ವಿಚ್ಛೇದಿತ ಪತ್ನಿಗೆ ಪತಿಯ ಸಂಬಳದ ಶೇ.25 ರಷ್ಟು ಜೀವನಾಂಶ ಸಿಗಬೇಕು- ದಿಕ್ಸೂಚಿಯಾಗುತ್ತಿದೆ ಸುಪ್ರೀಂ ಕೋರ್ಟ್ ತೀರ್ಪು

ಡಿಜಿಟಲ್ ಕನ್ನಡ ಟೀಮ್:

ದಂಪತಿಗಳ ವಿಚ್ಛೇದನ ಸಂದರ್ಭದಲ್ಲಿ ಪತ್ನಿಗೆ ಪತಿಯಿಂದ ನೀಡಲಾಗುವ ಜೀವನಾಂಶಕ್ಕೆ ಸಂಬಂಧಿಸಿದಂತೆ ಗುರುವಾರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಅದೇನೆಂದರೆ, ವಿಚ್ಛೇದನ ಪಡೆಯುವ ಪತಿಯು ತನ್ನ ಮಾಜಿ ಪತ್ನಿಗೆ ತನ್ನ ಸಂಬಳದ ಶೇ.25 ರಷ್ಟು ಭಾಗವನ್ನು ಜೀವನಾಂಶವಾಗಿ ನೀಡಬೇಕು.

ಪಶ್ಚಿಮ ಬಂಗಾಳದ ಹೂಗ್ಲಿ ಪ್ರದೇಶದ ದಂಪತಿಯ ವಿಚ್ಛೇದನ ಹಾಗೂ ಜೀವನಾಂಶ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ತೀರ್ಪು ಕೊಟ್ಟಿದೆ. ಜೀವನಾಂಶಕ್ಕೆ ಸಂಬಂಧಿಸಿದಂತೆ ಈ ಮಾಜಿ ದಂಪತಿಗಳು 2003 ರಿಂದಲೂ ಕಾನೂನಿ ಹೋರಾಟ ಮಾಡುತ್ತಿದ್ದಾರೆ. ಆರಂಭದಲ್ಲಿ ಜಿಲ್ಲಾ ನ್ಯಾಯಾಲಯವು, ಪ್ರತಿ ತಿಂಗಳು ₹ 4,500 ಜೀವನಾಂಶ ನೀಡುವಂತೆ ಆದೇಶ ಹೊರಡಿಸಿತ್ತು. ನಂತರ ಈ ಕುರಿತು ಹೈಕೋರ್ಟ್ ನಲ್ಲಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆದ ನಂತರ 2016ರಲ್ಲಿ ಪ್ರತಿ ತಿಂಗಳು ₹ 16 ಸಾವಿರ ನೀಡಬೇಕು ಎಂದು ತೀರ್ಪು ನೀಡಿತು. ಆದರೆ, 2016 ರಲ್ಲಿ ಪತಿಯ ತಿಂಗಳ ಸಂಬಳ ₹ 63,842 ರಿಂದ ₹ 95,527 ಸಾವಿರಕ್ಕೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಹೈ ಕೋರ್ಟ್ ಜೀವನಾಂಶವನ್ನು ₹ 23 ಸಾವಿರಕ್ಕೆ ಏರಿಸಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಆ ಪತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಈ ಅರ್ಜಿ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ವಿಚ್ಛೇದನ ಪಡೆದ ಪತ್ನಿಯು ಸಮಾಜದಲ್ಲಿ ಬೇರೆಯವರ ಮೇಲೆ ಅವಲಂಬಿತವಾಗಿ ಬದುಕಲು ತನ್ನ ಮಾಜಿ ಪತಿಯ ವೇತನದಲ್ಲಿ ಶೇ.25 ರಷ್ಟು ಹಣವನ್ನು ಜೀವನಾಂಶ ಪಡೆಯಬಹುದು. ಇದು ಎಲ್ಲ ರೀತಿಯಲ್ಲೂ ಸೂಕ್ತ ಪರಿಹಾರ ಮೊತ್ತ. ಹೀಗಾಗಿ ಕೊಲ್ಕತಾ ಹೈ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಯಾವುದೇ ತಪ್ಪು ಇಲ್ಲ ಎಂದು ಅಭಿಪ್ರಾಯಪಟ್ಟಿದೆ. ಆದರೆ ಈ ವ್ಯಕ್ತಿ ಮತ್ತೊಂದು ಮದುವೆಯಾಗಿದ್ದು, ಹೊಸ ಕುಟುಂಬದ ಜವಾಬ್ದಾರಿ ಹೊತ್ತಿದ್ದಾನೆ. ಹೀಗಾಗಿ ಹೈಕೋರ್ಟ್ ನೀಡಿದ್ದ ಜೀವನಾಂಶ ಪ್ರಮಾಣದಲ್ಲಿ ₹ 3 ಸಾವಿರ ಕಡಿಮೆ ಮಾಡಿ, ಆ ವ್ಯಕ್ತಿ ತನ್ನ ಮಾಜಿ ಪತ್ನಿಗೆ ಪ್ರತಿ ತಿಂಗಳು ₹ 20 ಸಾವಿರ ಜೀವನಾಂಶ ನೀಡಬೇಕು ಎಂದು ಆದೇಶ ಹೊರಡಿಸಿದೆ.

ಈ ತೀರ್ಪಿನಲ್ಲಿ ಜೀವನಾಂಶದ ಕುರಿತಂತೆ ಪೀಠದ ಅಭಿಪ್ರಾಯ ಹೀಗಿತ್ತು… ‘ವಿಚ್ಛೇದಿತ ಪತ್ನಿಗೆ ತನ್ನ ಮಾಜಿ ಪತಿಯ ವೇತನದಲ್ಲಿ ಶೇ.25 ರಷ್ಟು ಭಾಗ ಜೀವನಾಂಶ ಸಿಗುವುದು ಸೂಕ್ತ ಪರಿಹಾರ. ಇನ್ನು ಒಂದೇ ಬಾರಿಗೆ ಪರಿಹಾರ ನೀಡುವ ವಿಷಯದಲ್ಲಿ ಆ ದಂಪತಿಗಳ ಪರಿಸ್ಥಿತಿ, ಸಾಮರ್ಥ್ಯ ಹಾಗೂ ಆಯಾ ಪ್ರಕರಣದ ಪರಿಸ್ಥಿತಿಗೆ ಅನುಗುಣವಾಗಿರಬೇಕು. ಈ ವಿಷಯದಲ್ಲಿ ವಿವಿಧ ಅಂಶಗಳ ಪರಿಗಣನೆ ಬಹಳ ಮುಖ್ಯವಾಗಲಿದೆ ಎಂಬುದನ್ನು ನ್ಯಾಯಾಲಯ ಮತ್ತೆ ಸಮರ್ಥನೆ ಮಾಡಿಕೊಳ್ಳುತ್ತಿದೆ.’

Leave a Reply