಭವಾಗಿ ಹೆಚ್ಚಿನ ಪ್ರಮಾಣದ ವಿದ್ಯುತ್ ಬಳಸಿಕೊಳ್ಳುತ್ತಿದ್ದರು. ಈಗ ಈ ಮೀಟರ್ ಗಳನ್ನು ಅಳವಡಿಸಲಾಗಿದೆ. ವಿದ್ಯುತ್ ಕಳ್ಳತನಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಲು ನಾವು ನಿರಂತರ ದಾಳಿಗಳನ್ನು ನಡೆಸುತ್ತಿದ್ದೇವೆ. ಯಾರು ಅನುಮತಿಗೂ ಮೀರಿದ ಪ್ರಮಾಣದಲ್ಲಿ ವಿದ್ಯುತ್ ಬಳಸುತ್ತಿದ್ದಾರೆ, ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾರೆ ಅವರಿಂದ ಎಲ್ಲಾ ಬಾಕಿ ವಸೂಲಿ ಮಾಡಲಾಗುವುದು.’

Leave a Reply