ಒತ್ತುವರಿ ಜಾಗದಲ್ಲಿ ಅಕ್ರಮವಾಗಿ ಸ್ಥಾಪಿಸಿದ್ದ ಶಿಲುಬೆ ತೆರವು ಮಾಡಿದ್ದು ತಪ್ಪಂತೆ… ಇದು ಕೇರಳ ಮುಖ್ಯಮಂತ್ರಿಯ ಸೆಕ್ಯುಲರ್ ವಾದ

ಡಿಜಿಟಲ್ ಕನ್ನಡ ಟೀಮ್:

ಅರಣ್ಯ ಭೂಮಿ ಅಥವಾ ಸರ್ಕಾರಿ ಜಾಗದಲ್ಲಿ ಒತ್ತವರಿ ಮಾಡಿಕೊಂಡು ಅಕ್ರಮವಾಗಿ ನಿಯಂತ್ರಣ ಸಾಧಿಸಲು ಯಾರೇ ಹೋದರು ಅದನ್ನು ತೆರವುಗೊಳಿಸುವುದು ಅಧಿಕಾರಿಗಳ ಕರ್ತವ್ಯ. ಈ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದ ಕೇರಳದ ಅಧಿಕಾರಿಗಳು ಈಗ ತಮ್ಮ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದಲೇ ಟೀಕೆ ಎದುರಿಸುವಂತಾಗಿದೆ. ಕಾರಣ, ಅಧಿಕಾರಿಗಳು ತೆರವುಗೊಳಿಸಿದ್ದು ಒತ್ತುವರಿಯಾಗಿದ್ದ ಜಾಗದಲ್ಲಿದ್ದ ಅಕ್ರಮ ಶಿಲುಬೆಯನ್ನು.

ಹೌದು, ಕೇರಳದ ಮುನ್ನಾರಿನ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ಸ್ಥಾಪಿಸಲಾಗಿದ್ದ ಕ್ರೈಸ್ತರ ಶಿಲುಬೆಯನ್ನು ಜಿಲ್ಲಾ ಆಡಳಿತ ಅಧಿಕಾರಿಗಳು ತೆರವುಗೊಳಿಸಿದ್ದು, ಈಗ ಇದು ಧಾರ್ಮಿಕ ವಿವಾದವಾಗಿ ಪರಿಣಮಿಸಿದೆ. ಈ ವಿವಾದದಲ್ಲೂ ತಮ್ಮ ಸೆಕ್ಯುಲರ್ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಕೇರಳ ಸಿಎಂ ಪಿಣರಾಯಿ ವಿಜಯನ್.

ಈ ಅರಣ್ಯ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ಯಾವುದೇ ಅನುಮತಿ ಪಡೆಯದೇ 30 ಅಡಿಯ ಶಿಲುಬೆಯನ್ನು ಸ್ಥಾಪಿಸಲಾಗಿದ್ದು, ಆ ಶಿಲುಬೆ ಏಸು ಕ್ರಿಸ್ತನ ಆತ್ಮವನ್ನು ಹೊಂದಿ ಎಂದು ಬಣ್ಣಿಸಿ ಜನರೇ ಅದನ್ನು ಸ್ಥಾಪಿಸಿದ್ದಾರೆ ಎಂದು ಸಮರ್ಥನೆ ಮಾಡಿಕೊಳ್ಳಲಾಗಿತ್ತು. ಅದರೊಂದಿಗೆ ಆ ಜಾಗದ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನ ನಡೆದಿತ್ತು. ಇದೊಂದು ಅಕ್ರಮ ಒತ್ತುವರಿ ಎಂಬುದು ಎಲ್ಲಾ ದಾಖಲೆಗಳಲ್ಲೂ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಇದೊಂದು ಅಕ್ರಮ ಒತ್ತುವರಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಶಿಲುಬೆ ಹಾಗೂ ಪ್ರಾರ್ಥನಾ ಮಂದಿರವನ್ನು ತೆರವುಗೊಳಿಸಿದೆ ಎಂದು ಹೇಳಲಾಗಿದೆ. ಅಧಿಕಾರಿಗಳ ಈ ಕ್ರಮಕ್ಕೆ ಟೀಕೆ ಮಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳೊದಿಷ್ಟು…

‘ಅಧಿಕಾರಿಗಳು ಸರ್ಕಾರದ ಅನುಮತಿ ಇಲ್ಲದೆ ಈ ಕ್ರಮಕ್ಕೆ ಮುಂದಾಗಿದ್ದಾರೆ. ಆ ಶಿಲುಬೆ ಏನು ತಪ್ಪು ಮಾಡಿತ್ತು? ಒಂದು ಸಮುದಾಯದ ಹಲವು ಮಂದಿ ಆ ಶಿಲುಬೆ ಮೇಲೆ ನಂಬಿಕೆ ಇಟ್ಟಿದ್ದರು. ಈ ಕ್ರಮದಿಂದ ಕೇರಳ ಸರ್ಕಾರವು ಆ ಧರ್ಮದ ವಿರೋಧಿ ಎಂಬದು ಬಿಂಬಿತವಾಗುತ್ತಿದೆ.’

ಪಿಣರಾಯಿ ವಿಜಯನ್ ಅವರ ಈ ಮಾತಿನಲ್ಲಿ ಈ ತೆರವು ಕಾರ್ಯದಿಂದ ತಮ್ಮ ಸರ್ಕಾರಕ್ಕೆ ಕಳಂಕ ಅಂಟಿಕೊಂಡು ಬಿಡುತ್ತದೆ ಎಂಬ ಆತಂಕವಿದೆಯೇ ಹೊರತು, ಅಧಿಕಾರಿಗಳ ಕೆಲಸವನ್ನು ಪರಿಗಣಿಸುವ ಮನಸ್ಸು ಇಲ್ಲದಿರುವುದು ಸ್ಪಷ್ಟವಾಗುತ್ತದೆ. ಪಿಣರಾಯಿ ವಿಜಯನ್ ಅವರ ರಾಗಕ್ಕೆ ಕಾಂಗ್ರೆಸ್ ನಂತಹ ಇತರೆ ಪಕ್ಷಗಳು ಧ್ವನಿಗೂಡಿಸಿವೆ.

ಆದರೆ, ಇದೇ ಮಾಕ್ಸ್ ವಾದಿ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ವಿ.ಎಸ್.ಅಚ್ಚುತಾನಂದನ್ ಅವರು ಈ ಅಧಿಕಾರಿಗಳ ಬೆಂಬಲಕ್ಕೆ ನಿಂತಿದ್ದಾರೆ. ‘ಅಕ್ರಮ ಒತ್ತುವರಿಯನ್ನು ಯಾರೇ ಆಗಲಿ, ಯಾವುದೇ ರೂಪದಲ್ಲಿ ಮಾಡಿರಲಿ ತೆರವುಗೊಳಿಸುವುದು ಅನಿವಾರ್ಯ. ಅದು ಶಿಲುಬೆಯೇ ಆಗಿರಲಿ, ಬೇರೆ ರೂಪದಲ್ಲೇ ಆಗಿರಲಿ. ಎಲ್ಲಿ ಅಕ್ರಮವಾಗಿ ಒತ್ತುವರಿಯಾಗಿದೆಯೋ ಅಲ್ಲೆಲ್ಲಾ ಇದೇ ರೀತಿ ಕ್ರಮಕ್ಕೆ ಮುಂದಾಗಬೇಕು’ ಎಂದಿದ್ದಾರೆ.

Leave a Reply