ಮೊಬೈಲ್ ಸಂಪರ್ಕವಿಲ್ಲದ ಗ್ರಾಮದಲ್ಲಿ ಈಗ ನಗದು ರಹಿತ ವ್ಯವಹಾರ! ಇದು ಸಾಧ್ಯವಾಗಿದ್ದು ಹೇಗೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ನಗದು ರಹಿತ ವ್ಯವಹಾರ ಸದ್ಯ ಕೇಂದ್ರ ಸರ್ಕಾರದ ಪ್ರಮುಖ ಗುರಿಗಳಲ್ಲಿ ಒಂದು. ಸರ್ಕಾರದ ಈ ಯೋಜನೆಗೆ ಹಲವೆಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಮತ್ತೆ ಕೆಲವೆಡೆ ಇನ್ನಷ್ಟು ಪರಿಣಾಮಕಾರಿಯಾಗಿ ಗುರಿ ಸಾಧನೆಯಾಗುವ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಛತ್ತೀಸಗಡದ ದಂತೇವಾಡ ಜಿಲ್ಲೆಯ ಪಲ್ನಾರ್ ಎಂಬ ಗ್ರಾಮ ಈ ಯೋಜನೆ ಅಳವಡಿಸಿಕೊಳ್ಳುವ ವಿಚಾರದಲ್ಲಿ ದೇಶದ ಇತರೆ ಪ್ರದೇಶಗಳಿಗೆ ಮಾದರಿಯಾಗಿದೆ. ಕಾರಣ, ಈ ಗ್ರಾಮದಲ್ಲಿ ಮೊಬೈಲ್ ಸಂಪರ್ಕ ಇಲ್ಲದಿದ್ದರೂ ಇಲ್ಲಿನ ಜನರು ಪರಿಣಾಮಕಾರಿಯಾಗಿ ನಗದುರಹಿತ ವ್ಯವಹಾರವನ್ನು ಅಳವಡಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಕಳೆದ ವರ್ಷದಂತೆ ಈ ವರ್ಷವೂ ಕೇಂದ್ರ ಸರ್ಕಾರ ತನ್ನ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡ ಜಿಲ್ಲೆಗಳಿಗೆ ಪ್ರಶಸ್ತಿ ವಿತರಿಸಿದ್ದು, ನಗದು ರಹಿತ ವ್ಯವಹಾರವನ್ನು ಯಶಸ್ವಿಯಾಗಿ ಅಳವಡಿಸಿದ್ದಕ್ಕಾಗಿ ದಂತೇವಾಡ ಜಿಲ್ಲೆಗೆ ಪ್ರಶಸ್ತಿ ಸೇರಿತು. ಪ್ರಧಾನಿ ನರೇಂದ್ರ ಮೋದಿ ಅವರು ನೋಟು ಅಮಾನ್ಯ ನಿರ್ಧಾರ ಪ್ರಕಟ ಮಾಡುತ್ತಿದ್ದಂತೆ ದಂತೇವಾಡ ಜಿಲ್ಲಾಧಿಕಾರಿ ಸೌರಬ್ ಕುಮಾರ್ ಅವರು ತಮ್ಮ ವ್ಯಾಪ್ತಿಯ ಪ್ರದೇಶವನ್ನು ನಗದುರಹಿತ ಮಾಡಬೇಕು ಎಂದು ಪಣತೊಟ್ಟರು. ಹೀಗಾಗಿ ಈ ಒಂದು ಅಭಿಯಾನ ಆರಂಭಿಸಲು ಬುಡಕಟ್ಟು ಜನರ ಪಲ್ನಾರ್ ಗ್ರಾಮವನ್ನು ಆಯ್ಕೆ ಮಾಡಿಕೊಂಡರು. ನಂತರ ಈ ಯೋಜನೆಯನ್ನು ಜಾರಿಗೊಳಿಸಿ ಡಿಸೆಂಬರ್ 31ರವರೆಗೆ ಈ ಗ್ರಾಮದಲ್ಲಿ ಸುಮಾರು 1 ಸಾವಿರ ನಗದು ರಹಿತ ವಹಿವಾಟು ನಡೆದಿದ್ದು, ಇದರ ಮೊತ್ತ ₹ 1,22,529 ದಷ್ಟಿತ್ತು.

ಈ ಗ್ರಾಮ ನಗದು ರಹಿತ ಆರ್ಥಿಕತೆಗೆ ಹೊಂದುಕೊಂಡಿದ್ದು ಹೇಗೆ ಎಂಬುದರ ಬಗ್ಗೆ ಸೌರಬ್ ಕುಮಾರ್ ವಿವರಿಸುವುದು ಹೀಗೆ…

‘ಇದೊಂದು ಬುಡಕಟ್ಟು ಸಂಸ್ಕೃತಿಯ ಗ್ರಾಮವಾಗಿದ್ದರೂ, ನಗದು ರಹಿತ ಆರ್ಥಿಕತೆಗೆ ಹೊಂದುಕೊಂಡಿರುವುದು ನಿಜಕ್ಕೂ ಇತರರಿಗೆ ಮಾದರಿ. ಈ ಗ್ರಾಮವನ್ನು ನೋಡಿ ಇತರೆ ಪ್ರದೇಶದ ಜನರು ಈ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಆಗ ನಮ್ಮ ಮುಂದಿನ ಪೀಳಿಗೆ ಶೇ.100 ರಷ್ಟು ನಗದು ರಹಿತ ಆರ್ಥಿಕತೆ ಸ್ಥಾಪನೆ ಸಾಧ್ಯವಾಗಲಿದೆ. ಆರಂಭದಲ್ಲಿ ನಾವು ಈ ಹಳ್ಳಿಯ ಜನರಿಗೆ ಇದರ ಬಗ್ಗೆ ತರಬೇತಿ ನೀಡಬೇಕಾಯಿತು. ಕೇವಲ ಗ್ರಾಹಕರಿಗೆ ಮಾತ್ರವಲ್ಲದೇ, ವ್ಯಾಪಾರಿಗಳಿಗೂ ಈ ಒಂದು ವ್ಯವಸ್ಥೆ ಅರ್ಥವಾಗುವಂತೆ ಮಾಡಬೇಕಿತ್ತು. ನಮ್ಮ ಅದೃಷ್ಟಕ್ಕೆ ಅದಾಗಲೇ 250 ಮಂದಿ ಡೆಬಿಟ್ ಕಾರ್ಡ್ ಅನ್ನು ಹೊಂದಿದ್ದರು. ಈ ಗ್ರಾಮದಲ್ಲಿ ನಗದು ರಹಿತ ವ್ಯವಹಾರ ನಡೆಸಲು ಮೂಲಭೂತ ಸೌಕರ್ಯವನ್ನು ಕಲ್ಪಿಸಿದೆವು. ಅದುವರೆಗೂ ಆ ಗ್ರಾಮ ಮೊಬೈಲ್ ಸಂಪರ್ಕವನ್ನೇ ಹೊಂದಿರಲಿಲ್ಲ. ಹೀಗಾಗಿ ಬಿಎಸ್ಎನ್ಎಲ್ ಗೆ ಮನವಿ ಮಾಡಿ ಅಲ್ಲಿ ವೈಫೈ ವ್ಯವಸ್ಥೆ ಅಳವಡಿಸಲು ಮನವಿ ಮಾಡಲಾಯಿತು. ಬಿಎಸ್ಎನ್ಎಲ್ ಕಂಪನಿ ತಮ್ಮ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಈ ಪ್ರದೇಶದಲ್ಲಿ 10 ಎಂಬಿಪಿಎಸ್ ಆಪ್ಟಿಕ್ ಫೈಬರ್ ಸಂಪರ್ಕವನ್ನು ಉಚಿತವಾಗಿ ಕಲ್ಪಿಸಿತು. ಈಗಲೂ ಈ ಪ್ರದೇಶದಲ್ಲಿ ಸಾಮಾನ್ಯ ಫೋನ್ ಕರೆಗಳು ಸಾಧ್ಯವಾಗುವುದಿಲ್ಲ. ಆದರೆ, ಇಂಟರ್ನೆಟ್ ಕರೆಗಳನ್ನು ಸುಲಭವಾಗಿ ಮಾಡಬಹುದು. ಹೀಗೆ ಮೂಲಭೂತಸೌಕರ್ಯ ಕಲ್ಪಿಸಿದ ನಂತರ ನಾವು ಅಧಿಕಾರಿಗಳ ತಂಡಗಳನ್ನು ಸಿದ್ಧ ಮಾಡಿ ಗ್ರಾಮಸ್ಥರಿಗೆ ಈ ನಗದು ರಹಿತ ವಹಿವಾಟು ಮಾಡುವುದರ ಬಗ್ಗೆ ತರಬೇತಿ ಕೊಟ್ಟೆವು. ಗ್ರಾಮದ ಬಹುತೇಕ ಮಂದಿ ಆಧಾರ್ ಕಾರ್ಡ್ ಹೊಂದಿದ್ದರು. ಹೀಗಾಗಿ ಆಧಾರ್ ಬೆಂಬಲಿತ ಪೇಮೆಂಟ್ ವ್ಯವಸ್ಥೆಯ ಯಂತ್ರಗಳನ್ನು ನೀಡಲಾಯಿತು. ಆ ಮೂಲಕ ಪ್ರತಿಯೊಬ್ಬ ವ್ಯಕ್ತಿ ತನ್ನ ಬೆರಳಚ್ಚಿನ ಮೂಲಕ ವಹಿವಾಟು ಮಾಡಲು ಸಾಧ್ಯವಾಯಿತು. ಹೀಗೆ ತರಬೇತಿ ಪಡೆದವರು, ಗ್ರಾಮದ ಇತರರಿಗೆ ಮಾಹಿತಿ ನೀಡಿ ಹೇಳಿಕೊಡಲು ಆರಂಭಿಸಿದರು. ಅವರನ್ನು ನಾವು ಡಿಜಿಟಲ್ ಆರ್ಮಿ ಎಂದು ಕರೆದೆವು. ಈ ಗ್ರಾಮದಲ್ಲಿ ಒಟ್ಟು 22 ವ್ಯಾಪಾರಿಗಳಿದ್ದರು. ಅವರೆಲ್ಲರೂ ನಗದು ರಹಿತ ವಹಿವಾಟಿಗೆ ಮುಂದಾದರು.’

ಇನ್ನು ಕೇಂದ್ರ ಸರ್ಕಾರದಿಂದ ಇತರೆ ಪ್ರಶಸ್ತಿ ಪಡೆದ ಜಿಲ್ಲೆಗಳು ಹೀಗಿವೆ… ಸೋಲಾರ್ ಉರ್ಜಾ ಲ್ಯಾಂಪ್ಸ್ ಯೋಜನೆ ಪ್ರಶಸ್ತಿಯನ್ನು ರಾಜಸ್ಥಾನದ ದುಂಗರ್ಪುರ್ ಜಿಲ್ಲೆಗೆ ಸೇರಿತು. ಈ ಗ್ರಾಮದ ಬುಡಕಟ್ಟು ಮಹಿಳೆಯರಿಗೆ ಸೋಲಾರ್ ದೀಪಗಳನ್ನು ತಯಾರಿಸುವುದು ಹಾಗೂ ಸೋಲಾರ್ ರಸ್ತೆ ದೀಪಗಳನ್ನು ಅಳವಡಿಸುವ ಬಗ್ಗೆ ತರಬೇತಿ ನೀಡಲಾಗಿದೆ.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಪ್ರಶಸ್ತಿ ಮಿಜೋರಾಮಿನ ಸಿಯಾಹ ಜಿಲ್ಲೆಗೆ ನೀಡಲಾಗಿದ್ದು, ಈ ಪ್ರಶಸ್ತಿಗೆ ಗುಜರಾತಿನ ಬನಸ್ಕಾಂತ ಜಿಲ್ಲೆಯೂ ಭಾಜನವಾಗಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಪ್ರಶಸ್ತಿ ತ್ರಿಪುರಾದ ಗೋಮತಿ ಹಾಗೂ ಮಹಾರಾಷ್ಟ್ರದ ಜಲ್ನಾ ಜಿಲ್ಲೆಗಳಿಗೆ ಸೇರಿದವು. ಇ-ನಾಮ್ (ಇ-ನ್ಯಾಷನಲ್ ಅಗ್ರಿಕಲ್ಚರ್ ಮಾರ್ಕೆಟ್) ಯೋಜನೆ ಪ್ರಶಸ್ತಿಯನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲ ಹಾಗೂ ಹಿಮಾಚಲ ಪ್ರದೇಶದ ಸೊಲನ್ ಜಿಲ್ಲೆಗೆ ಸೇರಿದೆ.

ದೀನದಯಾಳ್ ಉಪಾಧ್ಯಾಯ್ ಗ್ರಾಮ ಜ್ಯೋತಿ ಯೋಜನೆ ಪ್ರಶಸ್ತಿಯನ್ನು ಅಸ್ಸಾಂನ ಶಿವಸಾಗರ್ ಹಾಗೂ ಬಿಹಾರದ ನಳಂದ ಜಿಲ್ಲೆಗೆ ಸೇರಿತು.

ಕೇಂದ್ರ ಸರ್ಕಾರದ ಈ ಪ್ರಶಸ್ತಿ ಪಡೆಯಲು ಕಳೆದ ವರ್ಷ 74 ಜಿಲ್ಲೆಗಳು ಸ್ಪರ್ಧಿಸಿದ್ದರೆ, ಈ ವರ್ಷ ಇದರ ಸಂಖ್ಯೆ 599ಕ್ಕೆ ಏರಿಕೆಯಾಗಿರುವುದು ವಿಶೇಷ.

Leave a Reply