ಆಕಾಶಕಾಯ ತಂದ ಆತಂಕ- ಸದ್ದಿಲ್ಲದೆ ಭೂಮಿಯನ್ನು ಇಣುಕಿ ಸರಿದುಹೋದ ಕ್ಷುದ್ರಗ್ರಹ

ಈ ವಾರ ಪೂರ್ತಿ ಕರ್ನಾಟಕದಲ್ಲಿ ಬಿಗುವಿನ ವಾತಾವರಣವೇ. ಮೈಸೂರು ಬಳಿಯ ಶಾದನಹಳ್ಳಿಯ ಹತ್ತಿರದಲ್ಲಿ ಬಿಸುಟ ತ್ಯಾಜ್ಯದಲ್ಲಿ ಭೂಮಿ ಬಿಸಿಯಾಗಿ 110 ಡಿಗ್ರಿ ಸೆಂ. ಉಷ್ಣತೆ ಸೂಸಿ ದೊಡ್ಡ ಸುದ್ದಿಯಾಯಿತು. ಬಹಿರ್ದೆಶೆಗೆ ಹೋದ ಹರ್ಷಲ್ ನನ್ನು ಸುಟ್ಟಿತು, ಅವನ ಬದುಕನ್ನೇ ಕೊನೆಗೊಳಿಸಿತು. ಈ ಸಂಗತಿಯೇ ಮಾಧ್ಯಮಗಳಲ್ಲಿ ಹಲವು ಬಗೆಯ ಸಂವಾದಕ್ಕೆ ಎಡೆಮಾಡಿಕೊಟ್ಟಿತು. ತ್ಯಾಜ್ಯ ಯಾವ ಬಗೆಯದು? ಮೀಥೇನ್ ಉತ್ಸರ್ಜಿಸುವ ಗಟ್ಟಿ ಕಸವೇ ಇಲ್ಲಾ ರಾಸಾಯನಿಕಗಳನ್ನು ಸುತ್ತಣ ಫ್ಯಾಕ್ಟರಿಗಳು ಸುರಿದ ಕಾರಣವೆ? ಪೊಲೀಸ್ ಬಂತು, ಜನ ಜಮಾಯಿಸಿದರು, ಭೂವಿಜ್ಞಾನಿಗಳು ಬಂದರು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಬಂದರು. ಯೂನಿವರ್ಸಿಟಿಯ ಪ್ರೊಫೆಸರುಗಳು ಬಂದರು. ಸ್ಯಾಂಪಲ್ ಸಂಗ್ರಹಿಸಿದರು, ರಿಪೋರ್ಟ್ ಬರಬೇಕು ಎಂದರು. ನಿರ್ದಿಷ್ಟವಾಗಿ ಇದು ರಾಸಾಯನಿಕ ತ್ಯಾಜ್ಯ ಎಂಬುದಂತೂ ಪತ್ತೆಯಾಯಿತು. ಆದರೆ ಇದರ ಹಿಂದಿನ ನಿಜವಾದ ಖೂಳರು ಇವರೇ ಎಂದು ಬೊಟ್ಟು ಮಾಡಿ ತೋರಿಸಲಾಗಿಲ್ಲ. ಯಾವ ರಾಸಾಯನಿಕ ಎಂಬುದೂ ನಿಗೂಢ. ಬೂದಿ ಕೆದಕಿದರೆ ಅದು ಸುಡುತ್ತಿತ್ತು. ಹಲವು ಚರ್ಚೆಗಳ ನಂತರ ತಿರುಗಿಬಿದ್ದದ್ದು ಮಾಲಿನ್ಯ ನಿಯಂತ್ರಣ ಮಂಡಳಿಯ ಹೊಣೆಗೇಡಿತನಕ್ಕೆ.

ಇನ್ನೇನು ಈ `ಕಾವು’ ಕೊನೆಯಪಕ್ಷ ಚರ್ಚೆಗಳಲ್ಲಾದರೂ ನಂದಿಹೋಗಬಹುದು ಎನ್ನುವ ಹೊತ್ತಿನಲ್ಲೇ ಮಂಗಳವಾರ ಬೆಳಗ್ಗೆ ಬೆಂಗಳೂರು ಲಘು ಭೂಕಂಪನದಿಂದ ನಡುಗಿಹೋಯಿತು. ಮೂರೇ ಸೆಕೆಂಡು. ಆದರೆ ಅದು ತಂದ ಜೀವಭಯ ಊಹೆಗೂ ಮೀರಿದ್ದು. ಅಪಾರ್ಟ್‍ಮೆಂಟಿನಲ್ಲಿ ಇರುವವರಂತೂ ಜೀವವನ್ನು ಕೈಯಲ್ಲೇ ಹಿಡಿದುಕೊಂಡಿದ್ದರು. ಬೆಂಗಳೂರಿನಲ್ಲಿ ಅನಿಯಂತ್ರಿತವಾಗಿ ಬೋರ್ ಹೋಲ್ ಕೊರೆದಿರುವುದು, ಅಂತರ್ಜಲವನ್ನು ಬೇಕಾಬಿಟ್ಟಿ ಬಳಸಿರುವುದು, ಈ ಲಘು ಭೂಕಂಪನಕ್ಕೆ ಕಾರಣ ಎಂದು ಸಾರ್ವಜನಿಕರೇ ಊಹಿಸಿಬಿಟ್ಟರು. ಪವನ ವಿಜ್ಞಾನ ಇಲಾಖೆ (meteorological department) ಬುಲೆಟಿನ್ ಬಿಡುಗಡೆ ಮಾಡಲಿಲ್ಲ, ಭೂಕಂಪನದ ಕೇಂದ್ರಬಿಂದು ರಾಮನಗರದ ಬಳಿ ಇದೆ ಎಂದು ಊಹೆಗಳು ಹರಿದಾಡಿದವು. ಇಂಥ ಲಘು ಭೂಕಂಪನಗಳು ಹೇಗಾಗುತ್ತವೆ ಎನ್ನುವುದನ್ನು ಭೂವಿಜ್ಞಾನಿಗಳು ಬೇರೆ ಬೇರೆ ಮಾಧ್ಯಮಗಳಲ್ಲಿ ವಿವರಿಸಿದರೂ, ಜನಕ್ಕೆ ಇನ್ನೂ ಗುಮಾನಿ ಇತ್ತು. ಕರ್ನಾಟಕದಲ್ಲಿರುವ ಭೂಕಂಪನ ಮಾಪಕಗಳಲ್ಲಿ ಇದು ದಾಖಲೆಯಾಗಿಲ್ಲ, ಹೆದರುವ ಅವಶ್ಯಕತೆ ಇಲ್ಲ ಎಂದು ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆ ಪದೇ ಪದೇ ಹೇಳಿದರೂ ಮಾಧ್ಯಮಗಳು ನಂಬಲಿಲ್ಲ.

ಈ ಸ್ಥಳೀಯ ಸಂಗತಿಗಳನ್ನು ಬದಿಗಿಟ್ಟು ಜಗತ್ತಿನಲ್ಲಿ ಈ ದಿನ ಅಂದರೆ ಏಪ್ರಿಲ್ 22 ಏನಾಗುತ್ತಿದೆ ಎಂದು ನೋಡೋಣ. ಒಂದೆಡೆ ಸಂಭ್ರಮ ಏಕೆಂದರೆ ಇಂದು `ವಿಶ್ವ ಭೂದಿನ’. 1970ರಿಂದಲೂ ಜಗತ್ತಿನ ಹಲವು ಲಕ್ಷ ಮಂದಿ ಭೂದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ವಿಶ್ವಸಂಸ್ಥೆಯು ಇದಕ್ಕೆ ಬೆಂಬಲ ನೀಡುತ್ತಿದೆ. ಭೂಮಿಯ ಉಳಿವಿನ ಬಗ್ಗೆ ಕಾಳಜಿ ಇರುವ ಪ್ರಜ್ಞಾವಂತರೆಲ್ಲ ಆಯಾ ದೇಶಗಳಲ್ಲಿ ತಮಗೆ ತೋಚಿದ ರೀತಿಯಲ್ಲಿ ಭೂದಿನವನ್ನು ಆಚರಿಸಬಹುದು. ಪರಿಸರ ಸಂರಕ್ಷಣೆ, ಜೀವಿಗಳ ಉಳಿವು, ಜಾಗತಿಕ ಉಷ್ಣ ಹೆಚ್ಚಳ, ವನ್ಯಜೀವಿಗಳ ರಕ್ಷಣೆ, ನೀರಿನ ಉಳಿತಾಯ ಹೀಗೆ ಹತ್ತು, ಹಲವು ಅಂಶಗಳನ್ನು ಜಗತ್ತಿಗೆ ಸಾರುವ ದಿನ ಇದು. ಇವುಗಳನ್ನೆಲ್ಲ ಥೀಮ್ ಆಗಿ ಆರಿಸಿಕೊಂಡು ಪ್ರತಿವರ್ಷವೂ ಒಂದೊಂದು ಘೋಷವಾಕ್ಯ ಮೊಳಗುತ್ತದೆ. ಈ ಸಲ `ಪರಿಸರ ಮತ್ತು ಹವಾಗುಣ ಸಾಕ್ಷರತೆ’ಯನ್ನು ಘೋಷವಾಕ್ಯವಾಗಿ ಅರಿಸಿಕೊಂಡಿದೆ. ಜನಸಾಮಾನ್ಯರ ಅರಿವಿಗೆ ಭೂಗ್ರಹದ ಸದ್ಯದ ದುರ್ಗತಿ ಏನು ಎಂದು ತಿಳಿಸಿಕೊಡುವ ಕಾರ್ಯಕ್ರಮಕ್ಕೆ ಈ ಬಾರಿ ಆದ್ಯತೆ. ಸಂಭ್ರಮ ಏಕೆಂದರೆ ಈ ಮೂಲಕ ವಿಶ್ವಧ್ವನಿ ಮೊಳಗುತ್ತದೆ. ವಿಷಾದ ಏಕೆಂದರೆ ಭೂಮಿಗೆ ದುರ್ಗತಿ ತಂದಿರುವುದು ಮನುಕುಲ ಎಂಬ ಕಾರಣಕ್ಕಾಗಿ.

ಇದೇ ಸಮಯದಲ್ಲಿ ನಮ್ಮ ಭೂಮಿ ಇದೇ ಬುಧವಾರದಂದು(19-4-2017) ಅಪಾಯದಿಂದ ಪಾರಾದ ಸಂಗತಿ ನಡೆದುಹೋಯಿತು. ನಿಟ್ಟುಸಿರಿಟ್ಟವರು ಆಕಾಶಕಾಯಗಳನ್ನು ಸದಾ ಹದ್ದುಗಣ್ಣಿನಿಂದ ನೋಡುವ ತಜ್ಞರು. ಲಕ್ಷ ಲಕ್ಷ ಉಲ್ಕೆ, ಕ್ಷುದ್ರಕಾಯಗಳು ವ್ಯೋಮದಲ್ಲಿ ಅಂಡಲೆಯುತ್ತಿರುತ್ತವೆ. ಇವುಗಳಲ್ಲಿ ಕೆಲವು ಗುರುತ್ವದಿಂದ ವಿಚಲಿತವಾಗಿ ಯಾವುದೋ ಸನಿಹದ ದೊಡ್ಡ ಕಾಯಕ್ಕೆ ಬಡಿಯಬಹುದು. ಅಮೆರಿಕದ ನಾಸಾ ಸಂಸ್ಥೆ ಇಂಥ ಆತಂಕಕಾರಿ ಕ್ಷುದ್ರಗ್ರಹಗಳನ್ನು ಗುರುತಿಸಲು ಭೂಸಮೀಪ ಹಾಯುವ ಕಾಯಗಳು (Near earth objects) ಎಂಬ ಅವಲೋಕನ ವಿಭಾಗವನ್ನೇ ಸೃಷ್ಟಿಸಿದೆ. ಯಾವ ಕ್ಷುದ್ರಗ್ರಹ ಭೂಮಿಗೆ ಯಾವಾಗ ಎಷ್ಟು ದೂರದಲ್ಲಿ ಹಾದುಹೋಗಬಹುದು ಎಂಬ ಗಣನೆ ಮಾಡುತ್ತಾರೆ. ಈ ಆತಂಕವಾದಿಗಳ ಪಟ್ಟಿಯನ್ನೇ ತಯಾರಿಸುತ್ತಾರೆ. 2014ರಲ್ಲಿ ಪತ್ತೆಹಚ್ಚಿದ ಒಂದು ಕ್ಷುದ್ರಗ್ರಹ `2014 JO25’ ಈ 19ರಂದು ಭೂಸಮೀಪ ಹಾದುಹೋಗುತ್ತದೆ ಎಂದು ಲೆಕ್ಕ ಹಾಕಿದ್ದರು. ನಿರೀಕ್ಷಿಸಿದಂತೆ ಒಂದು ಕಿಲೋ ಮೀಟರು ದಪ್ಪದ ಕಾಯ ಯಾವ ಅವಘಡವನ್ನೂ ಭೂಮಿಗೆ ಮಾಡದೆ ಯೂನಿವರ್ಸಲ್ ಟೈಂ 12:24ಕ್ಕೆ ತನ್ನ ಕಕ್ಷೆಯಲ್ಲಿ ಭೂಮಿಯನ್ನು ಇಣುಕಿ ಮುಂದಕ್ಕೆ ಸಾಗಿತು. ದೂರದರ್ಶಕದಲ್ಲೂ ಇದನ್ನು ನೋಡಬಹುದಾಗಿತ್ತು ಎನ್ನುತ್ತಾರೆ ವಿಜ್ಞಾನಿಗಳು. ಎಷ್ಟು ದೂರದಲ್ಲಿ? ಭೂಮಿಗೂ ಚಂದ್ರನಿಗೂ ಇರುವ ದೂರದ 4.57 ಪಟ್ಟು ಅಧಿಕ ದೂರದಲ್ಲಿ. ಭೂಮಿಯ ಮಟ್ಟಿಗೆ ಇದು `ಸೇಫ್ ಡಿಸ್ಟೆನ್ಸ್’. ಅದರ ಮುಂದಿನ ಭೇಟಿ 500 ವರ್ಷಗಳ ನಂತರ.

ಆದರೆ 2027ರ ಹೊತ್ತಿಗೆ `1999 AN10’ ಎಂಬ ಮತ್ತೊಂದು ಕ್ಷುದ್ರಗ್ರಹ ಭೂಮಿಗೆ 3,90,000 ಕಿಲೋ ಮೀಟರ್ ದೂರದಲ್ಲಿ ಅಂದರೆ ಸರಿಸುಮಾರು ಭೂಮಿ-ಚಂದ್ರನ ದೂರದಲ್ಲಿ ಹಾದುಹೋಗುವ ಸಂಭವವಿದೆ ಎಂದು ಹೇಳುವ ಅದೇ ವಿಜ್ಞಾನಿಗಳು ಈ ಸಂಭವ ಹತ್ತು ದಶಲಕ್ಷದಲ್ಲಿ ಒಂದು ಮಾತ್ರ ಎನ್ನುತ್ತಾರೆ. ಅಮೆರಿಕದ ವಾಯುಪಡೆ ಮತ್ತು ಎಂ.ಐ.ಟಿ.ಯ ಲಿಂಕನ್ ಪ್ರಯೋಗಾಲಯ ಇದನ್ನು ಪತ್ತೆಮಾಡಿದೆ. ಸದ್ಯದಲ್ಲಿ 2,423 ಭೂ ಸನಿಹದ ಕ್ಷುದ್ರಗ್ರಹಗಳು ಮತ್ತು 290 ಧೂಮಕೇತುಗಳ ಪಟ್ಟಿ ತಯಾರಿಸಿದೆ. ಈ ಕ್ಷುದ್ರಗ್ರಹ 1940ರ ಆಗಸ್ಟ್ ತಿಂಗಳಲ್ಲಿ ಭೂಮಿಗೆ 9,35,000 ಕಿಲೋ ಮೀಟರ್ ದೂರದಲ್ಲಿ ಹಾದುಹೋಗಿತ್ತಂತೆ. ಭೂಸಮೀಪ ಎಂದರೆ ಅವು ತೀರ ಚಂದ್ರನ ಸಮೀಪಕ್ಕೂ ಬರಬಾರದು. ಹಾಗಾದರೆ ಭೂಮಿಗೆ ಬಡಿಯುವ ಸಾಧ್ಯತೆ ಇದ್ದೇಇದೆ. ಇಷ್ಟೆಲ್ಲ ಲೆಕ್ಕಹಾಕುವ ವಿಜ್ಞಾನಿಗಳು ಕ್ಷುದ್ರಗ್ರಹಗಳು ಆಗಾಗ ನಮ್ಮನ್ನು ಹೆದರಿಸುವುದಕ್ಕೆ ಒಂದು ಮಾರ್ಗೋಪಾಯ ಕಂಡುಕೊಂಡಿಲ್ಲವೆ? ಇಂಥ ಅಪಾಯವಂತೂ ಎಲ್ಲೂ ದಾಖಲಾಗಿಲ್ಲ. ಈಗ ಇರುವ ತಂತ್ರಜ್ಞಾನದಿಂದ ಅಪಾಯಕಾರಿ ಕ್ಷುದ್ರಗ್ರಹದ ಪಥವನ್ನೇ ಬದಲಿಸಲೂ ಸಾಧ್ಯ ಅಥವಾ ಛಿದ್ರಗೊಳಿಸಲೂ ಸಾಧ್ಯ. ಇಷ್ಟಕ್ಕಂತೂ ವಿಜ್ಞಾನಿಗಳು ಸಜ್ಜಾಗಿದ್ದಾರೆ.

Leave a Reply