‘ಜಾತ್ಯತೀತ ಶಕ್ತಿಗಳು ಒಂದುಗೂಡಬೇಕು’ ಎನ್ನುವ ಸಿದ್ದರಾಮಯ್ಯನವರ ಮಾತು ಸಾರುತ್ತಿರುವ ಸಂದೇಶವೇನು?

ಡಿಜಿಟಲ್ ಕನ್ನಡ ಟೀಮ್:

ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸೋಲಿಸುವ ಸಲುವಾಗಿ ಇತರರ ಜತೆಗೆ ಕೈ ಜೋಡಿಸುವ ಸಾಧ್ಯತೆ ಇದೆ ಎಂಬ ಚರ್ಚೆ ಉಪಚುನಾವಣೆ ನಂತರ ಹುಟ್ಟುಕೊಂಡಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯನವರು ಜಾತ್ಯತೀತ ಶಕ್ತಿಗಳ ಮೈತ್ರಿ ಕುರಿತಾದ ಮಾತುಗಳನ್ನು ಆಡುತ್ತಿರುವುದು ಮೈತ್ರಿ ಬಗೆಗಿನ ವಾದಕ್ಕೆ ಪುಷ್ಠಿ ನೀಡುತ್ತಿದೆ.

ಉಪಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳಾದ ಗೀತಾ ಮಹದೇವ್ ಪ್ರಸಾದ್ ಹಾಗೂ ಕಳಲೆ ಕೇಶವಮೂರ್ತಿ ಅವರಿಗೆ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸದಸ್ಯರ ಪ್ರಮಾಣ ವಚನ ನೀಡಲಾಯಿತು. ಈ ಕಾರ್ಯಕ್ರಮದ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದಿಷ್ಟು…

‘ಕೋಮುವಾದಿ ಶಕ್ತಿಗಳನ್ನು ಮಣಿಸಲು ಜಾತ್ಯತೀತ ಶಕ್ತಿಗಳ ಮೈತ್ರಿ ಅನಿವಾರ್ಯ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ಜಾತ್ಯತೀತ ಶಕ್ತಿಗಳನ್ನು ಒಂದುಗೂಡಿಸಲು ಮುಂದಾಗಿದ್ದಾರೆ. ಅವರ ಸಂಘಟನೆಯ ಶಕ್ತಿಗೆ ನಾವು ಕೈಜೋಡಿಸುತ್ತೇವೆ. ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಪಕ್ಷ ಗೆಲ್ಲಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ನೀಡಿದ ಸಹಕಾರವೂ ಮುಖ್ಯ ಕಾರಣ, ಹೀಗಾಗಿ ಅವರಿಗೆ ಧನ್ಯವಾದ ಹೇಳಿದ್ದೇನೆ. ಕಾರ್ಯಕ್ರಮವೊಂದರಲ್ಲಿ ನಾನು ಮತ್ತು ಅವರು ಭಾಗವಹಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರು ಬರುತ್ತಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ಅವರನ್ನು ಭೇಟಿ ಮಾಡುತ್ತೇನೆ. ಅವರು ನೀಡಿದ ಸಹಕಾರಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಭಾನುವಾರ ದೆಹಲಿಯಲ್ಲಿ ನೀತಿ ಆಯೋಗ ಸಭೆ ಮುಕ್ತಾಯಗೊಂಡ ಬಳಿಕ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮಂತ್ರಿ ಮಂಡಲ ವಿಸ್ತರಿಸುವ ಬಗ್ಗೆ ಚರ್ಚಿಸುತ್ತೇನೆ. ವರಿಷ್ಠರು ಒಪ್ಪಿಗೆ ಸೂಚನೆ ನೀಡಿದರೆ ಮಂತ್ರಿ ಮಂಡಲದಲ್ಲಿ ಖಾಲಿ ಇರುವ ಎರಡು ಸ್ಥಾನಗಳನ್ನು ಭರ್ತಿ ಮಾಡುತ್ತೇನೆ. ಹೊಸದಾಗಿ ಆಯ್ಕೆಗೊಂಡವರಿಗೆ ಅವಕಾಶ ಮಾಡಿಕೊಡಿ ಎಂದರೆ ವರಿಷ್ಠರ ಆದೇಶದಂತೆ ನಡೆದುಕೊಳ್ಳುತ್ತೇವೆ.’

ಒಟ್ಟಿನಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂಬ ಕೂಗು ಪದೇ ಪದೇ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಪೂರ್ವ ಭಾಗದಲ್ಲಿ ಸಾಧ್ಯವಾಗದಿದ್ದರೂ ಚುನಾವಣಾ ನಂತರದ ಹಂತದಲ್ಲಿ ಮೈತ್ರಿಯ ಸಾಧ್ಯತೆ ಹೆಚ್ಚಾಗಲಿದೆ ಎಂಬುದು ಸ್ಪಷ್ಟವಾಗುತ್ತಿದೆ.

Leave a Reply