‘ರೈಡ್ ವೇಳೆ ಸಿಕ್ಕ ಹಣ ನಂದಲ್ಲ, ಪೊಲೀಸರದು…’ ಪೊಲೀಸ್ ಇಲಾಖೆ- ರಾಜಕೀಯ ನಾಯಕರ ಮೇಲೆ ನಾಗನ ಆರೋಪಗಳೇನು?

ಡಿಜಿಟಲ್ ಕನ್ನಡ ಟೀಮ್:

‘ನನ್ನ ಮನೆಯಲ್ಲಿ ಸಿಕ್ಕಿರುವ ಕೋಟ್ಯಾಂತರ ಮೌಲ್ಯದ ಹಳೇಯ ₹ 500 ಮತ್ತು 1000 ಮುಖಬೆಲೆಯ ನೋಟುಗಳು ನನ್ನದಲ್ಲ. ಈ ಹಣ ಮೂವರು ಐಪಿಎಸ್ ಅಧಿಕಾರಿಗಳಿಗೆ ಸೇರಿದ್ದು. ಕಪ್ಪು ಹಣವನ್ನು ಬದಲಾಯಿಸಿಕೊಡುವಂತೆ ನನಗೆ ಕೇಳಿಕೊಂಡಿದ್ದೇ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ಮಂಜುನಾಥ್….’ ಇದು ಸದ್ಯ ಅಜ್ಞಾತ ಸ್ಥಳದಲ್ಲಿರುವ ಬಾಂಬ್ ನಾಗ ವಿಡಿಯೋ ಮೂಲಕ ಸಿಡಿಸಿರುವ ಆರೋಪ.

ಇದೇ ತಿಂಗಳು ಏ.7ರಂದು ಪೊಲೀಸ್ ಅಧಿಕಾರಿಗಳು ನಾಗರಾಜ್ ಅವರ ಮನೆ ಮೇಲೆ ದಾಳಿ ನಡೆಸಿದಾಗ ಅಮಾನ್ಯಗೊಂಡಿರುವ ಹಳೇ ನೋಟಿನ ಕಂತೆಗಳ ರಾಶಿಯೇ ಸಿಕ್ಕಿತ್ತು. ಅಂದು ಪೊಲೀಸರ ಕೈಗೆ ಸಿಗದ ನಾಗ, ಇಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಜತೆಗೆ ಕಪ್ಪು ಹಣ ದಂದೆಯಲ್ಲಿ ನೇರವಾಗಿ ಪೊಲೀಸ್ ಇಲಾಖೆ ಮೇಲೆ ಆರೋಪ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಾಗ ಅವರು ಮಾಡಿರುವ ಆರೋಪಗಳ ಪ್ರಮುಖ ಅಂಶಗಳು ಹೀಗಿವೆ…

‘ನನ್ನ ಮನೆಯಲ್ಲಿ ಸಿಕ್ಕಿರುವ ಹಳೇ ನೋಟುಗಳೆಲ್ಲಾ ಪೊಲೀಸಿನವರದ್ದೇ. ಅದು ನನ್ನ ಹಣವಲ್ಲ. ಅವರು ದೇಶಕ್ಕೆ ಒಳ್ಳೇದು ಮಾಡಲ್ಲ. ನನ್ನ ಎನ್ ಕೌಂಟರ್ ಮಾಡಲು ₹ 10 ಕೋಟಿ ನಿಗದಿ ಮಾಡಿದ್ದರು. ನನ್ನ ಮನೆ ಮೇಲೆ ದಾಳಿ ಮಾಡಿದಾಗಲೇ ಎನ್ ಕೌಂಟರ್ ಮಾಡಲು ಸ್ಕೆಚ್ ಹಾಕಲಾಗಿತ್ತು. ಕ್ರೈಂಗಳು ನಡೆಯುತ್ತಿರುವುದೇ ಪೊಲೀಸಿನವರಿಂದ. ಪೊಲೀಸರು ಹಣಕ್ಕಾಗಿ ಏನುಬೇಕಾದರು ಮಾಡುತ್ತಾರೆ. ನನ್ನ ಮನೆಯಲ್ಲಿ ಸಿಕ್ಕಿರುವ ಹಣ 3 ಐಪಿಎಸ್ ಅಧಿಕಾರಿಗಳಿಗೆ ಸೇರಿದ್ದು, ಇದರಲ್ಲಿ ಎಸ್ಐಗಳಿಂದ ಐಪಿಎಸ್ ಅಧಿಕಾರಿಗಳ ಕೈವಾಡ ಇದೆ. ಪೊಲೀಸ್ ಇಲಾಖೆಯಿಂದಲೇ ಸುಮಾರು 5 ಸಾವಿರ ಕೋಟಿಯಷ್ಟು ಕಪ್ಪು ಹಣ ಬಿಳಿ ಮಾಡುವ ಪ್ರಯತ್ನ ನಡೆಯುತ್ತಿದೆ.

ಕಪ್ಪು ಹಣವನ್ನು ಬದಲಾಯಿಸಿಕೊಡುವಂತೆ ನನ್ನ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ಮಂಜುನಾಥ್ ಕೇಳಿಕೊಂಡಿದ್ದರು. ಅವರು ನಮ್ಮ ಮನೆಗೆ ಬರುವಾಗ ಸಿಸಿಟಿವಿ ಸ್ವಿಚ್ ಆಫ್ ಮಾಡುವಂತೆ ಸೂಚಿಸಿದ್ದರು. ಈ ದಂಧೆಯಲ್ಲಿ ಐವರು ಬ್ರೋಕರ್ ಗಳು ಭಾಗಿಯಾಗಿದ್ದಾರೆ.

ನಾನು ಏನೂ ತಪ್ಪು ಮಾಡಿಲ್ಲ. ಗಾಂಧಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಬಾರದು ಎಂದು ಸಂಚು ರೂಪಿಸಿ ಈ ರೀತಿ ಪಿತೂರಿ ಮಾಡುತ್ತಿದ್ದಾರೆ. ಪಿ.ಸಿ ಮೋಹನ್, ದಿನೇಶ್ ಗುಂಡುರಾವ್ ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಎಲ್ಲಿಯೂ ತಲೆಮರೆಸಿಕೊಂಡು ಹೋಗಿಲ್ಲ. ಬೆಂಗಳೂರಿನಲ್ಲಿಯೇ ಇದ್ದೇನೆ, ಎಲ್ಲವನ್ನು ನೋಡುತ್ತಿದ್ದೇನೆ’

ನಾಗ ಅವರ ಈ ಗಂಭೀರ ಆರೋಪಗಳು ನೇರವಾಗಿ ಪೊಲೀಸ್ ಇಲಾಖೆ ಹಾಗೂ ಪ್ರಭಾವಿ ವ್ಯಕ್ತಿಗಳ ಮೇಲೆ ಬಂದಿರುವುದರಿಂದ ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಒಟ್ಟಿನಲ್ಲಿ ಈ ಪ್ರಕರಣ ಸರ್ಕಾರಕ್ಕೆ ಹೊಸ ಸಮಸ್ಯೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಕುತೂಹಲ ಮೂಡಿದೆ.

Leave a Reply