ಗಂಗೆಯ ರಕ್ಷಣೆಗೆ ಬರ್ತಿದೆ ವಿಶೇಷ ಸೇನಾ ಪಡೆ..!

ಡಿಜಿಟಲ್ ಕನ್ನಡ ಟೀಮ್:

ಕೋಟ್ಯಂತರ ಭಾರತೀಯರ ಪಾಲಿಗೆ ಗಂಗಾ ನದಿ ಕೇವಲ ನದಿಯಾಗಿ ಉಳಿದಿಲ್ಲ. ಅನೇಕರು ತಾಯಿಯ ರೂಪದಲ್ಲಿ, ದೇವತೆ ರೂಪದಲ್ಲಿ ನೋಡುತ್ತಾರೆ. ಹೀಗಾಗಿ ಸದ್ಯ ಕಲುಷಿತಗೊಂಡಿರುವ ಗಂಗೆಯನ್ನು ಶುದ್ಧಿ ಮಾಡುವುದು ಕೇಂದ್ರ ಸರ್ಕಾರದ ಮುಂದಿರುವ ದೊಡ್ಡ ಸವಾಲು. ಇದನ್ನು ಸಮರ್ಥವಾಗಿ ನಿಭಾಯಿಸಲು ಕೇಂದ್ರ ಸರ್ಕಾರ ಈಗ ವಿಶೇಷ ಹೆಜ್ಜೆಯನ್ನಿಡುವತ್ತ ಗಮನ ಹರಿಸುತ್ತಿದೆ. ಅದೇ, ಗಂಗೆಯ ರಕ್ಷಣೆಗಾಗಿ ವಿಶೇಷ ಸೈನಿಕರ ಪಡೆ ಕಟ್ಟುವುದು! ಅಂದಹಾಗೆ ಇದು ಟೆರೆಟೋರಿಯಲ್ ಸೇನಾ ಪಡೆಯಾಗಿದ್ದು, ಸಶಸ್ತ್ರ ಸೇನಾ ಪಡೆಯಲ್ಲ.

ಈ ಹಿಂದೆ ಬಂದ ಅನೇಕ ಸರ್ಕಾರಗಳು ಗಂಗಾ ನದಿ ಶುದ್ಧೀಕರಣ ಮಾಡುವ ವಿಷಯದಲ್ಲಿ ವಿಫಲವಾಗಿವೆ. 2014ರಲ್ಲಿ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ನರೇಂದ್ರ ಮೋದಿ ಅವರು ಈ ಭರವಸೆ ಕೊಟ್ಟಿದ್ದರು. ಅಲ್ಲದೆ ನದಿ ಶುದ್ಧಿಗಾಗಿ ಈವರೆಗೂ ಕೋಟ್ಯಂತರ ಹಣ ಖರ್ಚು ಮಾಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಗಂಗಾ ನದಿ ಹರಿಯುವ ಬಹುತೇಕ ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದು, ಗಂಗೆಯನ್ನು ಮಲಿನ ಮುಕ್ತವನ್ನಾಗಿ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ. ಇದರ ಭಾಗವಾಗಿ ನದಿ ಹಾಗೂ ಜಲಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಗಂಗೆಯ ರಕ್ಷಣೆಗಾಗಿ ವಿಶೇಷ ಸೇನಾ ಪಡೆ ಕಟ್ಟಲು ನಿರ್ಧರಿಸಿದೆ.

ಈ ಹಿಂದೆ ನಮಾಮಿ ಗಂಗಾ ಯೋಜನೆಯಡಿಯಲ್ಲಿ ಪ್ರದೇಶ ಸೇನಾ ಪಡೆಗಳನ್ನು ಸ್ಥಾಪಿಸಲು ಮುಂದಾಗಿತ್ತಾದರೂ ಕಳೆದ ಫೆಬ್ರವರಿಯಲ್ಲಿ ಆ ಯೋಜನೆ ಕೈಬಿಡಲಾಯಿತು. ಈಗ ಮತ್ತೊಂದು ಆಲೋಚನೆಯೊಂದಿಗೆ ಹೊಸ ಯೋಜನೆ ಸಿದ್ಧವಾಗುತ್ತಿದ್ದು, ಇದನ್ನು ಕಾಂಪೊಸಿಟ್ ಎಕಲಾಜಿಕಲ್ ಟಾಸ್ಕ್ ಫೋರ್ಸ್ (ಸಿಇಟಿಎಫ್) ಎಂದು ಕರೆಯಲಾಗಿದೆ. ಸದ್ಯಕ್ಕೆ ಗಂಗಾ ನದಿ ಶುದ್ಧೀಕರಣ ರಾಷ್ಟ್ರೀಯ ಮಿಷನ್ ವೆಬ್ ಸೈಟಿನಲ್ಲಿ ಪ್ರಕಟವಾಗಿರುವ ದಾಖಲೆಗಳ ಪ್ರಕಾರ, ನದಿ ಶುದ್ಧಿಗಾಗಿಯೇ ಸೈನಿಕರ ಪಡೆಯನ್ನು ಕಟ್ಟಿ ನದಿ ರಕ್ಷಣೆಯ ಜವಾಬ್ದಾರಿಯನ್ನು ಅದಕ್ಕೆ ವಹಿಸುವ ಚಿಂತನೆ ನಡೆಯುತ್ತಿದೆ. ಇದಕ್ಕಾಗಿ ₹ 167 ಕೋಟಿ ವೆಚ್ಚ ತಗಲುವುದಾಗಿ ಅಂದಾಜಿಸಲಾಗಿದೆ.

ಈ ಯೋಜನೆ ಏನು? ಎಂದು ನೋಡುವುದಾದರೆ, ಸದ್ಯ ಪ್ರಾಯೋಗಿಕ ಹಂತವಾಗಿ ಒಂದು ವಿಶೇಷ ಸೇನಾ ಪಡೆ ರಚಿಸುವುದು. ನಂತರ ಈ ಪಡೆಗೆ ಗಂಗಾ ನದಿ ಶುದ್ಧೀಕರಣಕ್ಕೆ ಸಂಬಂಧಿಸಿದ ಚಟುವಟಿಕೆಗಳ ಜವಾಬ್ದಾರಿಯನ್ನು ನೀಡುವುದು. ಈ ನದಿಗೆ ಸಂಬಂಧಿಸಿದಂತೆ ಪರಿಸರಕ್ಕೆ ಅನುಕೂಲವಾದ ಯೋಜನೆ, ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ನದಿ ಸ್ವಚ್ಛತೆ ಕಾಪಾಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಜವಾಬ್ದಾರಿ ಈ ಸೈನಿಕ ಪಡೆಯದ್ದಾಗಿದೆ.

ಇವುಗಳ ಜತೆಗೆ ಈ ನದಿ ಪಾತ್ರದ ಪ್ರದೇಶಗಳಲ್ಲಿ ಮರ ನೆಡುವುದು, ಮಣ್ಣಿನ ಸವೆತ ತಡೆಯುವುದು, ಜೈವಿಕ ವೈವಿದ್ಯತೆ ಸಂರಕ್ಷಣೆ ಹಾಗೂ ನದಿ ಪಾತ್ರದ ಸ್ಮೂಕ್ಷ್ಮ ಪ್ರದೇಶಗಳ ರಕ್ಷಣೆ, ನದಿಯ ಮಾಲಿನ್ಯ ಪ್ರಮಾಣದ ಬಗ್ಗೆ ಗಮನಹರಿಸುವುದು. ಮಾಲಿನ್ಯ ತಡೆಗಟ್ಟಲು ಸರ್ಕಾರಕ್ಕೆ ಸಲಹೆ ನೀಡುವುದು. ನದಿ ಪ್ರಾತ್ರದ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ಸ್ಮಶಾಣಗಳ ನಿರ್ವಹಣೆಗೆ ನೆರವು ನೀಡುವುದು. ಈ ಪ್ರದೇಶದಲ್ಲಿ ನೈಸರ್ಗಿಕ ವಿಕೋಪ ಹಾಗೂ ಪ್ರವಾಹದ ಪರಿಸ್ಥಿತಿಯಲ್ಲಿ ನೆರವಾಗುವುದು ಹೀಗೆ ಅನೇಕ ಜವಾಬ್ದಾರಿಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಈ ವಿಶೇಷ ಸೇನಾ ಪಡೆ ಕಟ್ಟಲಾಗುತ್ತಿದೆ.

Leave a Reply