ಸತ್ಯರಾಜ್ ಕ್ಷಮೆ ಒಪ್ಪಿಗೆ- ಹೋರಾಟ ಹಿಂಪಡೆದ ಕನ್ನಡ ಪರ ಸಂಘಟನೆಗಳು, ಏ.28ಕ್ಕೆ ಬಂದ್ ಇಲ್ಲ- ಬಾಹುಬಲಿ ಚಿತ್ರ ಬಿಡುಗಡೆ ಖಚಿತ

ಡಿಜಿಟಲ್ ಕನ್ನಡ ಟೀಮ್:

ಕಾವೇರಿ ವಿಚಾರವಾಗಿ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ತಮಿಳುನಟ ಸತ್ಯರಾಜ್ ಅವರ ಕ್ಷಮೆಯನ್ನು ಕನ್ನಡ ಪರ ಸಂಘಟನೆಗಳು ಸ್ವೀಕರಿಸಿದ್ದು, ನಮ್ಮ ಹೋರಾಟವನ್ನು ಕೈ ಬಿಟ್ಟು ಬಾಹುಬಲಿ2 ಚಿತ್ರದ ಬಿಡುಗಡೆಗೆ ಯಾವುದೇ ಅಡ್ಡಿ ಇಲ್ಲ ಎಂದು ಹೇಳಿದ್ದಾರೆ ವಾಟಾಳ್ ನಾಗರಾಜ್. ಅಷ್ಟೇ ಅಲ್ಲದೆ, ಏ.28 ರಂದು ಕರೆದಿದ್ದ ಬೆಂಗಳೂರು ಬಂದ್ ಅನ್ನು ಹಿಂಪಡೆಯಲಾಗಿದೆ.

ಸತ್ಯರಾಜ್ ಅವರ ಕ್ಷಮೆಯಾಚನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಶ್ನೆ ಮೂಡಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿದ ವಾಟಾಳ್ ನಾಗರಾಜ್, ಹೇಳಿದಿಷ್ಟು…

‘ಸತ್ಯರಾಜ್ ಅವರು ಕ್ಷಮೆ ಕೇಳಿರುವುದರಿಂದ ನಮ್ಮ ಹೋರಾಟವನ್ನು ನಾವು ಹಿಂಪಡೆದಿದ್ದೇವೆ. ಹೀಗಾಗಿ ಏ.28ರಂದು ಬಾಹುಬಲಿ2 ಚಿತ್ರ ಬಿಡುಗಡೆಗೆ ಯಾವುದೇ ಅಡ್ಡಿ ಇಲ್ಲ. ಬೆಂಗಳೂರು ಬಂದ್ ಅನ್ನು ಕೈಬಿಡಲಾಗಿದೆ. ಸತ್ಯರಾಜ್ ಅವರು ಇನ್ನು ಮುಂದೆ ಇಂತಹ ಹೇಳಿಕೆ ನೀಡಬಾರದು. ಒಂದು ವೇಳೆ ಈ ರೀತಿಯಾಗಿ ಹೇಳಿಕೆ ನೀಡಿದರೆ, ಅವರ ಯಾವುದೇ ಚಿತ್ರಗಳನ್ನು ರಾಜ್ಯದಲ್ಲಿ ಬಿಡುಗಡೆ ಮಾಡುವುದಿಲ್ಲ. ಸತ್ಯರಾಜ್ ಅವರ ಕ್ಷಮೆ ಬಗ್ಗೆ ಪ್ರಶ್ನೆ ಮೂಡಿತ್ತಾದರೂ, ಅವರು ವಿಷಾದ ಎಂಬ ಪದ ಬಳಕೆ ಮಾಡಿದ್ದು, ಅದು ಸಂವಿಧಾನಿಕ ಪದವಾಗಿದೆ. ಹೀಗಾಗಿ ಈ ಕ್ಷಮೆಯನ್ನು ನಾವು ಸ್ವೀಕರಿಸಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ಅವರ ಮಾತಿಗೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ ಎಂಬುದು ಅವರಿಗೆ ಮನವರಿಕೆಯಾಗಿದೆ.’

ಇದೇ ವೇಳೆ ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ರದ್ದು ಮಾಡಲಾಗಿದೆ ಎಂಬ ವರದಿಗಳು ಪ್ರಸಾರವಾಗುತ್ತಿವೆ. ಕನ್ನಡದ ಚಕ್ರವರ್ತಿ, ಶ್ರೀನಿವಾಸ ಕಲ್ಯಾಣ ಹಾಗೂ ಶುದ್ಧಿ ಚಿತ್ರಗಳ ಚಿತ್ರೀಕರಣಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ಬಂದಿವೆ. ಈ ವರದಿ ಬರುತ್ತಿದ್ದಂತೆ ಕನ್ನಡ ಪರ ಹೋರಾಟಗಾರರಾದ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ತಮಿಳು ಚಿತ್ರ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳ ಬಳಿ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಸಾ.ರಾ.ಗೋವಿಂದು, ‘ತಮಿಳುನಾಡಿನಲ್ಲಿ ಕನ್ನಡದ ಯಾವುದೇ ಚಿತ್ರ ಪ್ರದರ್ಶನ ಸ್ಥಗಿತವಾಗಿಲ್ಲ. ಒಂದು ವೇಳೆ ಚಿತ್ರಪ್ರದರ್ಶನ ಸ್ಥಗಿತ ಮಾಡಿದ್ದರೆ, ನಮ್ಮ ರಾಜ್ಯದಲ್ಲೂ ತಮಿಳು ಚಿತ್ರ ಪ್ರದರ್ಶನ ನಿಲ್ಲಿಸುತ್ತೇವೆ’ ಎಂದಿದ್ದಾರೆ.

Leave a Reply