ಕ್ಷಮೆ ಕೇಳಿದ ಕಟ್ಟಪ್ಪ… ರಾಜ್ಯದಲ್ಲಿ ಬಾಹುಬಲಿ2 ಹಾದಿ ಸುಗಮ?

ಡಿಜಿಟಲ್ ಕನ್ನಡ ಟೀಮ್:

ಕಳೆದ ಹಲವು ತಿಂಗಳಿನಿಂದ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗಿದ್ದ ತಮಿಳು ಚಿತ್ರನಟ ಸತ್ಯರಾಜ್ ಅವರ ಕ್ಷಮೆ ಹಾಗೂ ಬಾಹುಬಲಿ ಚಿತ್ರ ಬಿಡುಗಡೆ ಪ್ರಕರಣಕ್ಕೆ ಈಗ ತಾರ್ಕಿಕ ಅಂತ್ಯ ಸಿಗುತ್ತಿದೆ. ಕನ್ನಡ ಪರ ಚಳುವಳಿಗಾರರ ಒತ್ತಾಯಕ್ಕೆ ಮಣಿದಿರುವ ಸತ್ಯರಾಜ್ ಕೊನೆಗೂ ಕನ್ನಡಿಗರಲ್ಲಿ ಕ್ಷಮೆ ಕೋರಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಬಾಹುಬಲಿ 2 ಚಿತ್ರ ರಾಜ್ಯದಲ್ಲಿ ಬಿಡುಗಡೆಯಾಗುವುದರ ಮೇಲೆ ಇದ್ದ ವಿರೋಧ ನಿಲ್ಲುವ ಸಾಧ್ಯತೆ ಇದೆ.

ಕಾವೇರಿ ನದಿ ನೀರಿನ ವಿಚಾರವಾಗಿ ಕೆಲವು ವರ್ಷಗಲ ಹಿಂದೆ ಸತ್ಯರಾಜ್ ಅವರು ಸಾರ್ವಜನಿಕ ವೇದಿಕೆಯಲ್ಲಿ ಕನ್ನಡಿಗರ ವಿರುದ್ಧ ಆಡಿದ್ದ ಅವಹೇಳನಕಾರಿ ಮಾತುಗಳು ಕಳೆದ ವರ್ಷ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಹೀಗಾಗಿ ಸತ್ಯರಾಜ್ ಅಭಿನಯಿಸಿರುವ ಬಾಹುಬಲಿ 2 ಚಿತ್ರವನ್ನು ಬಿಡುಗಡೆ ಮಾಡಬಾರದು ಎಂಬ ಪ್ರತಿಭಟನೆ ರಾಜ್ಯದಲ್ಲಿ ವ್ಯಾಪಕವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ರಾಜಮೌಳಿ ಸಹ ಸಾಮಾಜಿಕ ಜಾಲ ತಾಣಗಳಲ್ಲಿ ಕನ್ನಡದಲ್ಲೇ ಮಾತನಾಡಿ ತಮಗೆ ಸಂಬಂಧಿಸಿದ ವಿವಾದದಿಂದ ಚಿತ್ರಕ್ಕೆ ಅನ್ಯಾಯವಾಗಬಾರದು ಎಂದು ವಿನಂತಿಸಿಕೊಂಡಿದ್ದರು. ಈಗ ಸತ್ಯರಾಜ್ ಕನ್ನಡಿಗರ ಕ್ಷಮೆ ಕೋರುವುದರ ಜತೆಗೆ ಬಾಹುಬಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ.

ಸತ್ಯರಾಜ್ ಅವರ ಕ್ಷಮೆ ವಿಚಾರವಾಗಿ ನಾಳೆ ಫಿಲಂ ಚೇಂಬರ್ ನಲ್ಲಿ ಚರ್ಚೆ ನಡೆಸುತ್ತೇವೆ. ನಂತರ ಬಾಹುಬಲಿ 2 ಚಿತ್ರ ಬಿಡುಗಡೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸತ್ಯರಾಜ್ ಅವರ ಕ್ಷಮೆ ನಮಗೆ ತೃಪ್ತಿ ತರದಿದ್ದರೆ, ನಮ್ಮ ನಿರ್ಧಾರದಿಂದ ನಾವು ಹಿಂದೆ ಸರಿಯುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಂಘದ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.

Leave a Reply